ಕನ್ನಡಪ್ರಭ ವಾರ್ತೆ ಮಧುಗಿರಿ
ಹೈ ಕಮಾಂಡ್ ಸೂಚನೆಯಂತೆ ಈ ಕೂಡಲೇ ವಜಾ ಮಾಡಿರುವ ಆದೇಶವನ್ನು ಸಿಎಂ ಹಿಂಪಡೆದು ಮತ್ತೆ ರಾಜಣ್ಣರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಅಭಿಮಾನಿಗಳು ಕೆ.ಎನ್.ರಾಜಣ್ಣರ ಪೋಟೋ ಕೈಯಲ್ಲಿ ಹಿಡಿದು ಜೈಕಾರ ಹಾಕುತ್ತಾ ನ್ಯಾಯ ದೊರಕಿಸಿಕೊಡಬೇಕು ಎಂದು ಬೆಂಬಲಿಗರು ಒತ್ತಾಯಿಸಿದರು.
ಕೆಪಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಬಹುತೇಕ ಗ್ರಾಪಂ ಅಧ್ಯಕ್ಷರು, ಸದಸ್ಯರು ಕಾಂಗ್ರೆಸ್ ಪಕ್ಷದ ವಿವಿಧ ಹಂತದ ಪದಾಧಿಕಾರಿಗಳು, ಅಪಾರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಪಟ್ಟಣದ ಎಂಎನ್ಕೆ ಸಮುದಾಯ ಭವನದಲ್ಲಿ ಸಮಾವೇಶಗೊಂಡು ಅಲ್ಲಿಂದ ಅಹಿಂದ ನಾಯಕ ಕೆ.ಎನ್.ರಾಜಣ್ಣ ಅವರಿಗೆ ಒಂದು ನೋಟಿಸ್ ಸಹ ನೀಡದೆ ಏಕಾಏಕಿ ಸಂಪುಟದಿಂದ ಕೈ ಬಿಟ್ಟಿರುವುದು ಅಹಿಂದ ವರ್ಗದ ಮಾಸ್ ಲೀಡರ್‌ಗೆ ಹಾಗೂ ಆಹಿಂದ ವರ್ಗಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಹೈಕಮಾಂಡ್ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.ಕೆಪಿಸಿಸಿ ಸದಸ್ಯ ಎಂ.ಎಸ್.ಮಲ್ಲಿಕಾರ್ಜುನಯ್ಯ ಮಾತನಾಡಿ, ಕೆ.ಎನ್.ರಾಜಣ್ಣನವರಿಗಾಗಿ ಸರ್ವ ತ್ಯಾಗ ಮಾಡಲು ಸಿದ್ದರಿದ್ದೇವೆ. ನಮ್ಮ ನಾಯಕರಿಗೆ ಇಲ್ಲದ ಸ್ಥಾನ ಮಾನ ನಮಗೂ ಬೇಡ. ಜೆಡಿಎಸ್ ಭದ್ರಕೋಟೆಯಾಗಿದ್ದ ಮಧುಗಿರಿ ಕ್ಷೇತ್ರವನ್ನು ಭೇದಿಸಿ ಕಾಂಗ್ರೆಸ್ ಕೋಟೆ ಕಟ್ಟಿದ್ದೇವೆ. ನಾವು ಪಕ್ಷದ ಮನೆಯ ಮಕ್ಕಳು, ಆದ್ದರಿಂದ ಕೆ.ಎನ್.ರಾಜಣ್ಣನವರಿಗೆ ಮತ್ತೆ ಮರಳಿ ಸಂಪುಟದಲ್ಲಿ ಸ್ಥಾನ ಕೊಡಬೇಕು. ಇದರಿಂದ ಅಹಿಂದ ವರ್ಗದ ಜನರ ಹಿತ ಕಾಪಾಡಿದಂತಾಗುತ್ತದೆ ಎಂದು ವರಿಷ್ಠರಿಗೆ ಮನವಿ ಮಾಡಿದರು.
ಜಿಪಂ.ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ ಮಾತನಾಡಿ, ಕೆ.ಎನ್.ರಾಜಣ್ಣರನ್ನು ಏಕಾಏಕಿ ವಜಾ ಮಾಡಿರುವುದು ಮಧುಗಿರಿ ಕ್ಷೇತ್ರದ ಜನತೆಗೆ ನೋವು ತಂದಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬೀಳಲಿದೆ. 2004ರಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಎನ್.ರಾಜಣ್ಣ ಅವರನ್ನು ಉಚ್ಛಾಟಿಸಿದಾಗ ಅವರು ಜೆಡಿಎಸ್ ಸೇರಿದ್ದರು. ಅಂದು ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿ 13 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದರು. ಹಾಗಾಗಿ ಕಾಂಗ್ರೆಸ್ ಬೆಂಬಲಿಸುವ ಅಹಿಂದ ಮತದಾರರಿದ್ದಾರೆ. ಇದನ್ನು ಮನಗಂಡು ವರಿಷ್ಠರು ಪರಿಶೀಲಿಸಿ ಮತ್ತೆ ರಾಜಣ್ಣರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆದಿ ನಾರಾಯಣರೆಡ್ಡಿ, ಗೋಪಾಲಯ್ಯ, ಕೆಪಿಸಿಸಿ ಮೆಂಬರ್ ಸಿದ್ದಾಪುರ ರಂಗಶ್ಯಾಮಯ್ಯ, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಉಪಾಧ್ಯಕ್ಷೆ ಸುಜಾತ ಶಂಕರ ನಾರಾಯಣ್, ಸದಸ್ಯರಾದ ಎಂ.ವಿ.ಗೋವಿಂದರಾಜು, ಮಂಜುನಾಥ ಆಚಾರ್, ಎಸ್‌ಬಿಟಿ ರಾಮು, ಆಲೀಮ್,ನಾಸೀಮಾ ಭಾನು,ಮುಖಂಡರಾದ ಎಂ.ಕೆ.ನಂಜುಂಡರಾಜು, ಆಯೂಬ್, ಬಾಬಾ ಫಕೃದ್ಧೀನ್, ಸುವರ್ಣಮ್ಮ, ಇಂದಿರಾ, ಎಂ.ಎಸ್.ಶಂಕರನಾರಾಯಣ, ಲಕ್ಷ್ಮೀನಾರಾಯಣ, ವಕೀಲ ನಾರಾಯಣಗೌಡ. ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಜಗದೀಶ್ ಕುಮಾರ್. ಕೆಜಿಹಳ್ಳಿ ವೆಂಕಟೇಶ್ ಹಾಗೂ ಅಪಾರ ಬೆಂಬಲಿಗರು ,ಅಭಿಮಾನಿಗಳು ಹಾಗೂ ಹಿತೈಷಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.