ರೈತರ ಬೇಡಿಕೆಗಳಿಗೆ ಸ್ಪಂದಿಸುವವರಿಗೆ ರೈತ ಸಂಘದ ಬೆಂಬಲ

KannadaprabhaNewsNetwork | Published : May 2, 2024 12:16 AM

ಸಾರಾಂಶ

ರೈತರ ಸಮಸ್ಯೆಗಳನ್ನೊಳಗೊಂಡ ಪ್ರಣಾಳಿಕೆ ಸಿದ್ಧಪಡಿಸಲಾಗಿದ್ದು, ಈ ಪ್ರಣಾಳಿಕೆ ಸೂಕ್ತ ನ್ಯಾಯ ಒದಗಿಸುವ ಪಕ್ಷಕ್ಕೆ ಬೆಂಬಲ ನೀಡುತ್ತೇವೆ. ಈ ಬಗ್ಗೆ ಮೇ ೨ರಂದು ಬ್ಯಾಡಗಿಯಲ್ಲಿ ನಡೆಯುವ ಸಂಘದ ಮುಖಂಡರ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದ್ದಾರೆ.

ಹಾವೇರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಅದನ್ನು ಈಡೇರಿಸುವ ನಿಟ್ಟಿನಲ್ಲಿ ಯಾರು ಪ್ರಾಮಾಣಿಕವಾಗಿ ಸ್ಪಂದಿಸುತ್ತಾರೋ ಅವರಿಗೆ ನಾವು ಬೆಂಬಲ ಘೋಷಿಸುತ್ತೇವೆ. ಇಲ್ಲದಿದ್ದರೆ ನೋಟಾ ಚಲಾವಣೆ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಸಂಘಟನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಹಾಕಲು ರೈತರು ಬೇಕು. ಆದರೆ, ಅವರಿಗೆ ಸಂಕಷ್ಟ ಬಂದಾಗ ಕೇಂದ್ರ, ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ಬರ ಆವರಿಸಿದ್ದರಿಂದ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಹೋರಾಟ ಮಾಡಿದ್ದೇವೆ. ರಾಜ್ಯ ಸರ್ಕಾರ ₹೧೮ ಸಾವಿರ ಕೋಟಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿತ್ತು. ಈಗ ಕೇಂದ್ರ ಸರ್ಕಾರ ಎಸ್‌ಡಿಆರ್‌ಎಫ್ ನಿಯಮದ ಪ್ರಕಾರ ₹೩೪೫೪ ಕೋಟಿ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವೂ ಅಷ್ಟೇ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಿ ರೈತರಿಗೆ ಬೆಳನಷ್ಟ ಪರಿಹಾರ ನೀಡಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ನಾವು ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ಎಚ್ಚರಿಸಿದರು.

ಬೆಳೆನಷ್ಟವಾಗಿದ್ದರೂ ಈ ವರೆಗೂ ಸರಿಯಾಗಿ ಬೆಳೆವಿಮೆ ಹಣ ಬಿಡುಗಡೆ ಆಗಿಲ್ಲ. ಸರ್ಕಾರಗಳು ಬರೀ ಚುನಾವಣೆ ಗುಂಗಿನಲ್ಲಿವೆ. ನದಿಗಳಿಂದ ಕೆರೆ ತುಂಬಿಸುವ ಯೋಜನೆಗಳು ಮಂದಗತಿಯಲ್ಲಿ ಸಾಗಿದ್ದು, ಬರಗಾಲ ತಡೆಯಬೇಕಾದರೆ ಕೆರೆಗಳಿಗೆ ನೀರು ತುಂಬಿಸುವುದು ಅಗತ್ಯ. ಹೀಗಾಗಿ ಕೆರೆ ತುಂಬಿಸುವ ಯೋಜನೆಗಳಿಗೆ ಚುರುಕು ಮುಟ್ಟಿಸಬೇಕು. ರಾಜ್ಯ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲು ಅರ್ಜಿ ಸ್ವೀಕರಿಸುತ್ತಿಲ್ಲ, ಟಿಸಿಗಳನ್ನು ಒದಗಿಸುತ್ತಿಲ್ಲ. ಹೀಗಾಗಿ ರೈತರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಈ ನಿಟ್ಟಿನಲ್ಲಿ ರೈತರ ಸಮಸ್ಯೆಗಳನ್ನೊಳಗೊಂಡ ಪ್ರಣಾಳಿಕೆ ಸಿದ್ಧಪಡಿಸಲಾಗಿದ್ದು, ಈ ಪ್ರಣಾಳಿಕೆ ಸೂಕ್ತ ನ್ಯಾಯ ಒದಗಿಸುವ ಪಕ್ಷಕ್ಕೆ ಬೆಂಬಲ ನೀಡುತ್ತೇವೆ. ಈ ಬಗ್ಗೆ ಮೇ ೨ರಂದು ಬ್ಯಾಡಗಿ ಪಟ್ಟಣದಲ್ಲಿ ಸಂಘದ ಮುಖಂಡರ ಸಭೆ ಕರೆಯಲಾಗಿದ್ದು, ಅಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಎರಡೂ ಪಕ್ಷದವರು ಚಿಪ್ಪು, ಚೊಂಬು ಹಿಡಿದು ಮಾತನಾಡುತ್ತಿದ್ದಾರೆ. ರೈತರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಾವು ಬಿಡುಗಡೆ ಮಾಡುವ ಪ್ರಣಾಳಿಕೆ ಕುರಿತು ಯಾರು ಸ್ಪಂದಿಸುತ್ತಾರೋ ಅವರಿಗೆ ಬೆಂಬಲ ನೀಡುತ್ತೇವೆ. ಇಲ್ಲದಿದ್ದರೆ ನೋಟಾಕ್ಕೆ ಮತ ಚಲಾಯಿಸುವ ಬಗ್ಗೆಯೂ ಚಿಂತನೆ ಮಾಡಿದ್ದೇವೆ. ಅದಕ್ಕಾಗಿ ಮೇ ೨ರಂದು ಮೋಟೆಬೆನ್ನೂರಿನಲ್ಲಿ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು.

ರೈತ ಮುಖಂಡರಾದ ಮರಿಗೌಡ ಪಾಟೀಲ, ಶಿವಬಸಪ್ಪ ಗೋವಿ, ಸುರೇಶ ಚಲವಾದಿ, ಮಂಜುನಾಥ ಕದಂ, ರಾಜು ತರ್ಲಘಟ್ಟ, ಶಂಕರಗೌಡ ಶಿರಗಂಬಿ, ಯಶ್ವಂತ ಯಡಗೋಡಿ, ಸೋಮಣ್ಣ ಜಡೇಗೌಡ್ರ, ಮಂಜುಗೌಡ ಸಣ್ಣಗೌಡ್ರ, ಗುತ್ತಪ್ಪ ಶಿಗ್ಗಾವಿ, ಚನ್ನಪ್ಪ ಮರಡೂರ, ಶಿವಯೋಗಿ ಹೊಸಗೌಡ್ರ ಇತರರು ಇದ್ದರು.

Share this article