ವಿಜಯಪುರ: ಗ್ರಾಪಂ ಸದಸ್ಯರಿಗೆ ಕೇರಳ ಮಾದರಿಯಲ್ಲಿ ಸೌಲಭ್ಯ ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ತಾವು ನಡೆಸುತ್ತಿರುವ ಹೋರಾಟ ಫಲ ನೀಡುತ್ತಿದ್ದು, ತಮ್ಮ ಆಗ್ರಹಕ್ಕೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸದನದ ಒಳಗೆ ಮತ್ತು ಹೊರಗೆ ನಡೆಸಿದ ಹೋರಾಟದ ಫಲವಾಗಿ ಗ್ರಾ.ಪಂ ಸದಸ್ಯರಿಗೆ ನೀಡಲಾಗುತ್ತಿದ್ದ ಗೌರವಧನವನ್ನು ಸರ್ಕಾರ ಹೆಚ್ಚಳ ಮಾಡಿದೆ. ಈ ಮುಂಚೆ ಗ್ರಾಪಂ ಅಧ್ಯಕ್ಷರಿಗೆ ₹ 3000, ಉಪಾಧ್ಯಕ್ಷರಿಗೆ ದೊರೆಯುತ್ತಿದ್ದ ₹ 2000 ಮತ್ತು ಸದಸ್ಯರಿಗೆ ಸಿಗುತ್ತಿದ್ದ ₹1000 ಗೌರವಧನವನ್ನು ಸಿಗುತ್ತಿತ್ತು. ಆದರೆ, ನನ್ನ ನಿರಂತರ ಹೋರಾಟದ ಫಲವಾಗಿ ಈಗ ಗ್ರಾಪಂ ಅಧ್ಯಕ್ಷರಿಗೆ ₹ 6000, ಉಪಾಧ್ಯಕ್ಷರಿಗೆ ₹4000 ಮತ್ತು ಸದಸ್ಯರಿಗೆ ₹ 2000 ಗೌರವ ಧನ ಸಿಗುತ್ತಿದೆ. ಆದರೂ, ಇದು ನಮಗೆ ಸಂತೃಪ್ತಿ ತಂದಿಲ್ಲ. ಈ ಹಿನ್ನೆಲೆಯಲ್ಲಿ ಕೇರಳ ಮಾದರಿಯಲ್ಲಿ ಅಧ್ಯಕ್ಷರಿಗೆ ₹15000, ಉಪಾಧ್ಯಕ್ಷರಿಗೆ ₹ 12000 ಮತ್ತು ಸದಸ್ಯರಿಗೆ ₹ 7000 ಗೌರವಧನ ನೀಡುವಂತೆ ಒತ್ತಾಯಿಸುತ್ತಲೇ ಬಂದಿದ್ದೇನೆ. ನನ್ನ ಈ ಬೇಡಿಕೆಗೆ ವಿಧಾನ ಪರಿಷತ್ತಿನ ಎಲ್ಲ ಶಾಸಕರು ಪಕ್ಷಾತೀತವಾಗಿ ಬೆಂಬಲ ನೀಡುತ್ತಿದ್ದಾರೆ. ಸರ್ಕಾರವೂ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವ ಸಂಪೂರ್ಣ ವಿಶ್ವಾವಿದೆ. ಅಲ್ಲದೇ, ಪ್ರಸಕ್ತ ಬೆಳಗಾವಿ ಅಧಿವೇಶನದಲ್ಲಿಯೂ ಈ ವಿಷಯ ಚರ್ಚೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.ಅಷ್ಟೇ ಅಲ್ಲ, ಇತ್ತೀಚೆಗೆ ನಾನು ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ನಾನಾ ತಾಲೂಕುಗಳಲ್ಲಿ ನಡೆಸಿದ ಆಡಳಿತಾತ್ಮಕ ಅಹವಾಲು ಸಭೆಯಲ್ಲಿ ಸ್ವೀಕರಿಸಿದ ಬೇಡಿಕೆಗಳ ಬಗ್ಗೆಯೂ ಸದನದಲ್ಲಿ ಪ್ರಸ್ತಾಪಿಸಿದ್ದೇನೆ. 15ನೇ ಹಣಕಾಸು ಯೋಜನೆಯಡಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ. ಮುಂಬರುವ ದಿನಗಳಲ್ಲಿಯೂ ಗ್ರಾಪಂ ಸದಸ್ಯರ ಹಿತ ಕಾಯಲು ಬದ್ಧನಾಗಿದ್ದೇನೆ ಎಂದು ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.