ದಾಬಸ್‍ಪೇಟೆ: ಶಿಕ್ಷಕರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎ.ಪಿ.ರಂಗನಾಥ್ ಗೆಲುವಿಗಾಗಿ ಅವರ ಪತ್ನಿ ನಂದಿನಿ ರಂಗನಾಥ್ ಶಿಕ್ಷಕರನ್ನು ಭೇಟಿಯಾಗಿ ಮತಯಾಚಿಸಿದರು.
ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಲು ಶಿಕ್ಷಕರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎ.ಪಿ.ರಂಗನಾಥ್ ಅವರಿಗೆ ಒಂದು ಅವಕಾಶ ಮಾಡಿಕೊಡಬೇಕು. ನನ್ನ ಪತಿಯವರಿಗೆ ಮೊದಲ ಚುನಾವಣೆಯಲ್ಲಿ ಸೋಲಾಯಿತು. ಎರಡನೇ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿಯಾಗಿ ಅತ್ಯಲ್ಪ ಮತಗಳಿಂದ ಸೋತರು. ಈ ಬಾರಿ ಅವಕಾಶ ಮಾಡಿಕೊಡಬೇಕು ಎಂದು ನಂದಿನಿ ಮನವಿ ಮಾಡಿದರು.
ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗುವ ಭರವಸೆ: ಶಿಕ್ಷಕರು ಸಮಾಜದ ಬೆನ್ನೆಲುಬು. ಆದರೆ ಇಂದು ಅವರು ವೇತನ ತಾರತಮ್ಯ, ಸೌಲಭ್ಯಗಳ ಕೊರತೆ ಸೇರಿದಂತೆ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೇವಲ ರಾಜಕೀಯ ಲಾಭಕ್ಕಾಗಿ ಬಂದು ಹೋಗುವವರಿಗಿಂತ, ಶಿಕ್ಷಕರ ಪರವಾಗಿ ಪ್ರಾಮಾಣಿಕವಾಗಿ ಹೋರಾಡುವ ಗುಣ ಎ.ಪಿ.ರಂಗನಾಥ್ ಅವರಿಗಿದೆ. ಸದನದಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡಲು ಅವರಿಗೆ ಒಂದು ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರು.ಈ ಸಂದರ್ಭದಲ್ಲಿ ನೆಲಮಂಗಲ ತಾಲೂಕು ಖಾಸಗಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸೇಗೌಡ, ವಿವಿಧ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಹಾಜರಿದ್ದರು.
ನೆಲಮಂಗಲ ತಾಲೂಕಿನ ವಿವಿಧ ಶಾಲಾ-ಕಾಲೇಜುಗಳಿಗೆ ಎನ್‌ಡಿಎ ಅಭ್ಯರ್ಥಿ ರಂಗನಾಥ್ ಪತ್ನಿ ನಂದಿನಿ ರಂಗನಾಥ್ ಭೇಟಿ ನೀಡಿ ಪತಿ ಪರ ಮತಯಾಚಿಸಿದರು.