ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ಗೆ ನಮ್ಮ ಬೆಂಬಲ ಎಂದು ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮೇಯರ್ ನಾರಾಯಣ ತಿಳಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಗುತ್ತಿಗೆ ಪದ್ಧತಿ ಕೆಲಸ ರದ್ದು ಮಾಡಿ ಸ್ಥಳೀಯ ಸಂಸ್ಥೆಗಳ ಮೂಲಕ ನೇರ ವೇತನ ಜಾರಿ ಮಾಡಿದ್ದಾರೆ. ಪೌರಕಾರ್ಮಿಕರಿಗೆ ಬೆಳಗಿನ ಉಪಹಾರವನ್ನು ಎಲ್ಲಾ ಸ್ಥಳೀಯ ಸಂಸ್ಥೆಗಳ ಮೂಲಕ ಜಾರಿ ಮಾಡುವಂತೆ ಸರ್ಕಾರದಿಂದ ಆದೇಶವನ್ನು ತಂದಿರುತ್ತಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕನಿಷ್ಠ ವೇತನ 7 ಸಾವಿರದಿಂದ 17 ಸಾವಿರ ರು. ವೇತನವನ್ನು ಹೆಚ್ಚಳ ಮಾಡಿರುತ್ತಾರೆ ಎಂದರು.ದೇಶದ ಯಾವುದೇ ರಾಜ್ಯದಲ್ಲಿ ಪೌರಕಾರ್ಮಿಕರಿಗೆ ಘೋಷಣೆಯಾಗದೇ ಇರುವಂತಹ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತಂದಿದೆ. ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಪೌರಕಾರ್ಮಿಕರ ಪಾದಪೂಜೆ ಮಾಡಿದರು. ನಮಗೆ ಪಾದ ಪೂಜೆ ಬೇಕಿಲ್ಲ. ಬದಲಿಗೆ ಸ್ವಾಭಿಮಾನದ ಬದುಕು ಕೊಡಿ. ದೇಶದಲ್ಲಿ ೧೨ ಲಕ್ಷ ಸಫಾಯಿ ಕರ್ಮಚಾರಿಗಳಿದ್ದಾರೆ. ಇವರಿಗೆ ಯಾವುದೇ ಉದ್ಯೋಗ, ಸಾಮಾಜಿಕ ಭದ್ರತೆ ಇಲ್ಲ. ವಾಸ ಮಾಡಲು ಮನೆ. ಕನಿಷ್ಟ ವೇತನ ಸಿಗುತ್ತಿಲ್ಲ ಎಂದು ಆರೋಪಿಸಿದರು. ಪೌರಕಾರ್ಮಿಕರ ಹಿತ ಕಾಪಾಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ರಾಜ್ಯಾದ್ಯಂತ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.ನಮ್ಮ ಮನವಿಯನ್ನು ಪುರಸ್ಕರಿಸಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶಂಕರ ಅಂಕನಶೆಟ್ಟಿಪುರ ನಾಮಪತ್ರ ವಾಪಸ್ ಪಡೆದಿದ್ದಾರೆ. ಮುಂದೆ ಇವರಿಗೆ ಕರ್ಮಚಾರಿ ಆಯೋಗದದಲ್ಲಿ ಸದಸ್ಯರನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಣ್ಣ, ಕೊಳಚೆ ನಿರ್ಮೂಲನ ಮಂಡಳಿ ಮಾಜಿ ಅಧ್ಯಕ್ಷ ಆರ್.ದಾಸ್, ಪುರಸಭಾ ಮಾಜಿ ಅಧ್ಯಕ್ಷ ಚೆಲುವರಾಜು, ಸಂಘಸೇನಾ, ಶಂಕರ ಅಂಕನಶೆಟ್ಟಿಪುರ, ನಾಗರಾಜು ಇದ್ದರು.