ಮಂಗಳೂರಿನ ವೈಭವ ಮರುಕಳಿಸಲು ಬೆಂಬಲಿಸಿ: ಪದ್ಮರಾಜ್‌

KannadaprabhaNewsNetwork |  
Published : Apr 22, 2024, 02:16 AM IST
ಉಳ್ಳಾಲದಲ್ಲಿ ರೋಡ್‌ ಶೋ ವೇಳೆ ಪದ್ಮರಾಜ್ ಪೂಜಾರಿ ಅವರಿಗೆ ಕ್ರೇನ್‌ ಮೂಲಕ ಬೃಹತ್‌ ಮಾಲೆ ಹಾಕಿ ಸ್ವಾಗತಿಸಲಾಯಿತು. | Kannada Prabha

ಸಾರಾಂಶ

ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ ಬಳಿ ಕ್ರೇನ್ ಮೂಲಕ ಬೃಹತ್ ಹೂಮಾಲೆಯನ್ನು ಪದ್ಮರಾಜ್ ಅವರಿಗೆ‌ ಹಾಕಲಾಯಿತು. ನಂತರ ಅಬ್ಬಕ್ಕ ವೃತ್ತದವರೆಗೆ ರೋಡ್ ಶೋ ಮುಂದುವರಿಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ನಮ್ಮ ಭವಿಷ್ಯ, ಮಕ್ಕಳ ಜೀವನವನ್ನು ನಿರ್ಧರಿಸುವ ಚುನಾವಣೆ ಮತ್ತೊಮ್ಮೆ ಬಂದಿದೆ. ಅಭಿವೃದ್ಧಿಯ ವೈಭವದಿಂದ ಮೆರೆಯುತ್ತಿದ್ದ ಮಂಗಳೂರನ್ನು, ದಕ್ಷಿಣ ಕನ್ನಡ ಜಿಲ್ಲೆಯನ್ನು ಮತ್ತೆ ಆ ವೈಭವಕ್ಕೆ ಕೊಂಡೊಯ್ಯುವ ಅಗತ್ಯವಿದೆ. ಅದಕ್ಕಾಗಿ ಬೆಂಬಲ ನೀಡಿ ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್. ಪೂಜಾರಿ ಹೇಳಿದ್ದಾರೆ.ತೋಡಾರಿನಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಎಂದೂ ಜಾತಿ, ಧರ್ಮದ ಆಧಾರದಲ್ಲಿ ಚುನಾವಣೆ ಎದುರಿಸಿಲ್ಲ. ಅಭಿವೃದ್ಧಿ ವಿಚಾರವಾಗಿ ಮಾತ್ರ ಚುನಾವಣೆ ಎದುರಿಸಿ ಉತ್ತಮ ಆಡಳಿತ ನೀಡಿದೆ. 40 ವರ್ಷಗಳ ಕಾಲ ಕಾಂಗ್ರೆಸ್‌ ಸಂಸದರು ಜಿಲ್ಲೆಗೆ ನೀಡಿದ ಅನೇಕ ಯೋಜನೆಗಳಿಂದಾಗಿ ದ.ಕ. ಈ ಮಟ್ಟಕ್ಕೆ ಬೆಳೆದಿರುವುದೇ ಅದಕ್ಕೆ ಸಾಕ್ಷಿ. ನಂತರ 33 ವರ್ಷ ಆಡಳಿತ ಮಾಡಿದ ಬಿಜೆಪಿ ಸಂಸದರು ಜಿಲ್ಲೆಗೆ ನೀಡಿದ ಕೊಡುಗೆ ಏನೂ ಇಲ್ಲ. ಮತ್ತೆ ಈ ಜಿಲ್ಲೆ ಹಳೆಯ ವೈಭವದ ಅಭಿವೃದ್ಧಿಯ ದಿನಗಳನ್ನು ಕಾಣಬೇಕಾಗಿದೆ ಎಂದರು.ಪದ್ಮರಾಜ್‌ ಸಮರ್ಥ ಅಭ್ಯರ್ಥಿ:

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ನಾನು ಶಾಸಕನಾಗಿದ್ದಾಗಲೇ ಹೊಸಬರಿಗೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದೆ. ಇದೀಗ ಯುವಕನಿಗೆ, ವಕೀಲನಿಗೆ ಅವಕಾಶ ನೀಡಲಾಗಿದೆ. ಪದ್ಮರಾಜ್‌ ಸಮರ್ಥ ಅಭ್ಯರ್ಥಿ ಮಾತ್ರವಲ್ಲ, ಎಲ್ಲರೂ ಗೌರವಿಸುವಂತಹ ಅಭ್ಯರ್ಥಿಯೂ ಆಗಿದ್ದಾರೆ. ಅವರನ್ನು ಸಂಸತ್ತಿಗೆ ಕಳುಹಿಸಿಕೊಡುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಮಿಥುನ್ ರೈ ಮಾತನಾಡಿದರು. ಜಿಲ್ಲಾ ವಕ್ಫ್ ಅಧ್ಯಕ್ಷ ಅಬ್ದುಲ್ ಸಲಾಂ ತೋಡಾರ್, ರಾಜೇಶ್ ಅಡ್ಲಕೆರೆ, ಚಂದ್ರಹಾಸ್ ಸಾಧು ಸನಿಲ್, ಮೂಡುಬಿದಿರೆ ಉಸ್ತುವಾರಿ ಗುರುರಾಜ್, ಬ್ಲಾಕ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ನಜೀರ್, ಇಸಾಕ್ ಹಾಜಿ, ಲತೀಫ್, ಆಸೀಫ್ ಇದ್ದರು.

ಉಳ್ಳಾಲದಲ್ಲಿ ಭರ್ಜರಿ ರೋಡ್ ಶೋ:

ಉಳ್ಳಾಲ ವಿಧಾನಸಭಾ ಕ್ಷೇತ್ರದ ಕೊಲ್ಯದಿಂದ ಅಬ್ಬಕ್ಕ ಸರ್ಕಲ್‌ವರೆಗೆ ಕಾಂಗ್ರೆಸ್ ಬೃಹತ್ ರೋಡ್ ಶೋ ನಡೆಸಿತು. ತುಳು ಸೊಗಡಿನ ಹುಲಿ ಕುಣಿತ, ಗೊಂಬೆ ಕುಣಿತದೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ ಅಭ್ಯರ್ಥಿ ಪದ್ಮರಾಜ್‌ ಪೂಜಾರಿ ಸೇರಿದಂತೆ ಪ್ರಮುಖರು ತೆರೆದ ವಾಹನದಲ್ಲಿ ಸಾಗಿ ಗಮನ ಸೆಳೆದರು.

ಮಲಯಾಳಕೋಡಿ ಶ್ರೀ ಮಲಯಾಳ ಚಾಮುಂಡಿ ಬಂಟ ಮುಂಡತ್ತಾಯ ದೈವಸ್ಥಾನ ಹಾಗೂ ಕೊಲ್ಯ ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ, ರೋಡ್ ಶೋಗೆ ಚಾಲನೆ ನೀಡಲಾಯಿತು.

ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ ಬಳಿ ಕ್ರೇನ್ ಮೂಲಕ ಬೃಹತ್ ಹೂಮಾಲೆಯನ್ನು ಪದ್ಮರಾಜ್ ಅವರಿಗೆ‌ ಹಾಕಲಾಯಿತು. ನಂತರ ಅಬ್ಬಕ್ಕ ವೃತ್ತದವರೆಗೆ ರೋಡ್ ಶೋ ಮುಂದುವರಿಯಿತು.

ಮಾಜಿ ಸಿಎಂ ವೀರಪ್ಪ ಮೊಯಿಲಿ, ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಸಿನಿಮಾ ನಟಿ ಕಾವ್ಯಾ ಶಾ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ರಾಜೀವ್ ಗಾಂಧಿ ವೈದ್ಯಕೀಯ ವಿವಿ ಸಿಂಡಿಕೇಟ್ ಸದಸ್ಯ ಯು.ಟಿ. ಇಫ್ತಿಕರ್ ಫರೀದ್, ಮಹಿಳಾ ಕಾಂಗ್ರೆಸ್ ಜಿಲ್ಲಾದ್ಯಕ್ಷೆ ಶಾಲೆಟ್ ಪಿಂಟೊ ಮತ್ತಿತರರು ಇದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌