ಬ್ಯಾಡಗಿ: ‘ಮಹಿಳಾ ಸಬಲೀಕರಣ’ ಎಂಬ ಪದವು ಮಹಿಳೆ ಸಾಕಷ್ಟು ಶಕ್ತಿ ಶಾಲಿಯಲ್ಲ ಎಂಬುದನ್ನು ಸೂಚಿಸುತ್ತದೆ. ಇದೊಂದು ಸಂಚಿತ ಪ್ರಜ್ಞೆಯಾಗಿದ್ದು ಕುಟುಂಬ ನಿರ್ಮಿತ ಅಡೆತಡೆಗಳನ್ನು ಮುಂದೊಡ್ಡಿ ಮಹಿಳೆ ಅನುಭವಿಸುತ್ತಿರುವ ನೋವಿನ ಹಿಂದಿನ ಸತ್ಯವನ್ನು ಹೊರ ತೆಗೆಯಲು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡಲು ಕಾನೂನಿನ ರಕ್ಷಣೆ ಅವಶ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅಮೋಲ್ ಹಿರಿಕುಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಪುರುಷ ಪ್ರಧಾನ ಸಮಾಜ ಮಹಿಳಾ ಸ್ವಾತಂತ್ರ್ಯ ಹತ್ತಿಕ್ಕುತ್ತ ಬಂದಿದೆ. ಮಹಿಳೆಗೆ ಶಿಕ್ಷಣ, ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ, ಜೀವನದ ಭದ್ರತೆ ಕೊಡಿಸಲು ಕಳೆದ ಸಾವಿರಾರು ವರ್ಷಗಳಿಂದ ಹೋರಾಟಗಳು ನಡೆಯುತ್ತ ಬಂದಿವೆ. ಅಸಮಾನತೆಯ ಪ್ರಪಾತದಲ್ಲಿ ಬಿದ್ದಿದ್ದ ಮಹಿಳೆಯರನ್ನು ಮೇಲೆತ್ತುವ ಗಮನಾರ್ಹ ಕೆಲಸ ಮಾಡಬೇಕಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗವು ಗುರುತಿಸುತ್ತ ಬಂದಿರುವ ಮಹಿಳೆಯರು ಇಂದಲ್ಲ ನಾಳೆ ಪ್ರಪಂಚದಲ್ಲಿಯೇ ಮಹಿಳಾ ಸಬಲತೆಗೆ ಸಾಕ್ಷಿಯಾದರೂ ಆಶ್ಚರ್ಯವಿಲ್ಲ ಎಂದರು.
ರಾಷ್ಟ್ರೀಯ ಮಹಿಳಾ ಆಯೋಗ ಕಾಯಿದೆ:ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ಶ್ರೀ ಸುರೇಶ ವಗ್ಗನವರ ಮಾತನಾಡಿ, ರಾಷ್ಟ್ರೀಯ ಮಹಿಳಾ ಆಯೋಗ ಕಾಯಿದೆ (30 ಆಗಸ್ಟ್ 1990) ಶಿಫಾರಸಿನ ಮೇರೆಗೆ ಆಯೋಗ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಂಡಿತು, ಮಹಿಳೆಯರಿಗೆ ಸಂವಿಧಾನಾತ್ಮಕ ಮತ್ತು ಕಾನೂನು ರಕ್ಷಣೆಗಳನ್ನು ಶಾಸನ ಬದ್ಧಗೊಳಿಸಲಾಯಿತು. ವರದಿಯಡಿ ಮಹಿಳಾ ಸಬಲೀಕರಣಕ್ಕಾಗಿ ತೊಡಕಾಗಿದ್ದ ಬಾಲ್ಯವಿವಾಹ ಮತ್ತು ವರದಕ್ಷಿಣೆ ನಿಷೇಧ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಕಠಿಣ ಶಿಕ್ಷೆಗಳನ್ನು ಪ್ರಕಟಿಸಿ ಶಿಕ್ಷಾರ್ಹ ಅಪರಾಧವಾಗಿ ಪರಿವರ್ತಿಸಲಾಯಿತು. ಉದ್ಯೋಗಕ್ಕಾಗಿ ಕಡ್ಡಾಯ ಶಿಕ್ಷಣ ಸೇರಿದಂತೆ ಮಹಿಳಾ ಮೀಸಲಾತಿ ಅಳವಡಿಸಿದೆ ಎಂದರು.