ಜನಾರ್ದನ ರೆಡ್ಡಿ ಬಳ್ಳಾರಿ ಆಗಮನಕ್ಕೆ ಸುಪ್ರೀಂ ಅಸ್ತು; ಗಣಿ ನಗರಿಯಲ್ಲಿ ಸಂಭ್ರಮ

KannadaprabhaNewsNetwork |  
Published : Oct 01, 2024, 01:38 AM IST
ಸ | Kannada Prabha

ಸಾರಾಂಶ

ರೆಡ್ಡಿ ಆಗಮನ ಜಿಲ್ಲೆಯಲ್ಲಿ ರಾಜಕೀಯ ಸಮೀಕರಣ ಆಗುವ ಎಲ್ಲ ಸಾಧ್ಯತೆ ಇದ್ದು, ರೆಡ್ಡಿ ಆಪ್ತ ಬಳಗ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ

ಬಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪ ಹಿನ್ನೆಲೆಯಲ್ಲಿ ಬಳ್ಳಾರಿಯಿಂದ 13 ವರ್ಷಗಳ ಕಾಲ ದೂರ ಉಳಿದಿದ್ದ ಮಾಜಿ ಸಚಿವ ಹಾಗೂ ಹಾಲಿ ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ಅನುಮತಿ ನೀಡಿದ್ದು, ಅವರ ಬೆಂಬಲಿಗರಲ್ಲಿ ಹರ್ಷ ಮನೆ ಮಾಡಿದೆ.

ರೆಡ್ಡಿ ಆಗಮನ ಜಿಲ್ಲೆಯಲ್ಲಿ ರಾಜಕೀಯ ಸಮೀಕರಣ ಆಗುವ ಎಲ್ಲ ಸಾಧ್ಯತೆ ಇದ್ದು, ರೆಡ್ಡಿ ಆಪ್ತ ಬಳಗ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ರೆಡ್ಡಿ ಆಗಮನದಿಂದ ಭವಿಷ್ಯದಲ್ಲಿ ಬಳ್ಳಾರಿಯಲ್ಲಾಗುವ ರಾಜಕೀಯ ಬೆಳವಣಿಗೆ ಕುರಿತು ಸಾರ್ವಜನಿಕ ವಲಯದಲ್ಲಿ ತರಹೇವಾರಿ ಚರ್ಚೆಗಳಾಗುತ್ತಿವೆ. ರಾಜಕೀಯ ಚಾಣಕ್ಯ ಎನ್ನಲಾದ ಜನಾರ್ದನ ರೆಡ್ಡಿ ಆಗಮನದಿಂದ ಮತ್ತೆ ಬಳ್ಳಾರಿ ಜಿಲ್ಲೆಯಲ್ಲಿ ರಾಜಕೀಯ ಗತವೈಭವ ಬರಲಿದೆ. ಎರಡನೇ ರಾಜಕೀಯ ಪರ್ವ ಶುರುಗೊಳ್ಳಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದೇ ಜನಾರ್ದನ ರೆಡ್ಡಿ. ರೆಡ್ಡಿ ಬಳ್ಳಾರಿಯಲ್ಲಿರುವವರೆಗೂ ಎಲ್ಲ ಚುನಾವಣೆಯಲ್ಲೂ ಬಿಜೆಪಿ ಮುನ್ನೆಲೆ ಕಾಯ್ದುಕೊಂಡಿತ್ತು. 2009ರ ಬಿಜೆಪಿ ಸರ್ಕಾರದಲ್ಲಿ ರೆಡ್ಡಿ ಬಿಗಿಹಿಡಿತ ಹೊಂದಿದ್ದರು. ಹೀಗಾಗಿ ಶ್ರೀರಾಮುಲು, ಜನಾರ್ದನ ರೆಡ್ಡಿ ಹಾಗೂ ಕರುಣಾಕರರೆಡ್ಡಿ ಸಚಿವರಾದರು. ಸೋಮಶೇಖರ ರೆಡ್ಡಿ ಕೆಎಂಎಫ್ ಅಧ್ಯಕ್ಷರಾದರು. ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜನಾರ್ದನ ರೆಡ್ಡಿ ಜೈಲು ಪಾಲಾದ ಬಳಿಕ ಬಿಜೆಪಿ ನೆಲೆ ಕಳೆದುಕೊಂಡಿತು. ಜಿಲ್ಲೆಯ ರಾಜಕೀಯ ವರ್ಚಸ್ಸೂ ಕುಂದಿತು. ಹಿಡಿತವೂ ಕೈ ತಪ್ಪಿತು. ಅನೇಕ ವರ್ಷಗಳ ಬಳಿಕವೂ ಬಿಜೆಪಿ ಹಳೆಯ ವರ್ಚಸ್ಸಿಗೆ ಮರಳಲಿಲ್ಲ.

ಇದೀಗ ರೆಡ್ಡಿ ಮತ್ತೆ ಗಣಿ ಜಿಲ್ಲೆಗೆ ಎಂಟ್ರಿ ಕೊಡುತ್ತಿದ್ದು, ಮತ್ತೆ ಕಮಲ ಪಕ್ಷ ಗಟ್ಟಿಯಾಗಿ ಬೇರೂರಲಿದೆ ಎಂದು ಪಕ್ಷದ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

2011ರ ಸೆ.5ರಂದು ರೆಡ್ಡಿ ಬಂಧನ:

ಕರ್ನಾಟಕ ಗಡಿ ಹೊಂದಿಕೊಂಡಿರುವ ಆಂಧ್ರಪ್ರದೇಶದ ಓಬಳಾಪುರಂ ಗಣಿಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಲಾಗಿದೆ ಎಂಬ ಆರೋಪದಡಿ 2011ರ ಸೆಪ್ಟಂಬರ್‌ 5ರಂದು ಆಂಧ್ರಪ್ರದೇಶದ ಸಿಬಿಐ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಆಗಮಿಸಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿ, ಹೈದ್ರಾಬಾದ್‌ನ ಚಂಚಲಗುಡ ಜೈಲಿಗೆ ಕಳಿಸಿದ್ದರು. ಕರ್ನಾಟಕದ ಎಎಂಸಿಯಿಂದ ಅಕ್ರಮ ಗಣಿಗಾರಿಕೆ ಹಾಗೂ ಬೇಲಿಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿ, ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಬಂಧಿಸಿಡಲಾಗಿತ್ತು.

ಜನಾರ್ದನ ರೆಡ್ಡಿ ಒಟ್ಟು 4 ವರ್ಷ 9 ತಿಂಗಳು ಜೈಲು ವಾಸ ಅನುಭವಿಸಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಸಾಕ್ಷ್ಯ ನಾಶ ವಿಚಾರವನ್ನಿಟ್ಟುಕೊಂಡು ಬಳ್ಳಾರಿ, ಆಂಧ್ರಪ್ರದೇಶದ ಕಡಪ ಹಾಗೂ ಅನಂತಪುರ ಜಿಲ್ಲೆಗಳಿಗೆ ಪ್ರವೇಶ ನಿರ್ಬಂಧಿಸಿ ಹೈದ್ರಾಬಾದ್‌ನ ಸಿಬಿಐ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರೆಡ್ಡಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ, ಸುಪ್ರೀಂಕೋರ್ಟ್ ಸಿಬಿಐ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿತ್ತು. ರೆಡ್ಡಿಯ ಪುತ್ರಿ ಮದುವೆ ಸೇರಿದಂತೆ ಮತ್ತಿತರ ಸಂದರ್ಭಗಳಲ್ಲಿ ಕೋರ್ಟ್ ಅನುಮತಿ ಪಡೆದು ಜನಾರ್ದನರೆಡ್ಡಿ ಬಳ್ಳಾರಿಗೆ ಬಂದು ಹೋಗುತ್ತಿದ್ದರು. ಆದರೆ, ಇದೀಗ ರೆಡ್ಡಿ ಬಳ್ಳಾರಿಯಲ್ಲಿಯೇ ಇರಲು ಸುಪ್ರೀಂಕೋರ್ಟ್ ಅಸ್ತು ಎಂದಿರುವುದು ರೆಡ್ಡಿ ಆಪ್ತ ಬಳಗ ಸೇರಿದಂತೆ ಬಿಜೆಪಿ ಪಾಳಯದಲ್ಲೂ ಸಂತಸಕ್ಕೆಡೆ ಮಾಡಿದೆ.

ಬಳ್ಳಾರಿಯಲ್ಲಿ ಸಂಭ್ರಮಾಚರಣೆ:

ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಲು ಸುಪ್ರೀಂಕೋರ್ಟ್ ಅನುಮತಿ ನೀಡುತ್ತಿದ್ದಂತೆಯೇ ನಗರದ ಎಸ್ಪಿ ವೃತ್ತದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ರೆಡ್ಡಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

ಬಳಿಕ ಶ್ರೀಕನಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಾಸ್‌ ಈಜ್ ಬ್ಯಾಕ್, ವೆಲ್‌ಕಮ್ ಟು ಬಳ್ಳಾರಿ ಜಿಜೆಆರ್ ಎಂಬ ಬ್ಯಾನರ್‌ ಹಿಡಿದು, ಕುಣಿದು ಕುಪ್ಪಳಿಸಿದರು.

ಅ.3ರಂದು ಗುರುವಾರ ಬಳ್ಳಾರಿಗೆ ಜನಾರ್ದನ ರೆಡ್ಡಿ ಆಗಮಿಸಲಿದ್ದು, ಸುಮಾರು 20 ಸಾವಿರ ಜನರನ್ನು ಸೇರಿಸಿ ಅದ್ಧೂರಿಯಾಗಿ ಬಳ್ಳಾರಿಗೆ ಸ್ವಾಗತ ಮಾಡಿಕೊಳ್ಳಲು ಸಜ್ಜಾಗಿದ್ದೇವೆ ಎಂದು ಬಿಜೆಪಿ ಮುಖಂಡ ಕೆ.ಎಸ್. ದಿವಾಕರ್ ತಿಳಿಸಿದರು. ವಿಜಯಕುಮಾರ್, ಕೊಳಗಲ್ ಅಂಜಿನಪ್ಪ, ಗಣಪಾಲ್ ಐನಾಥರೆಡ್ಡಿ,

ತಿರುಮಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಜನಾರ್ದನ ರೆಡ್ಡಿ ಬಳ್ಳಾರಿಗೆ ಬರುತ್ತಿರುವುದು ತೀವ್ರ ಸಂತಸ ತಂದಿದೆ. ರೆಡ್ಡಿಯವರಿಲ್ಲದ ಬಳ್ಳಾರಿಯ ರಾಜಕೀಯ ಕಳೆಗುಂದಿತ್ತು. ಇದೀಗ ಪಕ್ಷಕ್ಕೆ ದೊಡ್ಡ ಬಲ ಬಂದಿದೆ ಎನ್ನುತ್ತಾರೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದಮ್ಮೂರು ಶೇಖರ್.

ಜನಾರ್ದನ ರೆಡ್ಡಿ ಬಳ್ಳಾರಿಗೆ ಬರುತ್ತಿರುವುದು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಅಪಾರ ಸಂತಸವಾಗಿದೆ. ಬಳ್ಳಾರಿಯಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸವಾಗಲಿದೆ ಎನ್ನುತ್ತಾರೆ ಬಳ್ಳಾರಿ ಬಿಜೆಪಿ ಮುಖಂಡ ಗೋನಾಳ್ ರಾಜಶೇಖರಗೌಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ