ಪ್ರೀಮಿಯಂ ಎಫ್‌ಎಆರ್‌ ಬಳಸಿ ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಸುಪ್ರೀಂ ನಕಾರ

KannadaprabhaNewsNetwork |  
Published : Sep 23, 2026, 04:00 AM IST
ಪ್ರತ್ಯೇಕ ಡಿಸಿಸಿ ಬ್ಯಾಂಕ್ ಬೇಡಿಕೆ ಹೆಚ್ಚಳ :  ಬರ ಬಡ್ಡಿ ಹಾಗು ಸಾಲ ಮನ್ನಾ ಮಾಡಲು ರೈತರು ಒತ್ತಾಯ   | Kannada Prabha

ಸಾರಾಂಶ

ಅಕ್ರಮ ಮತ್ತು ಅನಧಿಕೃತ ಕಟ್ಟಡಗಳನ್ನು ‘ಪ್ರೀಮಿಯಂ ಎಫ್‌ಎಆರ್‌ ಯೋಜನೆ’ಯಡಿ ಸಕ್ರಮ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಸ್ಪಷ್ಟ ನಿರ್ದೇಶನ ನೀಡಿದೆ.

-ರಾಜ್ಯ ಸರ್ಕಾರಕ್ಕೆ ನೋಟಿಸ್ । 4 ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚನೆ ನವದೆಹಲಿ: ಅಕ್ರಮ ಮತ್ತು ಅನಧಿಕೃತ ಕಟ್ಟಡಗಳನ್ನು ‘ಪ್ರೀಮಿಯಂ ಎಫ್‌ಎಆರ್‌ ಯೋಜನೆ’ಯಡಿ ಸಕ್ರಮ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಸ್ಪಷ್ಟ ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರದ ಪ್ರೀಮಿಯಂ ಎಫ್‌ಎಆರ್ ಯೋಜನೆಯ ಸಿಂಧುತ್ವವನ್ನು ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ‘ಸಿಟಿಜನ್ಸ್ ಆ್ಯಕ್ಷನ್ ಫೋರಂ’ ಎಂಬ ಎನ್‌ಜಿಒ ಮೇಲ್ಮನವಿ ಅರ್ಜಿಯ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಸೂರ್ಯಕಾಂತ್, ನ್ಯಾ. ಜಯಮಾಲ್ಯ ಬಾಗ್ಚಿ ಹಾಗೂ ನ್ಯಾ. ವಿ. ಮೋಹನ ಅವರಿದ್ದ ಪೀಠ, ಈ ಕುರಿತು 4 ವಾರಗಳಲ್ಲಿ ಸೂಕ್ತ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.ಏನಿದು ಪ್ರೀಮಿಯಂ ಎಫ್‌ಎಆರ್?: ಪ್ರೀಮಿಯಂ ಎಫ್‌ಎಆರ್ ಎಂದರೆ, ಬಿಲ್ಡರ್‌ ಒಬ್ಬ ನಿಯಮದಂತೆ ಕಟ್ಟಬಹುದಾದ ಕಟ್ಟಡಕ್ಕಿಂತ ಹೆಚ್ಚುವರಿ ಮಹಡಿಗಳನ್ನು ಕಟ್ಟಲು ಸರ್ಕಾರಕ್ಕೆ ಹಣ ಕೊಟ್ಟು ಪಡೆಯುವ ಕಾನೂನುಬದ್ಧ ಅನುಮತಿ. ಉದಾಹರಣೆಗೆ, ಒಂದು ಜಾಗದಲ್ಲಿ ನಿಯಮದ ಪ್ರಕಾರ 2 ಮಹಡಿ ಮಾತ್ರ ಕಟ್ಟಲು ಅವಕಾಶವಿದ್ದರೆ, ಸರ್ಕಾರಕ್ಕೆ ನಿಗದಿತ ಪ್ರೀಮಿಯಂ ಶುಲ್ಕ ಕಟ್ಟಿ ಅಧಿಕೃತವಾಗಿ 3ನೇ ಮಹಡಿಯನ್ನೂ ಕಟ್ಟಿಕೊಳ್ಳಬಹುದು.

ಅಕ್ರಮ-ಸಕ್ರಮಕ್ಕೆ ಅವಕಾಶ:ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ, ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆಯಲ್ಲಿನ ಹೊಸ ನಿಬಂಧನೆಯ ಪ್ರಕಾರ, ಹಿಂದೆ ‘ಅಕ್ರಮ-ಸಕ್ರಮ’ ಯೋಜನೆಗೆ ಒಳಪಡುತ್ತಿದ್ದ ಅಕ್ರಮ ಕಟ್ಟಡಗಳನ್ನು ಈಗ ಪ್ರೀಮಿಯಂ ಎಫ್‌ಎಆರ್ ಮೂಲಕ ಹಿಂಬಾಗಿಲಿನಿಂದ ಸಕ್ರಮಗೊಳಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಹೈಕೋರ್ಟ್ ಈ ಪ್ರಮುಖ ಅಂಶವನ್ನು ಗಮನಿಸಿಲ್ಲ’ ಎಂದು ಪೀಠಕ್ಕೆ ತಿಳಿಸಿದರು. ಸರ್ಕಾರದ ಪರ ವಾದ ಮಂಡಿಸಿದ ತುಷಾರ್ ಮೆಹ್ತಾ ಹಾಗೂ ಹಿರಿಯ ವಕೀಲ ದೇವದತ್ತ ಕಾಮತ್, ‘ನಗರಗಳಲ್ಲಿ ಭೂಮಿ ಲಭ್ಯತೆ ಕಡಿಮೆಯಿರುವುದರಿಂದ ಹೆಚ್ಚಿನ ಮಹಡಿಗಳ ನಿರ್ಮಾಣ ಅನಿವಾರ್ಯ. ಆದರೆ, ಹೆಚ್ಚುವರಿ ಎಫ್‌ಎಆರ್ ಅನ್ನು ಗರಿಷ್ಠ 0.6ಕ್ಕೆ ಸೀಮಿತಗೊಳಿಸಲಾಗಿದೆ. ಸೆಟ್‌ಬ್ಯಾಕ್ ಮತ್ತು ಪಾರ್ಕಿಂಗ್ ನಿಯಮಗಳು ಜಾರಿಯಲ್ಲಿದ್ದು, ಅಗತ್ಯ ಪಾರ್ಕಿಂಗ್ ಇಲ್ಲದವರು ಅಥವಾ ನಿಯಮಗಳನ್ನು ಉಲ್ಲಂಘಿಸಿದವರು ಹಣ ನೀಡಿ ಎಫ್‌ಎಆರ್ ಖರೀದಿಸಲು ಸಾಧ್ಯವಿಲ್ಲ. ಅಲ್ಲದೆ, ಈ ಯೋಜನೆಯಿಂದ ಸಂಗ್ರಹವಾಗುವ ಹಣವನ್ನು ನಗರದ ಮೂಲಸೌಕರ್ಯ ಅಭಿವೃದ್ಧಿಗಾಗಿಯೇ ಬಳಸಲಾಗುವುದು. ಪ್ರೀಮಿಯಂ ಎಫ್‌ಎಆರ್ ಯೋಜನೆಗೂ ಅಕ್ರಮ-ಸಕ್ರಮ ಯೋಜನೆಗೂ ಯಾವುದೇ ಸಂಬಂಧವಿಲ್ಲ’ ಎಂದು ವಿವರಿಸಿದರು.

==============

ಬೆಂಗಳೂರು ಟ್ರಾಫಿಕ್‌ಗೆ ಕಳವಳ:ವಿಚಾರಣೆ ವೇಳೆ ಬೆಂಗಳೂರಿನ ಸಂಚಾರ ದಟ್ಟಣೆ ಹಾಗೂ ಮೂಲಸೌಕರ್ಯದ ಮೇಲಿನ ಒತ್ತಡದ ಕುರಿತು ಪೀಠ ತೀವ್ರ ಕಳವಳ ವ್ಯಕ್ತಪಡಿಸಿತು. ಹರ್ಯಾಣದ ಗುರುಗ್ರಾಮದ ಉದಾಹರಣೆ ನೀಡಿದ ಸಿಜೆಐ ಸೂರ್ಯಕಾಂತ್, ‘ಮಳೆ ಬಂದಾಗ ಗುರುಗ್ರಾಮದಲ್ಲಿ ಇಡೀ ವ್ಯವಸ್ಥೆಯೇ ಕುಸಿದುಬೀಳುತ್ತದೆ. ಅದಕ್ಕೆ ಕಾರಣ ಅಲ್ಲಿ ಡ್ರೈನೇಜ್ ಹಾಗೂ ಒಳಚರಂಡಿಯಂತಹ ಮೂಲಸೌಕರ್ಯಗಳಲ್ಲಿ ಸರಿಯಾದ ಹೂಡಿಕೆ ಮಾಡದಿರುವುದು. ರಸ್ತೆ, ಚರಂಡಿ, ಬಸ್ ಹಾಗೂ ಫ್ಲೈಓವರ್‌ಗಳಂತಹ ಮೂಲಸೌಕರ್ಯಗಳನ್ನು ವಿಸ್ತರಿಸದೆ, ಕೇವಲ ಸಾಲು ಸಾಲು ಮಹಡಿಗಳನ್ನು ನಿರ್ಮಿಸಲು ಅವಕಾಶ ನೀಡಿದರೆ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಇಡೀ ನಗರವೇ ಸಂಕಷ್ಟಕ್ಕೆ ಸಿಲುಕುತ್ತದೆ. ಆದರೆ, ಗ್ರೇಟರ್ ನೋಯ್ಡಾವನ್ನು ಮುಂದಿನ 30-40 ವರ್ಷಗಳ ಅಗತ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ಯೋಜಿಸಿ ನಿರ್ಮಿಸಿರುವುದರಿಂದ ಅಲ್ಲಿ ಇಂತಹ ಸಮಸ್ಯೆ ಎದುರಾಗಿಲ್ಲ’ ಎಂದರು. ಇದೇ ವೇಳೆ,‘ನೋಟಿಸ್ ಜಾರಿಗೊಳಿಸಿ (ಸರ್ಕಾರಕ್ಕೆ). 4 ವಾರಗಳ ಒಳಗಾಗಿ ಪ್ರತಿ-ಅಫಿಡವಿಟ್ ಸಲ್ಲಿಸಲಿ. ಈ ಮಧ್ಯೆ, ಅನಧಿಕೃತ ನಿರ್ಮಾಣವನ್ನು ಕ್ರಮಬದ್ಧಗೊಳಿಸುವ ಉದ್ದೇಶಕ್ಕಾಗಿ ಪ್ರೀಮಿಯಂ ಎಫ್‌ಎಆರ್ ಅನ್ನು ಬಳಸಬಾರದು. ಪ್ರೀಮಿಯಂ ಎಫ್‌ಎಆರ್ ಅನುಮೋದನೆಯು ಈ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ’ ಎಂದು ಪೀಠ ಸ್ಪಷ್ಟಪಡಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಂಪನ್ನ
ಎಡದಂಡೆ ಕಾಲುವೆಗೆ ನೀರು ಹರಿಸಲು ಆಗ್ರಹ