ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಪ್ರಕರಣದಲ್ಲಿ ಹೈಕೋರ್ಟ್ ತನ್ನ ವಿವೇಚನೆಯನ್ನು ಸರಿಯಾಗಿ ಬಳಸಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಹೈಕೋರ್ಟ್ ತನ್ನ ಆದೇಶವನ್ನು ಹೇಗೆ ನಿರ್ದೇಶಿಸಿದೆ ಎಂಬುದನ್ನು ನೀವೇ ನೋಡಿರಬೇಕು ಎಂದು ದರ್ಶನ್ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, ಪ್ರಕರಣದ ವಿಚಾರಣೆಯನ್ನು ಜು.22ಕ್ಕೆ ಮುಂದೂಡಿದೆ.
2024ರ ಜೂ.8ರಂದು ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪದಡಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಬಂಧನವಾಗಿ 6 ತಿಂಗಳ ಬಳಿಕ ಅಂದರೆ 2024ರ ಡಿ.13ರಂದು ಕರ್ನಾಟಕ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಈ ಜಾಮೀನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ದರ್ಶನ್ ಪರ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಕೋರ್ಟ್‌ಗೆ ಹಾಜರಾಗಿದ್ದರು.
ಗುರುವಾರ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ನೇತೃತ್ವದ ವಿಭಾಗೀಯ ಪೀಠ, ‘ಹೈಕೋರ್ಟ್ ಆದೇಶದ ಬಗ್ಗೆ ನೀವು ಏನು ಹೇಳುತ್ತೀರಿ ಸಿಬಲ್?’ ಎಂದು ದರ್ಶನ್ ಪರ ವಕೀಲರನ್ನೇ ಪ್ರಶ್ನಿಸಿತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಹೈಕೋರ್ಟ್ ತನ್ನ ವಿವೇಚನೆಯನ್ನು ಸರಿಯಾಗಿ ಬಳಸಿಲ್ಲ ಎಂದು ನಾವು ಭಾವಿಸುತ್ತೇವೆ. ಹೈಕೋರ್ಟ್, ಆದೇಶವನ್ನು ಹೇಗೆ ನಿರ್ದೇಶಿಸಿದೆ ಎಂಬುದನ್ನು ನೀವು ನೋಡಿರಬೇಕು ಎಂದಿತು.
ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್ ಪರ ವಕೀಲ ಸಿಬಲ್, ಹೈಕೋರ್ಟ್ ಏನು ನಿರ್ದೇಶನ ನೀಡಿದೆ ಎಂಬುದನ್ನು ಮರೆತುಬಿಡಿ. ದಯವಿಟ್ಟು ಸಾಕ್ಷಿಗಳನ್ನು ನೋಡಿ. 161 ಮತ್ತು 164ರ ಸಾಕ್ಷಿ ಹೇಳಿಕೆಗಳನ್ನು ನೋಡಿ ಎಂದು ಮನವಿ ಮಾಡಿದರು.
ಬಳಿಕ, ಸರ್ಕಾರದ ಪರ ವಕೀಲ ಅನಿಲ್ ನಿಶಾನಿ ಅವರ ವಾದ ಆಲಿಸಿದ ನ್ಯಾಯಪೀಠ, ಬಂಧನದ ಕಾರಣಗಳನ್ನಷ್ಟೇ ನಾವು ಕೇಳುತ್ತಿದ್ದೇವೆ. ಬೇರೆ ಏನನ್ನೂ ಕೇಳುತ್ತಿಲ್ಲ. ಬಂಧನ ಕಾನೂನುಬದ್ಧವಾಗಿಲ್ಲ ಎನ್ನುವುದು ಅರ್ಜಿದಾರರ ಪರ ವಾದವಾಗಿದೆ. ಇದಕ್ಕೆ ಉತ್ತರ ಕೊಡಿ ಎಂದು ಸೂಚಿಸಿ, ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿತು.
ಈ ಮಧ್ಯೆ ದರ್ಶನ್ ಅವರು ವಿಶೇಷ ಅನುಮತಿ ಪಡೆದು ವಿದೇಶಕ್ಕೆ ತೆರಳಿದ್ದು, ತಮ್ಮ ಚಿತ್ರಗಳ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. ಜಾಮೀನಿಗೆ ಅವರು ಬೆನ್ನು ನೋವಿನ ಆಪರೇಷನ್‌ನ ಕಾರಣ ನೀಡಿದ್ದರು.