ಕನ್ಹೇರಿ ಶ್ರೀ ಗಡೀಪಾರು ಆದೇಶಕ್ಕೆ ಸುಪ್ರೀಂ ಅಸ್ತು

KannadaprabhaNewsNetwork |  
Published : Oct 30, 2025, 01:02 AM IST

ಸಾರಾಂಶ

ಮಹಾರಾಷ್ಟ್ರದ ಅದೃಶ್ಯ ಕಾಡಸಿದ್ದೇಶ್ವರ ಮಠದ ಕನ್ಹೇರಿ ಶ್ರೀಗಳಿಗೆ ವಿಜಯಪುರ ಜಿಲ್ಲೆ ಪ್ರವೇಶ ನಿರ್ಬಂಧಿಸಿ ವಿಜಯಪುರ ಜಿಲ್ಲಾಡಳಿತ ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ಕನ್ನಡಪ್ರಭ ವಾರ್ತೆ ನವದೆಹಲಿ

ಮಹಾರಾಷ್ಟ್ರದ ಅದೃಶ್ಯ ಕಾಡಸಿದ್ದೇಶ್ವರ ಮಠದ ಕನ್ಹೇರಿ ಶ್ರೀಗಳಿಗೆ ವಿಜಯಪುರ ಜಿಲ್ಲೆ ಪ್ರವೇಶ ನಿರ್ಬಂಧಿಸಿ ವಿಜಯಪುರ ಜಿಲ್ಲಾಡಳಿತ ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶ್ರೀಗಳು, ಲಿಂಗಾಯತ ಮಠಾಧೀಶರ ಒಕ್ಕೂಟವನ್ನು ‘ಮುಖ್ಯಮಂತ್ರಿ ಕೃಪಾಪೋಷಿತ’ ಎಂದು ಟೀಕಿಸಿದ್ದರು ಹಾಗೂ ಆಕ್ಷೇಪಾರ್ಹ ಪದ ಬಳಸಿದ್ದರು. ಲಿಂಗಾಯತ ಮಠಾಧೀಶರ ಒಕ್ಕೂಟದ ವಿರುದ್ಧದ ಈ ಹೇಳಿಕೆಗೆ ಲಿಂಗಾಯಿತ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅವರ ಹೇಳಿಕೆ ಖಂಡಿಸಿ, ರಾಜ್ಯದ ಹಲವೆಡೆ ಲಿಂಗಾಯಿತ ಸಮುದಾಯದಿಂದ ಪ್ರತಿಭಟನೆಗಳು ನಡೆದಿದ್ದವು.

ಈ ಹಿನ್ನೆಲೆಯಲ್ಲಿ ಪ್ರಕ್ಷುಬ್ಧತೆಗೆ ಕಾರಣವಾಗಲಿದೆ ಎಂಬ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ಕನ್ನೇರಿ ಶ್ರೀಗಳಿಗೆ ವಿಜಯಪುರ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌, ಜಿಲ್ಲಾಡಳಿತದ ನಿರ್ಬಂಧವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಶ್ರೀಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಬುಧವಾರ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಕೂಡ ಜಿಲ್ಲಾಡಳಿತದ ನಿರ್ಧಾರವನ್ನು ಎತ್ತಿ ಹಿಡಿದಿದೆ.ಕನ್ಹೇರಿ ಶ್ರೀ ಪರ ರಾಜ್ಯಾದ್ಯಂತ ಹೋರಾಟಕ್ಕೆ ಬೆಂಬಿಗರ ನಿರ್ಧಾರ:

ಮಹಾರಾಷ್ಟ್ರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ಪ್ರವೇಶ ನಿರ್ಬಂಧ ಖಂಡಿಸಿ ಬೆಳಗಾವಿಯಲ್ಲಿ ಬುಧವಾರ ವಿವಿಧ ಮಠಾಧೀಶರು, ಬಿಜೆಪಿ ನಾಯಕರು, ಹಿಂದು ಸಂಘಟನೆಗಳ ಮುಖಂಡರು ಸಭೆ ನಡೆಸಿ, ಶ್ರೀಗಳಿಗೆ ತಮ್ಮ ಒಕ್ಕೊರಲ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದಲ್ಲಿ ಹಿಂದು ಸಮಾವೇಶ ಆಯೋಜಿಸುವ ಮೂಲಕ ಜಿಲ್ಲಾಡಳಿತದ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ.ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ವಿವಿಧ ಮಠಾಧೀಶರು, ಬಿಜೆಪಿ ನಾಯಕರು, ಹಿಂದು ಸಂಘಟನೆಗಳ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಮುಖಂಡರು, ಕನ್ಹೇರಿ ಶ್ರೀಗಳಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ಪ್ರವೇಶ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಅಲ್ಲದೆ, ಬಬಲೇಶ್ವರ ಕ್ಷೇತ್ರದಲ್ಲಿ ಹಿಂದು ಸಮಾವೇಶ ಆಯೋಜಿಸಿ, ಅಲ್ಲಿಂದ ತಾಲೂಕು ಮಟ್ಟದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲು ತೀರ್ಮಾನ ಕೈಗೊಂಡರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಎಂ.ಬಿ.ಜಿರಲಿ, ಕನ್ಹೇರಿ ಶ್ರೀಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿರುವ ಸರ್ಕಾರದ ಕ್ರಮ ಖಂಡಿಸಿ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಶ್ರೀಗಳ ನಿರ್ಬಂಧ ಆದೇಶ ವಾಪಸ್ ಪಡೆಯದಿದ್ದರೆ ಬೀದಿಗೆ ಇಳಿದು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?