ಒಳಮೀಸಲಾತಿ ಜಾರಿಗೆ ಸುಪ್ರೀಂ ಅಸ್ತು: ಮಾದಿಗರ ಸಂಭ್ರಮ

KannadaprabhaNewsNetwork | Published : Aug 3, 2024 12:31 AM

ಸಾರಾಂಶ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲು ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠವು ಆದೇಶಿಸಿರುವುದನ್ನು ಸ್ವಾಗತಿಸಿ ಮಾದಿಗ ಸಮಾಜದಿಂದ ನಗರದಲ್ಲಿ ಶುಕ್ರವಾರ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.

- ದಾವಣಗೆರೆಯಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿದ ಸಮಾಜ ಬಾಂಧ‍ವರು

- - - - ಜಾತಿ ಜನಸಂಖ್ಯೆಗೆ ತಕ್ಕಂತೆ ಒಳಮೀಸಲು ಹಂಚಿಕೆ ಐತಿಹಾಸಿಕ ತೀರ್ಪು ಸಮಾಜದ ಹೋರಾಟಕ್ಕೆ ಸಿಕ್ಕ ಫಲ

- ಪ್ರೊ. ಬಿ.ಕೃಷ್ಣಪ್ಪ 1996ರಲ್ಲೇ ಪ್ರತ್ಯೇಕ ಮೀಸಲಾತಿ ಹೋರಾಟ ಹಣತೆ ಹಚ್ಚಿದ್ದರು ಎಂದು ಸ್ಮರಿಸಿದ ಮುಖಂಡರು

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲು ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠವು ಆದೇಶಿಸಿರುವುದನ್ನು ಸ್ವಾಗತಿಸಿ ಮಾದಿಗ ಸಮಾಜದಿಂದ ನಗರದಲ್ಲಿ ಶುಕ್ರವಾರ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಮಾದಿಗ ಸಮಾಜದ ವಿವಿಧ ಪಕ್ಷಗಳು, ಸಂಘಟನೆಗಳ ಮುಖಂಡರು, ಸಮಾಜ ಬಾಂಧವರು ಸಂಭ್ರಮದಲ್ಲಿ ಪಕ್ಷಾತೀತವಾಗಿ ಪಾಲ್ಗೊಂಡರು.

ಮುಖಂಡ ಆಲೂರು ನಿಂಗರಾಜ ಮಾತನಾಡಿ, ಮಾದಿಗ ಸಮಾಜಕ್ಕೆ ಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಜಾರಿಗೊಳಿಸುವಂತೆ ಪ್ರೊ. ಬಿ.ಕೃಷ್ಣಪ್ಪ 1996ರಲ್ಲೇ ಪ್ರತ್ಯೇಕ ಮೀಸಲಾತಿ ಹೋರಾಟದ ಹಣತೆ ಹಚ್ಚಿದ್ದರು. 1997ರಲ್ಲಿ ಕೃಷ್ಣಪ್ಪ ನಿಧನರಾದ ನಂತರ ದಲಿತ ಸಂಘಟನೆಗಳು, ಮಾದಿಗ ಸಂಘಟನೆಗಳು, ಅಂಬೇಡ್ಕರ್ ಸಂಘಟನೆಗಳ ನಿರಂತರ ಹೋರಾಟ, ಧರಣಿ, ಅರೆಬೆತ್ತಲೆ ಮೆರವಣಿಗೆ, ಜೈಲ್ ಭರೋ ಚಳವಳಿ ಸೇರಿದಂತೆ ಹಲವಾರು ಹೋರಾಟ ನಡೆಸಿಕೊಂಡು ಬಂದಿದ್ದವು ಎಂದರು.

ಸ್ಪಂದಿಸದ ಸಿದ್ದರಾಮಯ್ಯ:

ಈ ಹಿಂದೆ 2004ರಲ್ಲಿ ಮುಖ್ಯಮಂತ್ರಿ ಆಗಿದ್ದ ಎಸ್.ಎಂ. ಕೃಷ್ಣ ಒಳ ಮೀಸಲಾತಿಗಾಗಿ ಅಧ್ಯಯನ ನಡೆಸಿ, ವರದಿ ಕೊಡುವಂತೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರನ್ನು ನೇಮಿಸಿದ್ದರು. ಅನಂತರ ಹಲವಾರು ವರ್ಷ ಅಧ್ಯಯನ ಮಾಡಿ ವರದಿ ತಯಾರಿಸಿ, ಸಲ್ಲಿಸಲಾಗಿತ್ತು. ಆದರೆ, ಸಾಮಾಜಿಕ ನ್ಯಾಯದ ಮಂಚೂಣಿ ನಾಯಕ ಎಂದು ಬಿಂಬಿಸಿಕೊಂಡಿದ್ದ ಸಿದ್ದರಾಮಯ್ಯ ಸತತ 5 ವರ್ಷ ಪೂರ್ಣಾವಧಿ ಮುಖ್ಯಮಂತ್ರಿ ಆಗಿದ್ದರೂ ಮಾದಿಗ ಸಮಾಜಕ್ಕೆ ಏನನ್ನೂ ಮಾಡಲಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘ ಪರಿವಾರದ ಮಾರ್ಗದರ್ಶನದಂತೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅಧಿಕಾರ ಅವಧಿಯಲ್ಲಿ ಕೇವಲ ಶೇ.15 ಇದ್ದ ಮೀಸಲಾತಿಯನ್ನು ಶೇ.17ಕ್ಕೆ ಹೆಚ್ಚಿಸಿದ್ದಲ್ಲದೇ, ಜಾತಿ ಜನಸಂಖ್ಯೆಗೆ ಅನುಗುಣವಾಗಿ ಜಾತಿಯಲ್ಲಿ ಬರುವ 101 ಜಾತಿಗೂ ಸಮನಾಗಿ ಅಂದರೆ ಮಾದಿಗ ಜಾತಿಗೆ ಶೇ.6, ಹೊಲಯ ಜಾತಿಗೆ ಶೇ.5.5, ಭೋವಿ. ಲಂಬಾಣಿ ಜಾತಿಗಳಿಗೆ ಶೇ.4.5 ಮತ್ತು ಇತರೆ ಹಕ್ಕಿಪಿಕ್ಕಿ ಜಾತಿಗಳಿಗೆ ಶೇ.1 ಮೀಸಲಾತಿಗಾಗಿ ಆಯೋಗ ರಚನೆ ಮಾಡಿ ಅವಕಾಶ ಮಾಡಿಕೊಟ್ಟರು ಎಂದು ನಿಂಗರಾಜ ಸ್ಮರಿಸಿದರು.

ಸಮುದಾಯದ ಆಶಯ ಈಡೇರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್‌ನಲ್ಲಿ ನಡೆದ ಮಾದಿಗ ಸಮಾವೇಶದಲ್ಲಿ ಭರವಸೆ ಕೊಟ್ಟಿದ್ದರು. ಆದರೆ ಕರ್ನಾಟಕದಲ್ಲಿದ್ದ ಕಾಂಗ್ರೆಸ್ ಸರ್ಕಾರ ಮೀಸಲಾತಿ ಜಾರಿಗೊಳಿಸುವಲ್ಲಿ ವಿಳಂಬ ಮಾಡಿ, ಗೊಂದಲ ಉಂಟು ಮಾಡಿತು. ಇದರಿಂದ ನಮ್ಮ ಸಮಾಜದ ಮುಖಂಡರು ಸುಪ್ರೀಂ ಕೋರ್ಟಿಗೆ ಹೋಗಿದ್ದರು ಎಂದರು.

ಈಗ ಸುಪ್ರಿಂ ಕೋರ್ಟ್‌ನ 7 ನ್ಯಾಯಾಧೀಶರ ಪೀಠವು ಆ.1ರಂದು ಒಳ ಮೀಸಲಾತಿಯನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಬಹುದೆಂಬ ಐತಿಹಾಸಿಕ ತೀರ್ಪು ನೀಡಿದೆ. ಇದು ನಿಜಕ್ಕೂ ಮಾದಿಗ ಸಮಾಜದ ಹೋರಾಟಕ್ಕೆ ಸಿಕ್ಕ ಫಲವಾಗಿದೆ. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನ ಆದೇಶ ತಕ್ಷಣದಿಂದಲೇ ಪುರಸ್ಕರಿಸಿ ಎಲ್ಲಾ ಇಲಾಖೆಗೂ ಆದೇಶ ಕಳಿಸಿ ಜಾರಿಗೊಳಿಸುವಂತೆ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಸಮಾಜದ ಮುಖಂಡರಾದ ಡಿಎಸ್ಸೆಸ್ ರಾಜ್ಯ ಸಂಚಾಲಕ ಎಚ್.ಮಲ್ಲೇಶ, ಎಂ.ಹಾಲೇಶ, ಸೋಮಲಾಪುರ ಹನುಮಂತಪ್ಪ, ಜಯಪ್ರಕಾಶ, ಶಾಮನೂರು ರಾಜು, ಹಾಲೇಶ ಜಿಗಳಿ, ಹನುಮಂತಪ್ಪ ಗಾಂಧಿ ನಗರ, ಅಂಜಿನಪ್ಪ, ರಾಜಪ್ಪ, ನಿಟುವಳ್ಳಿ ದುರ್ಗೇಶ, ಆನಂದ ಜಾಲಿಹಾಳ, ನಿಂಗರಾಜ ರೆಡ್ಡಿ, ಸಾವಜ್ಜರ ಮಂಜು, ಷಣ್ಮುಖ, ರಾಮಚಂದ್ರಪ್ಪ, ರಾಘವೇಂದ್ರ, ಕೆಟಿಜೆ ನಗರ ರವಿ, ಮಾನು, ಚೇತನ್, ಎಸ್‌ಒಜಿ ಕಾಲನಿ ಜಯಣ್ಣ, ಚಿಕ್ಕನಹಳ್ಳಿ ಹನುಮಂತಪ್ಪ ಇತರರು ಇದ್ದರು.

- - - -2ಕೆಡಿವಿಜಿ8, 9:

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ಸುಪ್ರೀಂ ಕೋರ್ಟ್‌ ಪೀಠ ಆದೇಶ ಸ್ವಾಗತಿಸಿ ಮಾದಿಗ ಸಮಾಜದಿಂದ ದಾವಣಗೆರೆಯಲ್ಲಿ ಶುಕ್ರವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.

Share this article