ಸೂರಜ್‌ ಕೇಸ್‌ ಸಿಐಡಿ ತನಿಖೆಗೆ

KannadaprabhaNewsNetwork |  
Published : Jun 24, 2024, 01:33 AM IST

ಸಾರಾಂಶ

ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ದಳ(ಸಿಐಡಿ)ಕ್ಕೆ ವಹಿಸಿ ರಾಜ್ಯ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ದಳ(ಸಿಐಡಿ)ಕ್ಕೆ ವಹಿಸಿ ರಾಜ್ಯ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ.ಈ ಆದೇಶದ ಬೆನ್ನಲ್ಲೇ ಈಗಾಗಲೇ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖಾ ಸಾರಥ್ಯ ವಹಿಸಿರುವ ಸಿಐಡಿ ಎಜಿಡಿಜಿ ಬಿ.ಕೆ.ಸಿಂಗ್ ಉಸ್ತುವಾರಿಯಲ್ಲೇ ಡಿಐಜಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ವಿಶೇಷ ವಿಚಾರಣಾ ದಳದ ಎಸ್ಪಿ ಎನ್‌.ವೆಂಕಟೇಶ್ ನೇತೃತ್ವದಲ್ಲಿ ತನಿಖಾ ತಂಡವನ್ನು ಸಿಐಡಿ ಡಿಜಿಪಿ ಡಾ.ಎಂ.ಸಲೀಂ ರಚಿಸಿದ್ದಾರೆ.

ಪ್ರಕರಣದ ಕುರಿತು ಪ್ರಾಥಮಿಕ ಹಂತದ ಮಾಹಿತಿಯನ್ನು ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಅವರಿಗೆ ದಕ್ಷಿಣ ವಲಯ ಡಿಐಜಿ ಡಾ.ಬೋರಲಿಂಗಯ್ಯ ಹಾಗೂ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ನೀಡಿದ್ದಾರೆ.

ಜೆಡಿಎಸ್ ಪಕ್ಷದ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಸೂರಜ್‌ ರೇವಣ್ಣ ಅವರನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿಯಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮಾಹಿತಿ ನೀಡಿದ್ದರು. ಆ ವೇಳೆ ಪ್ರಭಾವಿ ರಾಜಕೀಯ ಕುಟುಂಬದ ಸದಸ್ಯನ ಮೇಲೆ ಆರೋಪ ಬಂದಿರುವ ಕಾರಣ ತನಿಖೆಯನ್ನು ಸಿಐಡಿಗೆ ವಹಿಸಲು ಮುಖ್ಯಮಂತ್ರಿಗಳಿಗೆ ಡಿಜಿಪಿ ಶಿಫಾರಸು ಮಾಡಿದ್ದರು. ಇದಕ್ಕೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಸಮ್ಮತಿಸಿದ ಬಳಿಕ ಪ್ರಕರಣವನ್ನು ಸಿಐಡಿಗೆ ವಹಿಸಿ ಡಿಜಿಪಿ ಆದೇಶಿಸಿದ್ದಾರೆ.

ಇಂದು ಕಡತ ಹಸ್ತಾಂತರ:

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ವಿಧಾನಷರಿಷತ್ ಸದಸ್ಯ ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ಸಿಐಡಿ ತಂಡ ಸಿದ್ಧವಾಗಿದ್ದು, ಸಿಐಡಿಗೆ ಹಾಸನ ಪೊಲೀಸರು ಕಡತ ಹಸ್ತಾಂತರಿಸಲಿದ್ದಾರೆ.ಹಾಸನ ಜಿಲ್ಲೆಗೆ ಸೋಮವಾರ ತೆರಳಿ ಪ್ರಕರಣದ ಕುರಿತು ಸ್ಥಳೀಯ ಪೊಲೀಸರಿಂದ ಸಿಐಡಿ ಎಸ್ಪಿ ನೇತೃತ್ವದ ತಂಡ ಮಾಹಿತಿ ಪಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

-ಕೋಟ್‌-

ಹಾಸನ ವಿಧಾನಪರಿಷತ್ ಸದಸ್ಯ ಸೂರಜ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ಡಿಐಜಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದ್ದು, ಸ್ಥಳೀಯ ಪೊಲೀಸರಿಂದ ಪ್ರಕರಣದ ಕಡತಗಳು ಸಿಐಡಿಗೆ ಸೋಮವಾರ ಹಸ್ತಾಂತರವಾಗಲಿವೆ.

-ಡಾ.ಎಂ.ಎ.ಸಲೀಂ, ಡಿಜಿಪಿ, ಸಿಐಡಿ

ಟಾಪ್ ಸೂರಜ್ ರೇವಣ್ಣ ಪ್ರಕರಣದಲ್ಲಿ ರಾಜಕೀಯವಿಲ್ಲ: ಚಲುವರಾಯಸ್ವಾಮಿ

ಎಂಎಲ್ಸಿ ಸೂರಜ್ ರೇವಣ್ಣ ಬಂಧನ ವಿಚಾರದಲ್ಲಿ ರಾಜಕೀಯ ಮಾಡುವಂಥದ್ದು ಏನಿದೆ? ಅವರ ಮನೆತನವೇ ರಾಜಕೀಯದಲ್ಲಿ ಬೆಳೆದಿದೆ. ಇಂದಿನ ಪರಿಸ್ಥಿತಿಗಳಿಗೆಲ್ಲ ಅವರೇ ಕಾರಣ. ಇದರಲ್ಲಿ ನಾವೇನು ಮಾಡಲು ಸಾಧ್ಯ ಎಂದು ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.

ಭಾನುವಾರ ನಗರದ ಪ್ರವಾಸಿಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಸೂರಜ್ ರೇವಣ್ಣ ಪ್ರಕರಣ ಸಂಬಂಧ ಕಾನೂನು ಇದೆ, ಕೋರ್ಟ್ ಇದೆ. ಇದು ಬಹಿರಂಗವಾಗಿ ಚರ್ಚೆ ಮಾಡುವ ವಿಚಾರವಲ್ಲ. ಇದರ ಬಗ್ಗೆ ನಮಗೂ ಮುಜುಗರ ಇದೆ. ಇದನ್ನು ಸರಿಪಡಿಸುವುದು ನಮ್ಮ ಕೈಯಲ್ಲಿ ಇಲ್ಲ ಎಂದರು.

ಪ್ರಕರಣದಲ್ಲಿ ಇಬ್ಬರೂ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಕೇಸ್ ಆ್ಯಂಡ್ ಕೌಂಟರ್ ಕೇಸ್ ಆಗಿದೆ. ಇದರಲ್ಲಿ ರಾಜಕೀಯ ಮಾಡುವ ಅಗತ್ಯವಾದರೂ ಏನು? ನಮ್ಮ ಬಳಿ ಪೆನ್‌ಡ್ರೈವ್ ಇದೆ ಅಂತ ನಾವು ಹೇಳಿದ್ದೇವಾ?, ಬಡವರ ಮಕ್ಕಳು ಇರಬಾರದಾ?, ಇವತ್ತು ದೇವೇಗೌಡರನ್ನು ನಮ್ಮ ನಾಯಕರು ಎಂದು ಗೌರವದಿಂದ ಹೇಳುತ್ತೇವೆ. ಯಾವುದೇ ಪಕ್ಷದಲ್ಲಿದ್ದರೂ ವೈಯಕ್ತಿಕ ಟೀಕೆ-ಟಿಪ್ಪಣಿ ಕಡಿಮೆ ಮಾಡಿ ಅಭಿವೃದ್ಧಿ ಕಡೆಗೆ ಗಮನಹರಿಸುವಂತಿರಬೇಕು ಎಂದು ಸಲಹೆ ನೀಡಿದರು.

ದೇವದಾರಿ ಹಿಲ್ಸ್‌ನಲ್ಲಿ ಗಣಿಗಾರಿಕೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿರುವ ವಿಚಾರವಾಗಿ, ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಗಣಿಗಾರಿಕೆ ಬೇಡ ಎಂದಿದ್ದರು. ಈಗ ಗಣಿಗಾರಿಕೆಗೆ ಅನುಮತಿ ನೀಡಿ ಸಹಿ ಹಾಕಿರುವುದೇಕೆ? ಕೇಂದ್ರ ಸಚಿವರಾಗಿ ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ರಾಜ್ಯಕ್ಕೆ ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡಲಿ, ಅವರು ಮಾಡುವ ಒಳ್ಳೆಯ ಕೆಲಸಗಳಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ