ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೂರಜ್ ಹೆಗ್ಡೆ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಅವರು ಅಂತಿಮ ನಮನ ಸಲ್ಲಿಸಿದರು.
ಸೋಮವಾರ ಅಂತಿಮ ನಮನ ಸಲ್ಲಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಸೇರಿ ಕಾಂಗ್ರೆಸ್ ಪಕ್ಷದ ಮುಖಂಡರು ಬಿಇಎಲ್ ರಸ್ತೆಯ ನಿವಾಸದಲ್ಲಿ ಅಂತಿಮ ವಿದಾಯ ಹೇಳಿದರು. ಬಳಿಕ ಹೆಬ್ಬಾಳದ ಶಾಂತಿಧಾಮ ರುದ್ರಭೂಮಿಯಲ್ಲಿ ಸೂರಜ್ ಹೆಗ್ಡೆ ಅವರ ಅಂತ್ಯ ಸಂಸ್ಕಾರ ನಡೆಯಿತು.ಕುಟುಂಬಕ್ಕೆ ರಾಗಾ ಸಾಂತ್ವನ:
ಸರ್ಕಾರಿ ಗೌರವ ಅರ್ಪಣೆ:
ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಪೊಲೀಸ್ ಬಂದೂಕು ಪಡೆ ಗೌರವ ಸಲ್ಲಿಸಿತು. ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೂರಜ್ ಅವರ ಪತ್ನಿ ಶಿಲ್ಪಾ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಈ ವೇಳೆ ರಾಹುಲ್‌ಗಾಂಧಿ ಸೇರಿ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.
ಸರ್ಕಾರಿ ಗೌರವದ ಬಳಿಕ ಧ್ವಜ ಹಸ್ತಾಂತರದ ವೇಳೆ ಶಿಲ್ಪಾ ಸೂರಜ್ ಹೆಗಡೆ ಉಮ್ಮಳಿಸಿ ಬಂದ ದುಃಖ ತಾಳಲಾರದೇ ಬಿಕ್ಕಿ, ಬಿಕ್ಕಿ ಅತ್ತರು. ಈ ವೇಳೆ ವೇಳೆ ಭಾವುಕರಾದ ಡಿ.ಕೆ.ಶಿವಕುಮಾರ್ ಅವರು ಸಂತೈಸಿದರು. ಇದಕ್ಕೂ ಮೊದಲು ಅಂತಿಮ ಗೌರವ ಸಲ್ಲಿಸಲು ಆಗಮಿಸಿದ ರಾಹುಲ್‌ಗಾಂಧಿ ಅವರನ್ನು ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬರಮಾಡಿಕೊಂಡ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ರಾಹುಲ್‌ಗಾಂಧಿ ಜತೆಗೆ ಒಂದೇ ಕಾರಿನಲ್ಲಿ ಬಿಇಎಲ್ ಬಳಿಗೆ ಆಗಮಿಸಿದರು. ಅಂತಿಮ ನಮನದ ನಂತರ ಮತ್ತೆ ವಿಮಾನ ನಿಲ್ದಾಣಕ್ಕೆ ತೆರಳಿ ಬೀಳ್ಕೊಟ್ಟರು.