-ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟಿಸಿ ಮನವಿ
----ಕನ್ನಡಪ್ರಭ ವಾರ್ತೆ ಸುರಪುರ
ನಾರಾಯಣಪುರ ಜಲಾಶಯಕ್ಕೆ ಒಳಪಡುವ ಜಮೀನುಗಳ ಬೇಸಿಗೆ ಬೆಳೆಗಳಿಗೆ ಏ.15ರವರೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಾಲೂಕಿನ ಹಸನಾಪುರದ ಕೆಬಿಜೆನ್ನೆಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.ಸಂಘದ ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಮಾತನಾಡಿ, ಬೇಸಿಗೆಯಲ್ಲಿ ಶೇಂಗಾ, ಭತ್ತ, ಸಜ್ಜೆ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ. ಮಾರ್ಚ್ ಮಧ್ಯಂತರದಲ್ಲಿ ನೀರು ನಿಲ್ಲಿಸಿದರೆ ಬೆಳೆಗಳು ಬರುವುದಿಲ್ಲ. ಇದರಿಂದ ಕೈಗೆ ಬಂದ ತತ್ತು ಬಾಯಿಗೆ ಬಾರದಂತೆ ಎನ್ನುವ ಗಾದೆಯಂತೆ ರೈತರ ಬದುಕಾಗುತ್ತದೆ. ಆದ್ದರಿಂದ ರೈತರ ಹಿತ ಕಾಪಾಡಬೇಕು. ರೈತರು ಬೆಳೆಯುವ ಬೆಳೆಗೆ ಕಡ್ಡಾಯವಾಗಿ ನೀರು ನೀಡಬೇಕು ಎಂದು ಆಗ್ರಹಿಸಿದರು.
ದಿನ ಬಳಕೆಯ ಆಹಾರ ಪದಾರ್ಥಗಳ ಬೆಲೆಗಳು ಗಗನನಕ್ಕೇರಿದರೆ ರೈತರು ಬೆಳೆದ ಬೆಳೆಗೆ ಮಾತ್ರ ಬೆಲೆಯಿಲ್ಲ. ರೈತರು ಇತ್ತ ನಷ್ಟ ಅನುಭವಿಸುತ್ತಿದ್ದರೆ ಬಂಡವಾಳ ಶಾಹಿಗಳು ಬಲಿಷ್ಠರಾಗಿ ಲಾಭ ಪಡೆಯುತ್ತಿದ್ದಾರೆ. ರೈತರ ಹೆಸರಿನಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಅಧಿಕಾರ ಪಡೆದರೂ ರೈತರಿಗೆ 90 ರಿಂದ 100 ದಿನ ಜಲಾಶಯಗಳಿಂದ ನೀರು ಒದಗಿಸಲು ಸಾಧ್ಯವಾಗುವುದಿಲ್ಲವೇ? ಜಲಾಶಯದಲ್ಲಿ ಸಾಕಷ್ಟು ನೀರು ಇದ್ದು ಬೆಳೆಗಳಿಗೆ ನೀರು ಕೊಡಬೇಕು. ಇಲ್ಲದಿದ್ದರೆ ಹೆದ್ದಾರಿ ತಡೆದು ರಸ್ತೆ ರುಖೋ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.ಪ್ರಮುಖರಾದ ಸಾಹೇಬಗೌಡ ಮದಲಿಂಗನಾಳ, ವೆಂಕಟೇಶ ಕುಪಗಲ್, ಮಲ್ಲಣ್ಣ ಹಾಲಭಾವಿ, ವೆಂಕೋಬ ದೊರಿ ಕುಪಗಲ್, ನಾಗಪ್ಪ ಕುಪಗಲ್, ಹಣಮಂತ ಕುಂಬಾರಪೇಟೆ, ಮಲ್ಲಣ್ಣ ಅಂಗಡಿ ಕೊಡೇಕಲ್, ರಾಮು ಕರ್ನಾಳ ಸೇರಿದಂತೆ ಇತರರಿದ್ದರು.
-5ವೈಡಿಆರ್18: ಸುರಪುರ ಸಮೀಪದ ನಾರಾಯಣಪುರ ಜಲಾಶಯದಿಂದ ಏ.15 ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘದ ಸದಸ್ಯರು ಕೆಬಿಜೆನ್ನೆಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.