ಎಲ್ಲರ ಲೇಸು ಬಯಸಿದ ಶರಣರು: ಡಾ.ಬಸವರಾಜ

KannadaprabhaNewsNetwork | Published : May 17, 2024 12:31 AM

ಸಾರಾಂಶ

12ನೇ ಶತಮಾನದ ಬಸವಾದಿ ಶರಣರು ಜೀವವಿರೋಧಿಯಾದ ಸ್ಥಾವರ ತತ್ವ ಮತ್ತು ಕರ್ಮಸಿದ್ಧಾಂತಕ್ಕೆ ಬದಲಾಗಿ ಜೀವಪರವಾದ ಜಂಗಮ ತತ್ವ ಮತ್ತು ಕಾಯಕ ಸಿದ್ಧಾಂತ ಜಾರಿಗೆ ತಂದು, ಲೋಕದ ಸಕಲರಿಗೂ ಲೇಸನೆ ಬಯಸಿದರು ಎಂದು ಶಂಕರಘಟ್ಟದ ಸಂಸ್ಕೃತಿ ಚಿಂತಕ ಡಾ.ಬಸವರಾಜ ಹೇಳಿದ್ದಾರೆ.

- ಆನ್‌ಲೈನ್‌ನಲ್ಲಿ ಶರಣ ಚಿಂತನಾಗೋಷ್ಠಿ ಕಾರ್ಯಕ್ರಮ - - -

ದಾವಣಗೆರೆ: 12ನೇ ಶತಮಾನದ ಬಸವಾದಿ ಶರಣರು ಜೀವವಿರೋಧಿಯಾದ ಸ್ಥಾವರ ತತ್ವ ಮತ್ತು ಕರ್ಮಸಿದ್ಧಾಂತಕ್ಕೆ ಬದಲಾಗಿ ಜೀವಪರವಾದ ಜಂಗಮ ತತ್ವ ಮತ್ತು ಕಾಯಕ ಸಿದ್ಧಾಂತ ಜಾರಿಗೆ ತಂದು, ಲೋಕದ ಸಕಲರಿಗೂ ಲೇಸನೆ ಬಯಸಿದರು ಎಂದು ಶಂಕರಘಟ್ಟದ ಸಂಸ್ಕೃತಿ ಚಿಂತಕ ಡಾ.ಬಸವರಾಜ ಹೇಳಿದರು.

ದಾವಣಗೆರೆಯ ಅಖಿಲ ಭಾರತ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡ ಆನ್‌ಲೈನ್ ಮೂಲಕ ಅರಿವಿನ ಮನೆಯ ಶರಣ ಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

21ನೇ ಶತಮಾನದಲ್ಲಿ ಈ ವೈಜ್ಞಾನಿಕ ಯುಗದಲ್ಲಿಯೂ ಕೂಡ ಇನ್ನೂ ಹಲವಾರು ಮನೆಗಳಲ್ಲಿ ಹಾಗೂ ಮಠಗಳಲ್ಲಿ ವೈದಿಕ ಸಂಸ್ಕೃತಿ ಜಾರಿಯಲ್ಲಿದೆ. ಜಾತಿ ಮತ್ತು ಧರ್ಮವನ್ನು ರಾಜಕೀಯ ಮತ್ತು ಮಾರಾಟದ ವಸ್ತುವನ್ನಾಗಿ ಮಾಡಿ ಬಡಜನತೆಯನ್ನು ಹಿಂದುಳಿದ ವರ್ಗವನ್ನು ಶೋಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ, ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಿ, ಬಸವಪೂರ್ವ ಯುಗ ಸಂಸ್ಕೃತ ಯುಗವಾಗಿತ್ತು. ಬಸವಾದಿ ಶರಣರು ಕನ್ನಡ ಯುಗವನ್ನು ಆರಂಭಿಸಿ ಜನರಾಡುವ ಭಾಷೆಯಲ್ಲಿ ಸಾಹಿತ್ಯವನ್ನು ಸೃಷ್ಟಿಸಿ, ಕೆಳವರ್ಗದ ಜನರನ್ನು ಮುನ್ನಲೆಗೆ ತಂದು ಸಮಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಸವಣ್ಣನವರು ಸಮಸಮಾಜ ನಿರ್ಮಿಸಲು ಅನುಭವ ಮಂಟಪ ಮತ್ತು ಮಹಾಮನೆಯ ಕಲ್ಪನೆಯನ್ನು ಜಾರಿಗೆ ತಂದರು. ಕಲ್ಯಾಣ ರಾಜ್ಯ ಸೃಷ್ಟಿಯಾದದ್ದು ಅನುಭವ ಮಂಟಪದಿಂದ ಸಮಸಮಾಜ ಸೃಷ್ಟಿ ಆದದ್ದು ಮಹಾಮನೆಯಿಂದ ಎಂದು ತಿಳಿಸಿದರು.

ಜಿಲ್ಲಾ ಶಸಾಪ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ತುಮಕೂರು ಶಸಾಪ ಅಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ, ದೆಹಲಿ ಘಟಕದ ಅಧ್ಯಕ್ಷ ಎನ್.ಪಿ.ಚಂದ್ರಶೇಖರ, ಡಾ.ರಣಧೀರ್, ಗೀತಾ ಬಸವರಾಜ ಇತರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಿ.ಟಿ.ಪ್ರಕಾಶ್ ಪ್ರಾರ್ಥಿಸಿ, ಆರ್.ಸಿದ್ದೇಶಪ್ಪ ಸ್ವಾಗತಿಸಿದರು. ಭರ್ಮಪ್ಪ ಮೈಸೂರು ಕಾರ್ಯಕ್ರಮ ನಿರ್ವಹಿಸಿದರು. ಎನ್.ಟಿ. ಸಣ್ಣಮಂಜುನಾಥ ವಂದಿಸಿದರು.

- - - -16ಕೆಡಿವಿಜಿ31ಃ:

Share this article