ಕನ್ನಡಪ್ರಭ ವಾರ್ತೆ ಮೈಸೂರು
ಆ್ಯಪ್ ಡೌನ್ ಲೋಡ್ ಸಮಸ್ಯೆ ಮತ್ತು ಕೆಲಗೊಂದಲಗಳ ನಡುವೆಯು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.
ಹಲವು ದಿನಗಳಿಂದ ಕುತೂಹಲ ಕೆರಳಿಸಿದ್ದ ಒಳ ಮೀಸಲಾತಿ ಸಮೀಕ್ಷೆಗೆ ಸೋಮವಾರ ವಿದ್ಯುಕ್ತ ಚಾಲನೆ ದೊರೆತಿದೆ. ನಗರ ಮತ್ತು ಜಿಲ್ಲಾದ್ಯಂತ ಗಣತಿದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದರು.ಮೈಸೂರಿನ ಗಾಂಧಿನಗರ, ಎನ್.ಆರ್. ಮೊಹಲ್ಲಾ, ಅಶೋಕಪುರಂ, ಮೇಟಗಳ್ಳಿ, ದೇವರಾಜ ಅರಸು ಕಾಲೋನಿ ಸೇರಿದಂತೆ ದಲಿತ ಸಮುದಾಯದವರು ಹೆಚ್ಚು ವಾಸಿಸುವ ಬಡಾವಣೆಗಳಲ್ಲಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದರು.
ಗಣತಿದಾರರು ಬರುವ ವಿಷಯ ತಿಳಿದಿದ್ದ ಬಡಾವಣೆಯ ಮುಖಂಡರು, ದಸಂಸ ಕಾರ್ಯಕರ್ತರು ನಿಖರ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ತಂತಮ್ಮ ಮೂಲ ಜಾತಿಯನ್ನು ನಮೂದಿಸುವಂತೆ ಜಾಗೃತಿ ಮೂಡಿಸಿದರು. ಹೀಗಾಗಿ ಗಣತಿದಾರರಿಗೆ ಹೊರೆ ಕಡಿಮೆ ಆಯಿತು.
ನೈಜ ದತ್ತಾಂಶ ಸಂಗ್ರಹಕ್ಕಾಗಿ ಮೊದಲನೇ ಹಂತವಾಗಿ ಮನೆ ಮನೆ ಸಮೀಕ್ಷೆ ನಡೆದ ನಂತರ ಎರಡನೇ ಹಂತ ವಿಶೇಷ ಶಿಬಿರದ ಮೂಲಕ ನಡೆಯಲಿದೆ. ಇನ್ನು 3ನೇ ಹಂತ ಆನ್ ಲೈನ್ ಮೂಲಕ ನಡೆಯಲಿದೆ. ಅಲ್ಲೂ ಜನರಿಗೆ ಮಾಹಿತಿ ನೀಡಲು ಅವಕಾಶ ಇದೆ.ಆ್ಯಪ್ ಡೌನ್ ಲೋಡ್ , ಪೂರಕ ಸಾಮಗ್ರಿ ಕೊರತೆ:
ಮೊದಲಿಗೆ ಗಣತಿದಾರರು ತಮ್ಮ ಗುರುತಿನ ಚೀಟಿ, ನಮೂನೆ- 4 ಫಾರಂ ಹಾಗೂ ವಾರ್ಡಿಗೆ ನೇಮಿಸಿರುವ ಪತ್ರವನ್ನು ಕಲೆ ಹಾಕಿದರು. ಬಳಿಕ ಕೆಲವರಿಗೆ ಆ್ಯಪ್ ಡೌನ್ ಲೋಡ್ ಆಗಲು ತೊಡಕಾಯಿತು. ತರಬೇತಿ ಸಮಯದಲ್ಲಿ ಟ್ರೈಯಲ್ ಆ್ಯಪ್ ಡೌನ್ ಲೋಡ್ ಮಾಡಿದ್ದ ಕಾರಣ ಆಪ್ ಡೇಟ್ ಆದ ಹೊಸ ಆ್ಯಪ್ ಡೌನ್ ಲೋಡ್ ಆಗುತ್ತಿರಲಿಲ್ಲ. ಇದರಿಂದ ಕೆಲಕಾಲ ತೊಡಕಾಯಿತು.