ಒಳ ಮೀಸಲಾತಿ ಸಮೀಕ್ಷೆ ಇನ್ನೂ 10 ದಿನ ವಿಸ್ತರಣೆ?

KannadaprabhaNewsNetwork |  
Published : Jun 08, 2025, 01:34 AM ISTUpdated : Jun 08, 2025, 05:01 AM IST
ಸಮೀಕ್ಷೆ | Kannada Prabha

ಸಾರಾಂಶ

ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ನಡೆಯುತ್ತಿರುವ ಜಾತಿ ಗಣತಿ  ಸಮೀಕ್ಷೆ ಅವಧಿಯನ್ನು ಮತ್ತೆ 10 ದಿನಗಳ ಕಾಲ ವಿಸ್ತರಿಸಲು ನ್ಯಾ.ನಾಗಮೋಹನ್ ದಾಸ್‌ ಆಯೋಗ ಚಿಂತನೆ  

 ಬೆಂಗಳೂರು : ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಬಿಬಿಎಂಪಿ ಸೇರಿ ಬೆಂಗಳೂರು ಸುತ್ತಲಿನ ಜಿಲ್ಲೆಗಳಲ್ಲಿ ಅಂದಾಜಿಗಿಂತ ಕಡಿಮೆ ಸಂಖ್ಯೆಯಲ್ಲಿ ಕುಟುಂಬಗಳು ಭಾಗಿಯಾಗಿರುವ ಹಿನ್ನೆಲೆಯಲ್ಲಿ ಆನ್‌ಲೈನ್‌ ಹಾಗೂ ಶಿಬಿರಗಳ ಮೂಲಕ ಸಮೀಕ್ಷೆ ಅವಧಿಯನ್ನು ಮತ್ತೆ 10 ದಿನಗಳ ಕಾಲ ವಿಸ್ತರಿಸಲು ನ್ಯಾ.ನಾಗಮೋಹನ್ ದಾಸ್‌ ಆಯೋಗ ಚಿಂತನೆ ನಡೆಸಿದೆ.

ಬಹುತೇಕ ಜಿಲ್ಲೆಗಳಲ್ಲಿ ಶೇ. 95ರಷ್ಟು ಸಮೀಕ್ಷೆ ನಡೆದಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 14 ಲಕ್ಷ ಜನ ಇರಬಹುದೆಂದು ಅಂದಾಜಿಸಲಾಗಿತ್ತು. ಆದರೆ ಈವರೆಗೆ ಸುಮಾರು 7ರಿಂದ 7.50 ಲಕ್ಷ ಜನರ ವಿವರ ಮಾತ್ರ ಸಮೀಕ್ಷೆಯಲ್ಲಿ ದಾಖಲಾಗಿದೆ. ಅಲ್ಲದೆ ಬೆಂಗಳೂರು ಗ್ರಾಮಾಂತರ ಸೇರಿ ಸುತ್ತಲಿನ ನಾಲ್ಕೈದು ಜಿಲ್ಲೆಗಳಲ್ಲಿ ಸಹ ಪೂರ್ಣ ಸಮೀಕ್ಷೆ ಸಾಧ್ಯವಾಗಿಲ್ಲ. ಹೀಗಾಗಿ ಸಮೀಕ್ಷೆ ಅವಧಿಯನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಲಸೆಯಿಂದ ಸಿಗದ ಮಾಹಿತಿ:

ಬೆಳಗಾವಿ, ಕಲಬುರಗಿ ಸೇರಿ ಗಡಿ ಭಾಗದ ಕೆಲ ಜಿಲ್ಲೆಗಳ ಪರಿಶಿಷ್ಟ ಜಾತಿ ಸಮುದಾಯದ ಜನ ಉದ್ಯೋಗ ನಿಮಿತ್ತ ಇಲ್ಲವೇ ಕೆಲಸ ಹುಡುಕಿಕೊಂಡು ಬೇರೆ ರಾಜ್ಯ ಅಥವಾ ಬೇರೆ ಜಿಲ್ಲೆಗಳಿಗೆ ವಲಸೆ ಹೋಗಿದ್ದಾರೆ. ಬೆಳಗಾವಿ ಭಾಗದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಅನೇಕ ಕುಟುಂಬಗಳು ಗೋವಾಕ್ಕೆ ವಲಸೆ ಹೋಗಿವೆ. ಅದೇ ರೀತಿ ಕಲಬುರಗಿ ಭಾಗದ ಜನ ದೂರದ ಹೈದರಾಬಾದ್ ಇಲ್ಲವೇ, ಬೆಂಗಳೂರು, ಮಂಗಳೂರು ಸೇರಿ ವಿವಿಧ ಕಡೆ ಕೆಲಸಕ್ಕೆ ಹೋಗಿದ್ದಾರೆ. ಸದ್ಯ ಅವರು ವಾಪಸ್‌ ಬರುವುದಿಲ್ಲ. ಇದು ಕೂಡಾ ಪೂರ್ಣ ಪ್ರಮಾಣದ ಸಮೀಕ್ಷೆ ಆಗದಿರಲು ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಬಿಬಿಎಂಪಿಯಲ್ಲಿ ಕಾಣದ ಪ್ರಗತಿ:

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸುಮಾರು ಪರಿಶಿಷ್ಟ ಜಾತಿಯ 14 ಲಕ್ಷ ಜನ ಇರಬಹುದೆಂದು ಅಂದಾಜಿಸಲಾಗಿತ್ತು. ಆದರೆ ಈವರೆಗಿನ ಸಮೀಕ್ಷೆಯಲ್ಲಿ 7ರಿಂದ 7.50ಲಕ್ಷ ಜನರು ಮಾತ್ರ ಭಾಗಿಯಾಗಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಪಾಲಿಕೆಯಿಂದ ಸಾಕಷ್ಟು ಜಾಗೃತಿ ಮೂಡಿಸಿದ್ದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ಅಲ್ಲದೆ ಅನೇಕರು ಪರಿಶಿಷ್ಟ ಜಾತಿಯವರಾಗಿದ್ದರೂ ನಾನಾ ಕಾರಣಗಳಿಂದ ಸಹ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಸಮೀಕ್ಷೆಯಲ್ಲಿ ಭಾಗಿಯಾಗದಿದ್ದರೂ ಮೀಸಲಾತಿ ಸೌಲಭ್ಯ ಪಡೆಯಲು ಯಾವ ತೊಂದರೆ ಆಗುವುದಿಲ್ಲ ಎಂಬ ಕಾರಣದಿಂದ ಸಮೀಕ್ಷೆಯಿಂದ ದೂರ ಉಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಬಿಬಿಎಂಪಿ ವ್ಯಾಪ್ತಿಯ ಸಮುದಾಯದ ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸುವಲ್ಲಿ ಪರಿಣಾಮಕಾರಿಯಾಗಿ ಭಾಗಿಯಾಗಿಲ್ಲ. ಹೀಗಾಗಿ ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಮಾಡಲು ಬೇರೆ ಮಾರ್ಗಗಳನ್ನು ಹುಡುಕಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ