ಕನ್ನಡಪ್ರಭ ವಾರ್ತೆ, ತುಮಕೂರುಹಿರಿಯ ರಂಗಕರ್ಮಿ ಮಾಜಿ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಅವರನ್ನು ಸರ್ಕಾರಿ ಅಧಿಕಾರಿಗಳು ಕಚೇರಿಗೆ ಮೂರನೇ ಬಾರಿ ಅಲೆದಾಡಿಸಿದ ಘಟನೆ ಗುಬ್ಬಿ ತಾಲೂಕಿನ ಭೂಮಾಪನ ಕಚೇರಿಯಲ್ಲಿ ನಡೆದಿದೆ.
ಒಂದು ತಿಂಗಳ ಹಿಂದೆ ರಾಜ್ಯಸಭಾ ಮಾಜಿ ಸದಸ್ಯೆ ಜಯಶ್ರೀ ಅವರು ತಮ್ಮದೇ ಜಮೀನನ್ನು ರಂಗ ಚಟುವಟಿಕೆಗೆ ಬಳಸಲು ದಾನವಾಗಿ ಸುಮಾರು 5 ಗುಂಟೆ ಜಮೀನು ನೀಡಲು ಸಜ್ಜಾದರು. ಸರ್ಕಾರ ಸಹ ರಂಗ ಸಜ್ಜಿಕೆಗೆ ಅನುದಾನ ಮಂಜೂರು ಮಾಡಿದೆ. ಆದರೆ ದಾನ ಪ್ರಕ್ರಿಯೆ ನಡೆಸಲು ಅವಶ್ಯವಾದ ಸರ್ವೆ ಕೆಲಸ ಮಾಡಲು ಭೂ ಮಾಪನ ಇಲಾಖೆಗೆ ಮೂರು ಬಾರಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಮೂರು ಬಾರಿ ಕಟ್ಟಿದ್ದರು. ಸಾಮಾನ್ಯ ಅರ್ಜಿ ಸೇರಿದಂತೆ ಎರಡು ಬಾರಿ ಸ್ವಾವಲಂಬಿ ಅರ್ಜಿ ಸಲ್ಲಿಸಿದ ನಂತರ ಈಗ ಆಗ ಎನ್ನುತ್ತಲೇ ಗುರುವಾರ ಬರಲು ಸರ್ವೇಯರ್ ಶಿವಾನಂದ್ ಹೇಳಿದ್ದರು.ಮಾಜಿ ಸಂಸದೆ ಜಯಶ್ರೀ ಹೇಳಿದಂತೆ ಬೆಂಗಳೂರಿನಿಂದ ಗುಬ್ಬಿ ಕಚೇರಿಗೆ ಬಂದರೆ ಶಿವಾನಂದ್ ಬೇರೆಡೆ ಸರ್ವೆ ಕೆಲಸವಿದೆ. ನಮ್ಮ ಮೇಲಾಧಿಕಾರಿಗಳ ಕೆಲಸ. ಪೋನ್ ಕರೆ ಬಂದಿದೆ ಆಗಾಗಿ ಆ ಕೆಲಸ ಮುಖ್ಯ. ನಿಮ್ಮದಲ್ಲ ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದು ಜಯಶ್ರೀ ಅವರಲ್ಲಿ ತೀವ್ರ ಬೇಸರ ತಂದಿದೆ. ಇಲ್ಲಿನ ವ್ಯವಸ್ಥೆ ಕರ್ತವ್ಯ ಲೋಪದ ಬಗ್ಗೆ ತೀವ್ರ ಅಸಮಾಧಾನ ಸಹ ವ್ಯಕ್ತಪಡಿಸಿದರು.ಕೋಟ್...
ಮೂರು ಅರ್ಜಿಗಳನ್ನು ಸಲ್ಲಿಸಿ ಒಟ್ಟು 3,500 ರು.ಗಳನ್ನು ಶುಲ್ಕ ಕಟ್ಟಿ ಹೇಳಿದ ಸಮಯಕ್ಕೆ ಕಚೇರಿ ಬಳಿ ಬಂದರೂ ಕೈಗೆ ಸಿಗದ ಸರ್ವೇಯರ್ ಉದ್ಧಟತನ ಮಾತುಗಳಾಡಿ ತೀವ್ರ ಬೇಸರ ಉಂಟು ಮಾಡಿದ್ದಾರೆ. ಕಚೇರಿಯಲ್ಲಿ ಸಾರ್ವಜನಿಕರ ಕೆಲಸಕ್ಕೆ ಮನ್ನಣೆ ಸಿಗದಿದ್ದರೆ ಹೇಗೆ, ಮಾಜಿ ಸಂಸದೆ ನನಗೆ ಅಲೆದಾಡುವ ಈ ಗತಿ ಬಂದಿದೆ. ಸಾಮಾನ್ಯ ರೈತನ ಕತೆ ಏನು ಎಂದು ಪ್ರಶ್ನಿಸಿದರು. ಸರ್ವೆ ಮೇಲ್ವಿಚಾರಕ ನಿಜಗುಣಪ್ಪ ಅವರೊಂದಿಗೆ ನಮ್ಮ ಇಲಾಖೆಯ ಕಮಿಷನರ್ ಕಚೇರಿಯಿಂದ ಮೌಖಿಕ ಆದೇಶ ಬಂದ ಹಿನ್ನಲೆ ನಿಟ್ಟೂರು ಭಾಗಕ್ಕೆ ತೆರಳಿದ್ದೇನೆ ಎಂದು ಹಾರಿಕೆ ಉತ್ತರ ನೀಡಿದ ಪರವಾನಗಿ ಸರ್ವೇಯರ್ ಶಿವಾನಂದ್ ಅವರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕು ಎಂದು ಸ್ಥಳದಲ್ಲಿ ಒತ್ತಾಯಿಸಿದರು.ಸ್ಥಳಕ್ಕೆ ಧಾವಿಸಿದ ಸರ್ವೇಯರ್ ದಿನೇಶ್ ಹಾಗೂ ಬಾಹುಬಲಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು. ಶಿವಾನಂದ್ ಅವರು ಅರ್ಜಿಗೆ ಸಹಿ ಹಾಕಿಸಲು ಸೂಚಿಸಿದ್ದ ಮತ್ತೋರ್ವ ಸರ್ವೇಯರ್ ರಂಗಸ್ವಾಮಿ ಬಂದು ಸಹಿ ಪಡೆದರು. ಸಹಾಯಕ ನಿರ್ದೇಶಕ ತಿಮ್ಮಯ್ಯ ಅವರೊಂದಿಗೆ ಮೊಬೈಲ್ ಮೂಲಕ ಮಾತನಾಡಿ ಜಯಶ್ರೀ ಅವರು ಮಾಜಿ ಸಂಸದೆ ಸ್ಥಾನಕ್ಕೆ ಕೊಂಚ ಬೆಲೆ ನೀಡಬೇಕಿತ್ತು ಎಂದು ತಿಳಿಸಿ ಬೇಸರದಲ್ಲೇ ಕಚೇರಿಯಿಂದ ಹೊರ ನಡೆದರು.