3ನೇ ಹಂತ ಮೆಟ್ರೋ ನಿರ್ಮಾಣಕ್ಕೆ ಸರ್ವೆ ಶೀಘ್ರ

KannadaprabhaNewsNetwork |  
Published : May 03, 2024, 01:07 AM ISTUpdated : May 03, 2024, 07:10 AM IST
ಮೆಟ್ರೋ | Kannada Prabha

ಸಾರಾಂಶ

ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಕಾಮಗಾರಿಗಾಗಿ ಭೂಸ್ವರೂಪದ ಅಧ್ಯಯನದ ವರದಿ ಪಡೆಯಲು ಬೆಂಗಳೂರು ಮೆಟ್ರೋ ರೈಲು ನಿಗಮವು ಶೀಘ್ರ ‘ಜಿಯೋಟೆಕ್ನಿಕಲ್‌ ಇನ್‌ವೆಸ್ಟಿಗೇಶನ್‌’ ಕೈಗೊಳ್ಳಲಿದೆ.

ಮಯೂರ್‌ ಹೆಗಡೆ

 ಬೆಂಗಳೂರು :  ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಕಾಮಗಾರಿಗಾಗಿ ಭೂಸ್ವರೂಪದ ಅಧ್ಯಯನದ ವರದಿ ಪಡೆಯಲು ಬೆಂಗಳೂರು ಮೆಟ್ರೋ ರೈಲು ನಿಗಮವು ಶೀಘ್ರ ‘ಜಿಯೋಟೆಕ್ನಿಕಲ್‌ ಇನ್‌ವೆಸ್ಟಿಗೇಶನ್‌’ ಕೈಗೊಳ್ಳಲಿದೆ.

ಮೂರನೇ ಹಂತದ ಮೆಟ್ರೋ ಎರಡು ಮಾರ್ಗ ಒಳಗೊಂಡಿದ್ದು, ಒಟ್ಟು 44.65 ಕಿ.ಮೀ. ಉದ್ದದ ಯೋಜನೆ. ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ (32.5 ಕಿ.ಮೀ.) ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ (12.5 ಕಿ.ಮೀ.) ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದ ಕಾಮಗಾರಿ 2024ರ ಅಂತ್ಯ ಅಥವಾ 2025ರ ಆರಂಭಿಕ ತಿಂಗಳಲ್ಲೇ ಶುರುವಾಗುವ ನಿರೀಕ್ಷೆ ಇದೆ.

ಯೋಜನೆಗೆ ಈಗಾಗಲೇ ಡಿಪಿಆರ್‌ ಆಗಿದ್ದು, ರಾಜ್ಯ ಸರ್ಕಾರ ಅನುಮೋದನೆ ದೊರೆತಿದೆ. ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿ ಅನುಮೋದನೆ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದ್ದು, ಹಸಿರು ನಿಶಾನೆ ಬಾಕಿ ಇದೆ. ರಾಜ್ಯ ಸರ್ಕಾರದ ಅನುಮತಿ ಸಿಕ್ಕಿರುವ ಕಾರಣ ಬಿಎಂಆರ್‌ಸಿಎಲ್‌ ಕಾಮಗಾರಿ ಆರಂಭಕ್ಕೆ ಬೇಕಾದ ಭೂಸ್ವಾದೀನ, ಪರಿಹಾರ ವಿತರಣೆಯ ಕ್ರಮ ಸೇರಿ ಇತರೆ ಎಲ್ಲ ಪ್ರಾಥಮಿಕ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದರ ಭಾಗವಾಗಿ ಕಳೆದ ತಿಂಗಳು ಬಿಎಂಆರ್‌ಸಿಎಲ್‌ ಕರೆದಿದ್ದ ‘ಜಿಯೋಟೆಕ್ನಿಕಲ್‌ ಇನ್ವೆಸ್ಟಿಗೇಶನ್‌’ ಟೆಂಡರ್‌ ಇನ್ನೊಂದು ವಾರದಲ್ಲಿ (ಮೇ 7) ಟೆಂಡರ್‌ ತೆರೆಯಲಿದೆ. ಟೆಂಡರ್‌ ಪಡೆವ ಸಂಸ್ಥೆ ಐದು ತಿಂಗಳಲ್ಲಿ ವರದಿ ನೀಡಬೇಕಿದೆ. ಸುಮಾರು ₹6 ಕೋಟಿ ಮೊತ್ತದಲ್ಲಿ ಈ ತಪಾಸಣೆ ನಡೆಯಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ನಾಲ್ಕು ಹಂತ:

ಜಿಯೋಟೆಕ್ನಿಕಲ್‌ ಇನ್‌ವೆಸ್ಟಿಗೇಶನನ್ನು ಬಿಎಂಆರ್‌ಸಿಎಲ್‌ ನಾಲ್ಕು ಪ್ಯಾಕೇಜ್‌ಗಳಲ್ಲಿ ನಡೆಸಲು ನಿರ್ಧಾರವಾಗಿದೆ. ಮೊದಲ ಹಂತ ಜೆ.ಪಿ.ನಗರ 4ನೇ ಹಂತದಿಂದ ಮೈಸೂರು ರೋಡ್‌ ನಿಲ್ದಾಣದವರೆಗೆ, ಎರಡನೇ ಹಂತ ಮೈಸೂರು ರೋಡ್‌ ನಿಲ್ದಾಣದಿಂದ ಕಂಠೀರವ ಸ್ಟೂಡಿಯೋ ನಿಲ್ದಾಣ, ಮೂರನೇ ಹಂತ ಕಂಠೀರವದಿಂದ ಆರಂಭವಾಗಿ ಕೆಂಪಾಪುರ ನಿಲ್ದಾಣದವರೆಗೆ ನಡೆಯಲಿದೆ. ನಾಲ್ಕನೇ ಪ್ಯಾಕೇಜ್‌ ಹೊಸಹಳ್ಳಿ ಸ್ಟೇಷನ್‌ನಿಂದ ಕಡಬಗೆರೆ ಹಾಗೂ ಮುಂದುವರಿದು ಸುಂಕದಕಟ್ಟೆ ಡಿಪೋವರೆಗೆ ನಡೆಯಲಿದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ.ಜಿಯೋಟೆಕ್ನಿಕಲ್‌ ಸರ್ವೆ ಎಂದರೇನು?

ನಮ್ಮ ಮೆಟ್ರೋದಲ್ಲಿ ಒಂದು ಕಿ.ಮೀ. ಎಲೆವೆಟೆಡ್‌ ಕಾರಿಡಾರ್‌ಗೆ ಸಾಮಾನ್ಯವಾಗಿ 40 ಪಿಲ್ಲರ್‌ಗಳು ನಿರ್ಮಾಣ ಆಗುತ್ತವೆ. ಮೂರನೇ ಹಂತದ ಮಾರ್ಗಕ್ಕಾಗಿ ಪಿಲ್ಲರ್‌ ನಿರ್ಮಾಣ ಆಗುವ ಭೂಮಿಯ ಸ್ವರೂಪ ಹೇಗಿದೆ, ಕಲ್ಲು, ಮಣ್ಣು ಸಡಿಲವಾಗಿದೆಯೇ? ಎಷ್ಟು ಆಳದಿಂದ ತಳಪಾಯ ಮಾಡಿಕೊಳ್ಳಬೇಕು, ಪ್ರಸ್ತುತ ಮಾರ್ಗಗಳಿಗೆ ಹೋಲಿಸಿದರೆ ಪಿಲ್ಲರ್‌ಗಳಲ್ಲಿ ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬೇಕು ಎಂದು ಈ ಸರ್ವೆಯಿಂದ ತಿಳಿಯಲಿದೆ. ಇದಕ್ಕಾಗಿ ಮೂರನೇ ಮಾರ್ಗ ಸಾಗುವಲ್ಲಿ ಸುಮಾರು 30 ಮೀ. ಆಳಕ್ಕೆ ಕೊಳವೆ ಕೊರೆದು ವಿವಿಧ ತಪಾಸಣೆ ಕೈಗೊಳ್ಳಲಾಗುತ್ತದೆ. ಜೊತೆಗೆ ನಿಲ್ದಾಣ ನಿರ್ಮಾಣ ಆಗುವ ಸ್ಥಳದ ಭೂಸ್ವರೂಪ ಹೇಗಿದೆ ಎಂಬುದರ ಬಗ್ಗೆಯೂ ಅಧ್ಯಯನ ನಡೆಯಲಿದೆ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್‌ ತಿಳಿಸಿದರು.ಡಬ್ಬಲ್‌ ಡೆಕ್ಕರ್‌ ಮಾದರಿ:

ಜೊತೆಗೆ ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದಲ್ಲಿ ರೂಪಿಸಿದಂತೆ ಮೆಟ್ರೋ ಕಂ ರಸ್ತೆಯ ಡಬ್ಬಲ್‌ ಡೆಕ್ಕರ್‌ ಮಾದರಿಯನ್ನು ಈ ಮಾರ್ಗಗಳಲ್ಲೂ ಅನುಸರಿಸಲು ಯೋಜಿಸಲಾಗಿದೆ. ಇದರ ಕಾರ್ಯಸಾಧ್ಯತಾ ವರದಿ ತಯಾರಿಸಿಕೊಳ್ಳಲೂ ನಮ್ಮ ಮೆಟ್ರೋ ಮುಂದಾಗಿದ್ದು, ಈ ಸಂಬಂಧದ ಟೆಂಡರ್‌ ಪ್ರಸ್ತುತ ಮೌಲ್ಯಮಾಪನ ಹಂತದಲ್ಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ವಿವರಿಸಿದರು.

ಮೂರನೇ ಹಂತದ ಯೋಜನೆ ಕಾಮಗಾರಿಗೆ ಟೆಂಡರ್‌ ಕರೆಯುವ ಮುನ್ನ ಅಗತ್ಯ ಸಲಹೆ, ಸೂಚನೆ ನೀಡಲು, ಇನ್ನೊಮ್ಮೆ ಯೋಜನಾ ಮೊತ್ತ ದೃಢೀಕರಣಕ್ಕಾಗಿ ಹಾಗೂ ಬದಲಾವಣೆ ಇದ್ದರೆ ಮಾಡಿಕೊಳ್ಳಲು ಜಿಯೋಟೆಕ್ನಿಕಲ್‌ ಸರ್ವೆ ಮಾಡಿಕೊಳ್ಳಲಾಗುತ್ತಿದೆ. ಶೀಘ್ರವೇ ಈ ಪ್ರಕ್ರಿಯೆ ನಡೆಸಲಾಗುವುದು.

-ಯಶವಂತ ಚೌಹಾಣ್‌, ಬಿಎಂಆರ್‌ಸಿಎಲ್‌, ಸಿಪಿಆರ್‌ಒ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ