ಕನ್ನಡಪ್ರಭ ವಾರ್ತೆ ಮಡಿಕೇರಿ ಜಿಲ್ಲೆಯಲ್ಲಿ ಹಲವು ದಶಕಗಳಿಂದ ಜಮ್ಮಾಬಾಣೆ ಭೂಮಿ ಸರ್ವೆ ಮಾಡಲು ಬಾಕಿ ಇದ್ದು, ಆ ನಿಟ್ಟಿನಲ್ಲಿ ಸಾಗುವಳಿ ಮಾಡುವವರಿಗೆ ಆರ್‌ಟಿಸಿ (ಪಹಣಿ) ಮಾಡಿಕೊಡಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಳ್ಳಲು ಮುಂದಾಗುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ.
ಜಮ್ಮಾ ಭೂಮಿ ಹಿಡುವಳಿದಾರರಿಗೆ ಆರ್‌ಟಿಸಿ ಇಲ್ಲದಿರುವುದರಿಂದ ಸಾಲ ಸೌಲಭ್ಯ ಹಾಗೂ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೃಷಿ ಮಾಡುವ ಕುಟುಂಬದವರಿಗೆ ಆರ್‌ಟಿಸಿ ಮಾಡಿಕೊಡಬೇಕಿದ್ದು, ಆ ನಿಟ್ಟಿನಲ್ಲಿ ಸರ್ವೇ ಕಾರ್ಯವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಕೊಡಗು ಜಿಲ್ಲೆಯಲ್ಲಿ 25 ಸಾವಿರ ಜನರು ಜಮ್ಮಬಾಣೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ಪಟ್ಟೆದಾರ ಕುಟುಂಬದ ಒಬ್ಬರ ಹೆಸರಿಗೆ ಮಾತ್ರ ಭೂಮಿ ಇದ್ದು, ಆ ಕುಟುಂಬದ ಇತರರಿಗೂ ಆರ್‌ಟಿಸಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ಸರ್ವೇ ಕಾರ್ಯ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.ಜಮ್ಮಾಬಾಣೆ ಭೂಮಿ ಸಂಬಂಧ ತಕರಾರು ಇಲ್ಲದಿದ್ದಲ್ಲಿ ನೇರವಾಗಿ ಸರ್ವೆ ಮಾಡಬಹುದಾಗಿದೆ. ತಕರಾರು ಇದ್ದಲ್ಲಿ ಗ್ರಾಮ ಸಭೆಯಲ್ಲಿ ಇಟ್ಟು ಗ್ರಾಮಸ್ಥರ ಸಹಕಾರ ಪಡೆಯಬಹುದಾಗಿದೆ. ಇದೊಂದು ಆಂದೋಲನ ರೂಪದಲ್ಲಿ ಕೈಗೊಳ್ಳಬೇಕಿದ್ದು, ತಹಸೀಲ್ದಾರರು ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ತಂಡವು ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದರು.
ಸರ್ವೇ ಮಾಡಲು ಆಧುನಿಕ ಉಪಕರಣಗಳನ್ನು ಒದಗಿಸಲಾಗುವುದು. ಪರವಾನಗಿ ಇರುವ ಸರ್ವೇ ಮಾಪಕರನ್ನು ಬಳಸಿಕೊಂಡು ಸರ್ವೇ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸಲಹೆ ಮಾಡಿದರು.
ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರ ಮೊದಲ ಕಂತನ್ನು ಒದಗಿಸಲಾಗಿದ್ದು, ಯಾರಾದರೂ ಬಿಟ್ಟು ಹೋಗಿದ್ದಲ್ಲಿ ಸೇರ್ಪಡೆ ಮಾಡುವಂತಾಗಬೇಕು ಎಂದು ಸಚಿವರು ಸಲಹೆ ಮಾಡಿದರು. ಬರ ಪರಿಹಾರದಲ್ಲಿ ಹಣ ಪೋಲು ಆಗಬಾರದು. ಪ್ರೂಟ್ಸ್ ಗುರುತಿನ ಚೀಟಿ ಇದ್ದಲ್ಲಿ ಒಳ್ಳೆಯದು ಎಂದರು. ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ವ್ಯತ್ಯಯವಾಗದಂತೆ ಗಮನಹರಿಸಬೇಕು. 24 ಗಂಟೆಯೊಳಗೆ ಕುಡಿಯುವ ನೀರು ಪೂರೈಸಬೇಕು ಎಂದರು.
ಸರ್ವೇ ಇಲಾಖೆ ಆಯುಕ್ತ ಮಂಜುನಾಥ್ ಮಾತನಾಡಿ, ಜಮ್ಮಾ ಬಾಣೆ ಸಂಬಂಧಿಸಿದಂತೆ ಎ.ಖರಾಬು ಜಮೀನು, ಪೈಸಾರಿ ಹಾಗೂ ಪೈಸಾರಿ ಅಲ್ಲದ ಭೂಮಿ ಮತ್ತಿತರ ಸಂಬಂಧ ಸರ್ವೇ ಮಾಡಿ ಸಾಗುವಳಿ ಕೃಷಿಕರಿಗೆ ಭೂಮಿ ಒದಗಿಸಬೇಕಿದೆ
ಭೂ ದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ 24 ಪರವಾನಗಿ ಸರ್ವೇಯರ್‌ಗಳು ಇದ್ದು, 15 ಮಂದಿ ಸರ್ಕಾರಿ ಸರ್ವೇಯರ್‌ಗಳು ಇದ್ದಾರೆ ಎಂದರು.
ನಗರಸಭೆ ಅಧ್ಯಕ್ಷ ನೆರವಂಡ ಅನಿತಾ ಪೂವಯ್ಯ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ತಹಶೀಲ್ದಾರರಾದ ಕಿರಣ್ ಗೌರಯ್ಯ, ರಾಮಚಂದ್ರ, ನವೀನ್ ಇತರರು ಹಲವು ಮಾಹಿತಿ ನೀಡಿದರು.ಉಪ ನೋಂದಣಾಧಿಕಾರಿ ಕಚೇರಿ ದಾಖಲೆಗಳನ್ನು ಸಹ ಡಿಜಿಟಲೀಕರಣ ಮಾಡಲಾಗುತ್ತಿದೆ. ಆ ನಿಟ್ಟಿನಲ್ಲಿ ವಿರಾಜಪೇಟೆಯಲ್ಲಿ ಇಂದು ಚಾಲನೆ ನೀಡಲಾಗುತ್ತಿದೆ. ಎರಡು ಮೂರು ತಿಂಗಳಲ್ಲಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಚಾಲನೆಗೊಳ್ಳುವ ಸಾಧ್ಯತೆ ಇದೆ.