ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಾಗ ಒತ್ತುವರಿ ಸರ್ವೇ ಆರಂಭ

KannadaprabhaNewsNetwork |  
Published : Feb 11, 2025, 12:45 AM IST
ಶಹಾಪುರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಜಾಗ ಸರ್ವೇ ಮಾಡುತ್ತಿರುವ ಅಧಿಕಾರಿಗಳು. | Kannada Prabha

ಸಾರಾಂಶ

Survey on encroachment of government first grade college land begins

- ಕನ್ನಡಪ್ರಭ ವರದಿ ಹಿನ್ನೆಲೆ ಸೋಮವಾರ ಸರ್ವೇ ಕಾರ್ಯ ಆರಂಭಸಿದ ಇಲಾಖೆ

----

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಜಾಗವನ್ನು ಒತ್ತುವರಿ ಆರೋಪಗಳ ಹಿನ್ನೆಲೆ ಭೂಮಾಪನ ಇಲಾಖೆಯ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದರು. ಅಧಿಕಾರಿಗಳು ನಡೆಸಿದ ಸರ್ವೇ ಕಾರ್ಯ ಕಾಟಾಚಾರಕ್ಕಾಗಿ ಮಾಡಿದಂತಿದೆ ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಸರ್ವೇ ನಂಬರ್ 504ರಲ್ಲಿ 13ಎಕರೆ 22 ಗುಂಟೆ. ಜಮೀನಿನಲ್ಲಿ ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ರಸ್ತೆ ಎರಡು ಭಾಗದಲ್ಲಿ ಜಮೀನು ಹಂಚಿಹೋಗಿದೆ. ಅಂದಾಜು 1.5 ರಿಂದ 2 ಎಕರೆ ಜಮೀನು ಹೆದ್ದಾರಿಯ ಉತ್ತರ ದಿಕ್ಕಿನಲ್ಲಿದೆ. ಈ ಜಮೀನು ಮೇಲ್ನೋಟಕ್ಕೆ ಅತಿಕ್ರಮಣ ಮಾಡಿರುವುದು ಕಂಡು ಬಂದಿದೆ. ಜಮೀನನ್ನು ಆದಷ್ಟು ಬೇಗ ಹದ್ದುಬಸ್ತು ಮಾಡಿಕೊಡುವಂತೆ ಕಾಲೇಜಿನ ಪ್ರಾಚಾರ್ಯರು 2022ರ ಅ.13 ರಂದು ತಾಲೂಕು ದಂಡಾಧಿಕಾರಿಗಳಿಗೆ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದರು.

ಇದಕ್ಕೆ ಅಧಿಕಾರಿಗಳಿಂದ ಸ್ಪಂದನೆ ಸಿಗದಿದ್ದಾಗ, ಮತ್ತೆ ಕಾಲೇಜು ಪ್ರಾಂಶುಪಾಲರು 2023ರ ಮೇ 20ರಂದು ಕಾಲೇಜು ಜಮೀನು ಹದ್ದುಬಸ್ತು ಮಾಡಿ ಕೊಡುವಂತೆ ಜಿಲ್ಲಾಧಿಕಾರಿಯವರಿಗೆ ನೇರವಾಗಿ ಪತ್ರ ಬರೆದಿದ್ದರು. ಈ ಬಗ್ಗೆ ಕನ್ನಡಪ್ರಭದಲ್ಲಿ ಡಿ.31 ರಂದು ಶಹಾಪುರ ಸರ್ಕಾರಿ ಕಾಲೇಜಿನ ಜಾಗ ಒತ್ತುವರಿ ಕುರಿತು ವಿಶೇಷ ವರದಿ ಮಾಡಿತ್ತು. ಈ ವರದಿ ಹಿನ್ನೆಲೆ ಎಚ್ಚೆತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ 1.20 ಎಕರೆಯಿಂದ 2 ಎಕರೆ ಜಮೀನು ತಾಲೂಕು ಭೂಮಾಪಕರು, ಜಿಲ್ಲಾ ಭೂಮಾಪಕರು ಸರ್ವೇ ಕಾರ್ಯ ಆರಂಭಿಸಿದ್ದಾರೆ.

* ಸರ್ವೇ ಕಾರ್ಯ: ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ 80 ಮೀಟರ್ ಬಿಟ್ಟು ಸರ್ವೇ ಕಾರ್ಯ ಮಾಡಲಾಗಿದೆ. ಒಂದು ಮೂಲೆಯಲ್ಲಿ 32 ಮೀಟರ್ ಮಧ್ಯಭಾಗದಲ್ಲಿ 36, ಇನ್ನೊಂದು ಭಾಗದಲ್ಲಿ 39 ಮೀಟರ್ ಜಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ್ದಾಗಿದೆ ಎಂದು ತಾಲೂಕು ಸರ್ವೇಯರ್ ಸೂರ್ಯಕಾಂತ್ ತಿಳಿಸಿದ್ದಾರೆ.

------

ಕೋಟ್-1: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಜಮೀನನ್ನು ಭೂ ಮಾಪನ ಇಲಾಖೆಯವರು ಸರ್ವೆ ಮಾಡಿ ಜಾಗ ಗುರುತಿಸಿ ಕೊಟ್ಟಿದ್ದಾರೆ.- ಉಮಾಕಾಂತ್ ಹಳ್ಳೆ, ತಹಸೀಲ್ದಾರ್, ಶಹಾಪುರ.

-------

10ವೈಡಿಆರ್6: ಶಹಾಪುರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಜಾಗ ಸರ್ವೇ ಮಾಡುತ್ತಿರುವ ಅಧಿಕಾರಿಗಳು.

-

10ವೈಡಿಆರ್7: 2024ರ ಡಿ.31 ರಂದು ಶಹಾಪುರ ಸರಕಾರಿ ಕಾಲೇಜಿನ ಜಾಗ ಒತ್ತುವರಿ ಎಂಬ ಶೀರ್ಷಿಕೆಯಡಿ ಪ್ರಕಟಿಸಿದ್ದ ಕನ್ನಡಪ್ರಭ ವರದಿ

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ