ಅಂಕೋಲಾ: ತಾಲೂಕಿನ ಕೇಣಿಯಲ್ಲಿ ವಾಣಿಜ್ಯ ಗ್ರೀನ್ ಫೀಲ್ಡ್ ಯೋಜನೆಯ ಸರ್ವೆ ಕಾರ್ಯಕ್ಕೆ ಮುಂದಾದ ಕ್ರಮವನ್ನು ಇಲ್ಲಿನ ನೂರಾರು ಮೀನುಗಾರರು ಖಂಡಿಸಿ, ಸಮುದ್ರಕ್ಕೆ ಧುಮುಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆದಿದೆ.
ಕರ್ನಾಟಕ ಮೆರಿಟೈಮ್ ಬೋರ್ಡ್‌ನವರು ಸೋಮವಾರ ವಾಣಿಜ್ಯ ಕಾಮಗಾರಿ ಸ್ಥಳ ಗುರುತಿಸುವಿಕೆಗೆ ಪ್ರಕ್ರಿಯೆಯನ್ನು (ಜಿಯೋ ಟೆಕ್ನಿಕಲ್ ವರ್ಕ್) ಪೊಲೀಸರ ರಕ್ಷಣೆ ಬಳಸಿ ಸಮುದ್ರ ಪ್ರದೇಶದಲ್ಲಿ ಮುಂದಾಗಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಸೋಮವಾರ, ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿದ್ದರು. ಜಿಲ್ಲಾಡಳಿತ ಹಾಗೂ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಂತ್ರಸ್ತ ಗ್ರಾಮಸ್ಥರು ನಿಷೇಧಾಜ್ಞೆಯ ನಡುವೆಯೂ ನೂರಾರು ಸಂಖ್ಯೆಯಲ್ಲಿ ಉದ್ದೇಶಿತ ಬಂದರು ಕಾಮಗಾರಿಯ ಸ್ಥಳದಲ್ಲಿ ಸೇರಿ ಆಕ್ರೋಶ ವ್ಯಕ್ತಪಡಿಸಿದರು.ಕೇಣಿ ಬಂದರಿನಲ್ಲಿ ಹೈಡ್ರಾಮಾ:
ಬೆಳಿಗ್ಗೆ 9:30ಕ್ಕೆ ಪ್ರತಿಭಟನಾ ಸಭೆ ಸೇರಿದ ಮೀನುಗಾರರು 10:30ರೊಳಗೆ ಜಿಲ್ಲಾಧಿಕಾರಿ, ಶಾಸಕರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ, ಶಾಸಕರು ಬಾರದೇ ಇರುವುದರಿಂದ ತೀವ್ರ ಆಕ್ರೋಶಗೊಂಡ ಪ್ರತಿಭಟನಾಕಾರರು ಒಮ್ಮೆಲೆ ನೂರಾರು ಸಂಖ್ಯೆಯಲ್ಲಿ ಸಮುದ್ರಕ್ಕೆ ಇಳಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಡಿಸಿದರು.ಹೈರಾಣಾದ ಪೊಲೀಸರು:
ಸಮುದ್ರಕ್ಕೆ ಇಳಿದ ಪ್ರತಿಟನಾಕಾರರನ್ನು ದಡಕ್ಕೆ ತರಲು ಪೊಲೀಸರು ಹರ ಸಾಹಸ ಪಡಬೇಕಾಯಿತು. ಭಾರಿ ಎತ್ತರದ ಸಮುದ್ರದ ತೆರೆಗಳನ್ನು ಲೆಕ್ಕಿಸದೇ ಪ್ರತಿಭಟನಾಕಾರರು ಜೋರಾಗಿ ಘೋಷಣೆ ಕೂಗುತ್ತಲೇ ಬಂದರು ಕಾಮಗಾರಿ ನಮ್ಮಲ್ಲಿ ಬೇಡ ಎಂದು ಆಗ್ರಹಿಸಿದರು. ಅಂತೂ ಇಂತೂ ಪೊಲೀಸರು ಪ್ರತಿಭಟನಾಕಾರನ್ನು ಸಮಾಧಾನ ಪಡಿಸಿ ದಡಕ್ಕೆ ತರುವಲ್ಲಿ ಯಶಸ್ವಿಯಾದರು.ನಾಲ್ವರು ಅಸ್ವಸ್ಥ:
ಸಮುದ್ರಕ್ಕೆ ಇಳಿದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ನಾಲ್ವರು ಮಹಿಳೆಯರು ಅಸ್ವಸ್ಥರಾದ ಘಟನೆ ನಡೆಯಿತು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಇದರಲ್ಲಿ ಇಬ್ಬರಿಗೆ ತೀವ್ರ ಉಸಿರಾಟದ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು.ಮಧ್ಯಾಹ್ನದ ನಂತರವೂ ಪ್ರತಿಭಟನೆ ಮುಂದುವರೆಯಿತು. ವಿಪ ಸದಸ್ಯ ಗಣಪತಿ ಉಳ್ವೆಕರ್, ಮೀನುಗಾರ ಮುಖಂಡ ಗಣಪತಿ ಮಾಂಗ್ರೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ ಮತ್ತಿತತರರು ಸಮುದ್ರಕ್ಕೆ ಇಳಿದು, ನಾವು ಪ್ರಾಣವನ್ನೇ ಕಳೆದುಕೊಳ್ಳುತ್ತೇವೆ ಎಂದು ಸಮುದ್ರದ ನೀರಿನಲ್ಲಿ ತೇಲಿ ಹೋಗುವ ಸಂದರ್ಭ ಬಂದಾಗ ಪೊಲೀಸ್ ಇಲಾಖೆಯವರು ಹರಸಹಸ ಪಟ್ಟು ಇವರನ್ನು ಮೇಲೆ ತರಲು ಪ್ರಯತ್ನಿಸಿದರು. ಮಧ್ಯಾಹ್ನದ ಊಟ ಮಾಡದೆ, ಉರಿ ಬಿಸಿಲು ಲೆಕ್ಕಿಸದೇ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಾಹ್ನದ ನಂತರ ಬಂದ ಡಿಸಿ, ಶಾಸಕ ಸೈಲ್:ಪ್ರತಿಭಟನಾ ಸ್ಥಳಕ್ಕೆ ತಡವಾಗಿ ಬಂದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಹಾಗೂ ಶಾಸಕ ಸತೀಶ ಸೈಲ್ ವಿರುದ್ಧ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಅಹವಾಲನ್ನು ಡಿಸಿ, ಶಾಸಕರ ಮುಂದೆ ಹೇಳಿಕೊಂಡ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಇಲ್ಲಿ ಶುರು ಮಾಡಬೇಡಿ. ಒಂದು ವೇಳೆ ಯೋಜನೆ ಅನುಷ್ಠಾನವಾಗುವುದೇ ಆದಲ್ಲಿ ನಮ್ಮ ಹೆಣಗಳ ಮೇಲೆ ನಿರ್ಮಾಣವಾಗಲಿ ಎಂದು ಕಿಡಿಕಾರಿದರು.
ವಿಪ ಸದಸ್ಯ ಗಣಪತಿ ಉಳ್ಬೇಕರ್ ಮಾತನಾಡಿ, ಮೀನುಗಾರರ ಸಮಸ್ಯೆಗಳನ್ನು ಆಲಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಈಗ ಸ್ವಲ್ಪ ಪ್ರಮಾಣದಲ್ಲಿ ಮೀನುಗಾರರು ಸೇರಿದ್ದೇವೆ. ಮುಂದಿನ ದಿನಗಳಲ್ಲಿ ಈ ಬಂದರು ನಿರ್ಮಾಣವಾಗುತ್ತದೆ ಎಂದಾದಲ್ಲಿ ಮೀನುಗಾರ ಸಮುದಾಯದವರು ಜಿಲ್ಲೆಯ ಮೂಲೆ ಮೂಲೆಯಿಂದ ಬಂದು ಜೊತೆಯಾಗಿ ಪ್ರತಿಭಟನೆ ನಡೆಸುತ್ತೇವೆ. ಇದಕ್ಕೆ ಆಗುವ ಹೊಣೆಯನ್ನು ಜಿಲ್ಲಾಡಳಿತ ಸಂಪೂರ್ಣ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.ಶಾಸಕ ಸತೀಶ ಸೈಲ್ ಮಾತನಾಡಿ, ನಾನು ಮೀನುಗಾರರ ಪರ ಇದ್ದೇನೆ. ಈ ಯೋಜನೆ ಯಾವ ಅವಧಿಯಲ್ಲಿ ಆಗಿದ್ದು ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಸಾಧಕ ಬಾದಕಗಳನ್ನು ವಿಚಾರಿಸೋಣ. ಕರಾವಳಿಯ ತೀರಗುಂಟ ಹಲವು ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಯೋಗ್ಯ ಸ್ಥಳ ಯಾವುದು ಎನ್ನುವುದರ ಕುರಿತು ಸರ್ವೆ ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ಸ್ಥಳೀಯರು ತಮ್ಮ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ನಾವೆಲ್ಲ ಕುಳಿತು ಮಾತುಕತೆ ನಡೆಸೋಣ. ತಹಶೀಲ್ದಾರ್ ಕಾರ್ಯಾಲಯದಲ್ಲಿ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳೋಣ ಎಂದರು.
ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಮಾತನಾಡಿ, ಸರ್ಕಾರ ಯಾವುದೇ ಯೋಜನೆಗಳನ್ನು ಜಾರಿಗೊಳಿಸಿದ ಮೇಲೆ ಅಧಿಕಾರಗಳಾಗಿ ನಾವು ನಮ್ಮ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸಾರ್ವಜನಿಕರು ಸರ್ವೆ ಕಾರ್ಯದ ವಿರುದ್ಧ ಪ್ರತಿಭಟನೆ ಒಡ್ಡುತ್ತಾರೆ ಎನ್ನುವ ವಿಚಾರ ತಿಳಿದು ಬಂದಿತ್ತು. ಆ ಕಾರಣಕ್ಕಾಗಿ ಸೆಕ್ಷನ್ 144 ಜಾರಿಗೊಳಿಸಿದ್ದೇವೆ. ಇಲ್ಲಿ ನಿಮಗೆ ತೊಂದರೆ ನೀಡುವ ವಿಚಾರವಿಲ್ಲ. ನೀವು ನನಗೆ ಮನವಿ ನೀಡಿದ್ದು ನಿಜ. ಆದರೆ ಯಾವುದೇ ಸಭೆಯನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಸಿ ಎಂದು ನೀವು ತಿಳಿಸಿಲ್ಲ. ಸಾರ್ವಜನಿಕರ ಜೊತೆಯಲ್ಲಿ ಸಭೆ ನಡೆಸುವುದು ಯೋಜನೆ ಜಾರಿಗೊಳಿಸಿದ ಮೇಲೆ. ಈಗ ಪ್ರಾಥಮಿಕ ಹಂತದ ಸರ್ವೆ ಕಾರ್ಯ ನಡೆಯುತ್ತಿದೆ. ನಾವು ಸಹ ಜನರ ಪರವಾಗಿದ್ದೇವೆ ಎಂದರು.ಪ್ರಮುಖರಾದ ಶ್ರೀಕಾಂತ್ ದುರ್ಗೇಕರ್, ಚಂದ್ರಕಾಂತ ಹರಿಕಾಂತ್, ಗಣಪತಿ ಮಾಂಗ್ರೆ, ಸರಿತಾ ಬಲೆಗಾರ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಪಾಲ್ಗೊಂಡರು.