ಜೀವದ ಹಂಗು ತೊರೆದು ಪತ್ರಿಕಾ ವಿತರಕರ ಸೇವೆ: ಶಾಸಕ ಮಹೇಶ ಟೆಂಗಿನಕಾಯಿ

KannadaprabhaNewsNetwork | Published : Sep 5, 2024 12:40 AM

ಅನೇಕ ಕಷ್ಟದ ಮಧ್ಯೆಯೂ ಬೆಳಗ್ಗೆ 4 ಗಂಟೆಗೆ ಎದ್ದು ಪ್ರತಿ ಮನೆಗೂ ಹೋಗಿ ಪತ್ರಿಕೆ ವಿತರಿಸುವವರಿಗೆ ಸರ್ಕಾರಗಳು ಎಲ್ಲ ಸೇವಾ ಸೌಲಭ್ಯಗಳನ್ನು ನೀಡಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳ್ಳಿ: ಕೋವಿಡ್‌ ವೇಳೆ ಎಲ್ಲರೂ ಮನೆಯಲ್ಲಿ ಕುಳಿತಾಗ ಪತ್ರಿಕಾ ವಿತರಕರು ತಮ್ಮ ಜೀವದ ಹಂಗು ತೊರೆದು ಯೋಧರಂತೆ ಮುನ್ನುಗ್ಗಿ ಮನೆ ಮನೆಗೂ ಪತ್ರಿಕೆ ತಲುಪಿಸುವ ಕಾರ್ಯ ಕೈಗೊಂಡರು ಎಂದು ಶಾಸಕ ಮಹೇಶ ಟೆಂಗಿನಕಾಯಿ ಪತ್ರಿಕಾ ವಿತರಕರ ಸೇವೆಯನ್ನು ಶ್ಲಾಘಿಸಿದರು.

ಬುಧವಾರ ಇಲ್ಲಿ ಹುಬ್ಬಳ್ಳಿ ಪತ್ರಿಕಾ ಮಾರಾಟಗಾರರ ಸಂಘದ ವತಿಯಿಂದ ಬುಧವಾರ ನಡೆದ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕಾ ವಿತರಕ ವೃತ್ತಿಯು ಶ್ರೇಷ್ಠವಾದದ್ದು, ಅದರಿಂದಲೆ ಬದುಕು ಕಟ್ಟಿಕೊಂಡ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಮುಂದೆ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುವ ಮೂಲಕ ಮಹಾನ್ ಸಾಧನೆ ಮಾಡಿದರು. ಪತ್ರಿಕೆ ಪ್ರಕಟಗೊಂಡ ನಂತರ ಅದನ್ನು ಸಕಾಲಕ್ಕೆ ಓದುಗರ ಮನೆ ಬಾಗಿಲಿಗೆ ತಲುಪಿಸುವಲ್ಲಿ ವಿತರಕರ ಪಾತ್ರ ಹಿರಿದಾಗಿದೆ ಎಂದು ಪ್ರಶಂಸಿಸಿದರು.

ಅನೇಕ ಕಷ್ಟದ ಮಧ್ಯೆಯೂ ಬೆಳಗ್ಗೆ 4 ಗಂಟೆಗೆ ಎದ್ದು ಪ್ರತಿ ಮನೆಗೂ ಹೋಗಿ ಪತ್ರಿಕೆ ವಿತರಿಸುವವರಿಗೆ ಸರ್ಕಾರಗಳು ಎಲ್ಲ ಸೇವಾ ಸೌಲಭ್ಯಗಳನ್ನು ನೀಡಬೇಕು. ಆ ನಿಟ್ಟಿನಲ್ಲಿ ನಾವು ವಿರೋಧ ಪಕ್ಷದಲ್ಲಿದ್ದುಕೊಂಡು ಪತ್ರಿಕಾ ವಿತರಕರ ಬೇಡಿಕೆಗಳಿಗೆ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುತ್ತೇವೆ. ಪ್ರತಿಯೊಬ್ಬರು ಪತ್ರಿಕಾ ವಿತರಕರನ್ನು ಗೌರವಿಸುವ ಕೆಲಸ ಮಾಡಬೇಕು ಎಂದರು.

ಉದ್ಯಮಿ ಆನಂದ ಸಂಕೇಶ್ವರ ಮಾತನಾಡಿ, ಇಂದು ಎಷ್ಟೇ ತಂತ್ರಜ್ಞಾನ ಬೆಳೆದಿದ್ದರೂ ಡಿಜಿಟಲ್‌ ಅಬ್ಬರವಿದ್ದರೂ ಮುದ್ರಣ ಮಾಧ್ಯಮಕ್ಕೆ ಯಾವುದೇ ಆತಂಕವಿಲ್ಲ. ಇಂಥ ಮಾಧ್ಯಮದಲ್ಲಿ ಪತ್ರಿಕಾ ವಿತರಕರ ಪಾತ್ರ ಮುಖ್ಯವಾಗಿದೆ. ಇವರ ಶ್ರೇಯಸ್ಸಿಗೆ ಮಾಧ್ಯಮ ಸಂಸ್ಥೆಗಳು, ಸರ್ಕಾರ ಬೆನ್ನೆಲುವಾಗಿ ನಿಲ್ಲಬೇಕು ಎಂದರು.

ಸ್ವರ್ಣ ಗ್ರುಪ್ ಆಪ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ. ಪ್ರಸಾದ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಡಿಜಿಟಲ್ ಮಾಧ್ಯಮಗಳ ಅಬ್ಬರದ ಮಧ್ಯೆಯೋ ಪತ್ರಿಕೆಗಳ ಬೆಳೆವಣಿಗೆಗೆ ಶ್ರಮಿಸುತ್ತಿರುವ ವಿತರಕರ ಕಾರ್ಯ ಶ್ಲಾಘನೀಯ. ವಿತರಕರು ತಮ್ಮ ಸಮಸ್ಯೆಗಳ ಮಧ್ಯೆಯೂ ಸೇವೆಯನ್ನು ಪ್ರೀತಿಸುವ ಬಗೆ ಅದ್ಭುತವಾಗಿದೆ. ನಿತ್ಯ ಬೆಳಗ್ಗೆ 6 ಗಂಟೆಯಿಂದ 7ರ ಒಳಗೆ ಎಲ್ಲ ವಿತರಕರು ತಮ್ಮ ವ್ಯಾಪ್ತಿಯ ಮನೆಗಳಿಗೆ ಪತ್ರಿಕೆ ಹಂಚುವ ಮೂಲಕ ಮತ್ತಷ್ಟು ಉತ್ತಮ ಸೇವೆ ನೀಡುವಂತಾಗಬೇಕು ಎಂದ ಅವರು, ತಮ್ಮ ಮನೆಗೆ ಪತ್ರಿಕೆ ವಿತರಿಸುವ ಹುಡುಗನಿಗೆ ಒಂದು ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಉಡುಗೊರೆಯಾಗಿ ನೀಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ. ಶಂಭುಲಿಂಗ ಮಾತನಾಡಿ, ಕೋವಿಡ್‌ನ ಲಾಕ್‌ಡೌನ್ ಸಂದರ್ಭದಲ್ಲಿ ರಾಜ್ಯದಲ್ಲಿ 200ಕ್ಕೂ ಹೆಚ್ಚು ಪತ್ರಿಕಾ ವಿತರಕರನ್ನು ನಾವು ಕಳೆದುಕೊಂಡಿದ್ದೇವೆ. ಆ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ನೆರವಿಗೆ ಬರಲಿಲ್ಲ. ಆದರೆ, ಪತ್ರಿಕಾ ಸಂಸ್ಥೆಗಳು ನಮ್ಮ ನೋವಿಗೆ ಸ್ಪಂದಿಸುವ ಮೂಲಕ ಬೆನ್ನೆಲುಬಾಗಿ ನಿಂತವು. ಪತ್ರಿಕಾ ವಿತರಕರೆಲ್ಲರೂ ಸಂಘಟಿತರಾದಾಗ ಮಾತ್ರ ಸರ್ಕಾರದ ಮಟ್ಟದಲ್ಲಿ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳುವಂತೆ ಕರೆ ನೀಡಿದರು.

ಹುಬ್ಬಳ್ಳಿ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಮನೋಹರ ಪರ್ವತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿರಿಯ ಪತ್ರಕರ್ತರಾದ ಮೋಹನ ಹೆಗಡೆ, ಮಲ್ಲಿಕಾರ್ಜುನ ಸಿದ್ದಣ್ಣವರ, ಬಂಡು ಕುಲಕರ್ಣಿ, ಗಿರೀಶ ಪಟ್ಟಣಶೆಟ್ಟಿ, ಪ್ರಸನ್ನ ಚಿಕ್ಕೋಳ, ವಿಠ್ಠಲದಾಸ ಕಾಮತ, ಪ್ರಕಾಶ ಶೇಟ್, ಅಬ್ಬಾಸ ಮುಲ್ಲಾ ಹಾಗೂ ರಮೇಶ ಜಿತೂರಿ, ಶ್ರೀಪಾದ ಕುಲಕರ್ಣಿ, ಬಸವರಾಜ ಹಿರೇಮಠ ಮತ್ತಿತರರು ಇದ್ದರು.