ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ಮಂಗಳವಾರ ರಾತ್ರಿ ಬಿ.ಜಿ. ಕೃಷ್ಣಮೂರ್ತಿಯನ್ನು ಶಿವಮೊಗ್ಗಕ್ಕೆ ಪೊಲೀಸರು ಕರೆತಂದಿದ್ದಾರೆ. ಬುಧವಾರ ಬೆಳಗ್ಗೆ ಕಲಾಪ ಆರಂಭ ಆಗುತ್ತಿದ್ದಂತೆ ಪೊಲೀಸರು 2007ರಲ್ಲಿ ಹೊಸಗದ್ದೆಯಲ್ಲಿ ಬಸ್ ಸುಟ್ಟ ಪ್ರಕರಣ, 2009ರಲ್ಲಿ ಅರಣ್ಯ ಗೇಟ್ ಧ್ವಂಸ ಹಾಗೂ ಬಿದರಗೋಡು ಅರುಣಕುಮಾರ್ ಮನೆಯಲ್ಲಿ ಜೀಪ್ ಸುಟ್ಟು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಿದರು.
ಮೂರು ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಮಂಜುನಾಥ್ ನಾಯಕ್ ಅವರು ಬಸ್ ಸುಟ್ಟ ಪ್ರಕರಣ ಹಾಗೂ ಅರಣ್ಯ ಗೇಟ್ ಧ್ವಂಸ ಪ್ರಕರಣ ವಿಚಾರಣೆ ನಡೆಸಿದರು. ಜೀಪ್ ಸುಟ್ಟ ಪ್ರಕರಣ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು. ಅಲ್ಲದೇ, ಅನಾರೋಗ್ಯದ ಹಿನ್ನೆಲೆ ಕೃಷ್ಣಮೂರ್ತಿಗೆ ಜೈಲಿನಲ್ಲಿ ಚಿಕಿತ್ಸೆ ನೀಡಲು ಕೋರ್ಟ್ ಅವಕಾಶ ನೀಡಿದೆ. ಸರ್ಕಾರ ಪರವಾಗಿ ಅಭಿಯೋಜಕ ಸುರೇಶ್ ವಾದ ಮಂಡಿಸಿದರು. ಆರೋಪಿ ಪರ ಕೆ.ಪಿ.ಶ್ರೀಪಾಲ್ ವಾದ ಮಂಡಿಸಿದರು.2021ರ ನವೆಂಬರ್‌ನಲ್ಲಿ ಕೇರಳ ಪೊಲೀಸರಿಂದ ಬಂಧಿತನಾಗಿದ್ದ ಬಿ.ಜಿ. ಕೃಷ್ಣಮೂರ್ತಿ ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಲ್ಲಿದ್ದರು. ಮಂಗಳವಾರ ರಾತ್ರಿ ಶಿವಮೊಗ್ಗಕ್ಕೆ ಬಾಡಿ ವಾರಂಟ್ ಮೇಲೆ ಕರೆ ತಂದಿದ್ದ ತೀರ್ಥಹಳ್ಳಿ ಪೊಲೀಸರು ಬಿಗಿ ಬಂದೋಬಸ್ತ್‌ನಲ್ಲಿ ಕೋರ್ಟ್‌ಗೆ ಹಾಜರುಪಡಿಸಿದರು.
ಬಿ.ಜಿ. ಕೃಷ್ಣಮೂರ್ತಿ ನ್ಯಾಯಾಲಯಕ್ಕೆ ಹಾಜರಾಗುವ ಬಗ್ಗೆ ಮೊದಲೇ ತಿಳಿದಿದ್ದರಿಂದ ಬುಧವಾರ ಶಿವಮೊಗ್ಗ ನ್ಯಾಯಾಲಯ ಆವರಣ ಕಿಕ್ಕಿರಿದಿತ್ತು. ಶಿವಮೊಗ್ಗದಲ್ಲಿ ಕಾನೂನು ಪದವಿ ಪಡೆದಿದ್ದ ಕೃಷ್ಣಮೂರ್ತಿ ಕೆಲವರ್ಷ ಶಿವಮೊಗ್ಗದಲ್ಲಿ ಪತ್ರಕರ್ತನಾಗಿ, ಪ್ರಗತಿ ಪರ ಸಂಘಟನೆಗಳಲ್ಲಿ ಕೆಲಸ ಮಾಡಿದ್ದರಿಂದ ಅವರನ್ನು ನೋಡಲು ಪರಿಚಿತರು ನ್ಯಾಯಾಲಯಕ್ಕೆ ಬಂದಿದ್ದರು. ಪೋಲಿಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.
ತೀರ್ಥಹಳ್ಳಿ ಠಾಣೆಯ ಅಪರಾಧ ಸಂಖ್ಯೆ 94/06, 174/07, ಆಗುಂಬೆ ಪೊಲೀಸ್ ಠಾಣೆಯ 12/09, 51/09 ಹಾಗೂ 03/12 ಪ್ರಕರಣಗಳಲ್ಲಿ ಬಿಜಿಕೆ ಆರೋಪಿಯಾಗಿದ್ದಾನೆ. ಎನ್‌ಕೌಂಟರ್‌ನಲ್ಲಿ ಹತನಾದ ಸಾಕೇತ್ ರಾಜನ್ ಬಳಿಕ ನಕ್ಸಲ್ ನಾಯಕನಾಗಿ ಗುರುತಿಸಿಕೊಂಡಿದ್ದ ಬಿ.ಜಿ.ಕೃಷ್ಣಮೂರ್ತಿ, 2021ರ ನವೆಂಬರ್‌ನಲ್ಲಿ ಕೇರಳ ಪೊಲೀಸರಿಂದ ಬಂಧಿತನಾಗಿದ್ದ. ಚಿಕ್ಕಮಗಳೂರು ಜಿಲ್ಲೆಯ ನೆಮ್ಮಾರು ಬುಕ್ಕಡಿಬೈಲ್ ಗ್ರಾಮದ ಬಿ.ಜಿ.ಕೃಷ್ಣಮೂರ್ತಿ ವಿರುದ್ದ ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾದ 5 ಕೇಸ್‌ಗಳಲ್ಲೂ ಪ್ರಮುಖ ಆರೋಪಿಯಾಗಿದ್ದಾನೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯ ಕೇಸ್ ನಂ 174/07ರಲ್ಲಿ, ಸರ್ಕಾರಿ ಬಸ್‌ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಎ-3 ಆರೋಪಿಯಾಗಿದ್ದಾನೆ. ತೀರ್ಥಹಳ್ಳಿಯ ತಲ್ಲೂರಂಗಡಿ ಬಳಿ 2007ರ ಜುಲೈ 1ರಂದು ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಸಿಗೆ ಡಿಸೇಲ್ ಸುರಿದು ಬೆಂಕಿ ಹಚ್ಚಿದ್ದರು. ಮಾವೋವಾದಿ ಜಿಂದಾಬಾದ್- ನಕ್ಸಲೈಟ್ ಜಿಂದಾಬಾದ್ ಎಂದು ಕೂಗುತ್ತಿದ್ದ ಗ್ಯಾಂಗ್, ಪೊಲೀಸರು- ಪತ್ರಿಕೆಯವರಿಗೆ ಕೊಡುವಂತೆ ಬಸ್‌ನಲ್ಲಿದ್ದವರಿಗೆ ಕರಪತ್ರ ಕೊಟ್ಟಿತ್ತು.
ಆಗುಂಬೆ ಠಾಣೆಯ ಕೇಸ್ ನಂ. 51/09ರಲ್ಲಿ ಎ-1 ಆರೋಪಿಯಾಗಿದ್ದಾನೆ. ಇದರಲ್ಲಿ ಬಂಧಿತ ಆರೋಪಿಗಳ ಮಾಹಿತಿ ಅನುಸಾರ ಸ್ಥಳ ಪರಿಶೀಲನೆ ಮಾಡಿ ಹಲವು ವಸ್ತುಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಉಳ್ಮಡಿ ಸಮೀಪದ ನೆಕರ್ಕೆ ಗುಡ್ಡ ಹಾಗೂ ಮಾಕೋಡು ದಟ್ಟಾರಣ್ಯದಲ್ಲಿ ಮಾವೋವಾದಿ ಸಂಘಟನೆಯ ಪುಸ್ತಕಗಳು, 9ಎಂಎಂ ಬಂದೂಕು, ಡಿಟೋನೇಟರ್, ಮೂರು 303 ರೈಫಲ್‌ನ 40 ಜೀವಂತ ಗುಂಡು, 7.62 ಎಂಎಂನ 70 ಜೀವಂತ ಗುಂಡು, 9 ಎಂಎಂನ 20 ಜೀವಂತ ಗುಂಡು ವಶಪಡಿಸಿಕೊಳ್ಳಲಾಗಿತ್ತು. 2009ರ ಮೇ 30ರಂದು ಎ-3 ಸುರೇಶ್ ನಾಯ್ಕ್, ಎ-4 ಸರೋಜಾ ಮಾಹಿತಿ ಮೇರೆಗೆ ಶೋಧ ನಡೆಸಲಾಗಿತ್ತು.
- - - ಕೋಟ್ ಬಿ.ಜಿ.ಕೃಷ್ಣಮೂರ್ತಿ ಅವರ ವಿರುದ್ಧ ಸುಮಾರು 62 ಪ್ರಕರಣಗಳಿವೆ. ಕೇರಳದಲ್ಲಿ 4, ಬೆಂಗಳೂರಿನಲ್ಲಿ 18, ಉಡುಪಿ, ಕಾರ್ಕಳ, ಶೃಂಗೇರಿ, ತೀರ್ಥಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 2007, 2009 ಮತ್ತು 2021ರ 3 ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿತ್ತು. ವಿಚಾರಣೆ ಬಳಿಕ ಶಿವಮೊಗ್ಗ ಕಾರಾಗೃಹಕ್ಕೆ ಅವರನ್ನು ಕರೆದೊಯ್ದಿದ್ದು, ಗುರುವಾರ ವಿಚಾರಣೆ ಮುಂದುವರಿಯಲಿದೆ
- - - -31ಎಸ್‌ಎಂಜಿಕೆಪಿ08:
ಶಂಕಿತ ನಕ್ಸಲ್ ಕೃಷ್ಣಮೂರ್ತಿಯನ್ನು ತೀರ್ಥಹಳ್ಳಿ ಪೊಲೀಸರು ಬುಧವಾರ ಪ್ರಕರಣಗಳ ವಿಚಾರಣೆಗಾಗಿ ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.