ಕನ್ನಡಪ್ರಭ ವಾರ್ತೆ ಕುಕನೂರು
ತಾಲೂಕಿನ ಆರಕೇರಿ ಗ್ರಾಮದಲ್ಲಿ ಸೆ. 7ಕ್ಕೆ ತಡರಾತ್ರಿ (1 ಗಂಟೆಗೆ) ಈ ಘಟನೆ ನಡೆದಿದೆ. ಮಹಿಳೆ ಗೀತಾ (27) ಅವರನ್ನು ಪತಿ ದೇವರೆಡ್ಡೆಪ್ಪ ಮಲ್ಲಾರೆಡ್ಡೆಪ್ಪ ಭಾವಿಕಟ್ಟಿ ಕೊಲೆಗೈದಿದ್ದಾನೆ.
ಪತ್ನಿಯ ಶೀಲದ ಬಗ್ಗೆ ಶಂಕಿಸಿ, ಮಕ್ಕಳಾಗದ ಕಾರಣ ಅವಳೊಂದಿಗೆ ಜಗಳ ಮಾಡಿ, ಅವಳನ್ನು ಸೆ. 7ಕ್ಕೆ ತಡರಾತ್ರಿ ಸುಮಾರಿಗೆ ತನ್ನ ಮನೆಯ ಬೆಡ್ ರೂಮಿನಲ್ಲಿ ಕಟ್ಟಿಗೆಯಿಂದ ಮುಖಕ್ಕೆ ಹೊಡೆದು ಗಾಯಗೊಳಿಸಿ ಕೊಲೆ ಮಾಡಿದ್ದಾನೆ. ಬಳಿಕ ಕುಟುಂಬದೊಂದಿಗೆ ಸೇರಿಕೊಂಡು ಕೊಲೆ ಮಾಡಿದ ವಿಷಯವನ್ನು ಮುಚ್ಚಿಟ್ಟು, ಮೃತಳ ತಂದೆ-ತಾಯಿಗೆ ಸುಳ್ಳು ಹೇಳಿ, ಮೃತದೇಹವನ್ನು ಅವಸರದಿಂದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಸುಟ್ಟಿದ್ದಾನೆ ಎನ್ನಲಾಗಿದೆ.ಕೊಲೆ ಮಾಡಿದವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಮೃತಳ ಸಹೋದರ ಸಿದ್ದಾರೆಡ್ಡಿ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೊಲೆಗೈದ ಆರೋಪಿ ದೇವರಡ್ಡೆಪ್ಪ ಹಾಗೂ ಆತನ ತಂದೆ ಮಲ್ಲಾರೆಡ್ಡೆಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಹಿಟ್ ಆ್ಯಂಡ್ ರನ್ನಗೆ ಯುವಕ ಬಲಿ:ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದ ಹೆದ್ದಾರಿಯಲ್ಲಿ ಹಿಟ್ ಆ್ಯಂಡ್ ರನ್‌ಗೆ ಶನಿವಾರ ಯುವಕ ಮೃತಪಟ್ಟಿದ್ದಾನೆ.
ತಾಲೂಕಿನ ಹಿಟ್ನಾಳ್ ಟೋಲ್‌ಗೇಟ್‌ನಲ್ಲಿ ಲೈನ್ ಅಸಿಸ್ಟೆಂಟ್ ಕೆಲಸ ಮಾಡುತ್ತಿದ್ದ ವನಬಳ್ಳಾರಿ ಗ್ರಾಮದ ಯುವಕ ಶಶಿಕುಮಾರ ಮಲ್ಲಪ್ಪ ಪಟ್ಟೇದ(೩೨) ನೈಟ್ ಶಿಫ್ಟ್ ಭಾಗವಾಗಿ ಹೆದ್ದಾರಿಯಲ್ಲಿ ಬೈಕ್ ಮೂಲಕ ಟೋಲ್‌ಗೇಟ್ ನತ್ತ ಬೈಕ್‌ನಲ್ಲಿ ಹೊರಟಿದ್ದ. ಈ ವೇಳೆ ಲಾರಿಯೊಂದು ಬೈಕ್‌ಗೆ ಗುದ್ದಿದ ಪರಿಣಾಮ ಯುವಕ ಸ್ಥಳದಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಅಪಘಾತವಾದ ನಂತರ ಲಾರಿ ಚಾಲಕ ಸ್ಥಳದಲ್ಲಿಯೇ ನಿಲ್ಲದೇ ವಾಹನ ಓಡಿಸಿಕೊಂಡು ಹೋಗಿದ್ದಾನೆ. ಪೊಲೀಸರು ಹಿಟ್ ಆ್ಯಂಡ್ ರನ್ ಕೇಸ್‌ನಡಿ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕನ ಪತ್ತೆಗೆ ಬಲೆ ಬಿಸಿದ್ದಾರೆ. ಮೃತ ಯುವಕನಿಗೆ ಚಿಕ್ಕ ವಯಸ್ಸಿನ ಎರಡು ಹೆಣ್ಣು, ಒಂದು ಗಂಡು ಮಗುವಿದೆ. ಜತೆಗೆ ಪತ್ನಿ, ತಂದೆ-ತಾಯಿ ಇದ್ದಾರೆ. ಅಪಘಾತದಲ್ಲಿ ಮಗ ತೀರಿ ಹೋಗಿದ್ದರಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.