ಸಚಿವ ಶಿವಾನಂದ ಪಾಟೀಲ
ಹಾವೇರಿ ನಗರದ ಜನತೆಗೆ ಐದು ದಿನಕ್ಕೊಮ್ಮೆಯಾದರೂ ನೀರು ಕೊಡಿಕನ್ನಡಪ್ರಭ ವಾರ್ತೆ ಹಾವೇರಿ
ಬೇಸಿಗೆ ಕುಡಿಯುವ ನೀರಿನ ಕಷ್ಟ ಬಂದಾಗ ತಕ್ಷಣ ಸ್ಪಂದಿಸಲು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯನಿರ್ವಹಣಾ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರು ಪೂರೈಕೆಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಜಿಪಂ ಸಿಇಒಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಗರ ಹಾಗೂ ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯುತ್, ಹಿಂಗಾರು ಬಿತ್ತನೆ ಸ್ಥಿಗತಿಗಳ ಕುರಿತಂತೆ ವಿಶೇಷ ಚರ್ಚೆ ನಡೆಸಿದ ಅವರು, ಜಿಲ್ಲೆಯಲ್ಲಿ ಪಟ್ಟಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆಗಳು, ಕೆರೆ ತುಂಬಿಸುವ ಯೋಜನೆ ಸೇರಿದಂತೆ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಐದು ದಿನಕ್ಕೆ ನೀರು:ಹಾವೇರಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್ ಒಳಗೊಂಡಂತೆ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಮುಂದಿನ ಒಂದು ತಿಂಗಳೊಳಗಾಗಿ ಸರಿಪಡಿಸಿ, ೧೫ ದಿನಕ್ಕೊಮ್ಮೆ ನೀರು ಪೂರೈಕೆಯ ಸರಣಿ ಕಡಿತಗೊಳಿಸಿ, ಕನಿಷ್ಠ ಐದು ದಿನಕ್ಕೊಮ್ಮೆ ನೀರು ಕೊಡಲೇಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಹಾವೇರಿ ನಗರದ ಕುಡಿಯುವ ನೀರಿನ ಪೂರೈಕೆ ಕಾಮಗಾರಿಗೆ ಈಗಾಗಲೇ ರು.೩೭ ಕೋಟಿ ಖರ್ಚು ಮಾಡಲಾಗಿದೆ. ₹೩೨ ಕೋಟಿ ಹಣವನ್ನು ಏಜೆನ್ಸಿಗೆ ಪಾವತಿ ಮಾಡಿದ್ದೀರಿ. ಆದರೂ ಕಾಮಗಾರಿ ಪೂರ್ಣವಾಗಿಲ್ಲ, ನೀರು ಪೂರೈಸಲು ಸಾಧ್ಯವಾಗಿಲ್ಲ, ಜನ ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನೂ ಕಾಲಾವಕಾಶ ಬೇಕಾಗಿದೆ. ಈ ಹಿನ್ನೆಲೆ ಹಳೆಯ ನೀರಿನ ಸರಬರಾಜು ಜಾಲ ಹಾಗೂ ಹೊಸ ನೀರು ಪೂರೈಕೆ ಪೈಪ್‌ಲೈನ್ ತಾಂತ್ರಿಕ ಸಮಸ್ಯೆಗಳ ಕುರಿತಾಗಿ ಎರಡು ದಿನದೊಳಗಾಗಿ ಜಲ ಮಂಡಳಿ ಅಧಿಕಾರಿಗಳು, ಕೆಯುಐಡಿಎಫ್‌ಸಿ, ಎನ್.ಕೆ.ಯು.ಎಸ್.ಐ.ಟಿ.ಕೋಶ ಹಾಗೂ ನಗರಸಭೆ ಎಂಜಿನಿಯರಿಂಗ್ ವಿಭಾಗದ ಅಭಿಯಂತರರು ಜಂಟಿಯಾಗಿ ಪರಿಶೀಲನೆ ನಡೆಸಿ, ತಾಂತ್ರಿಕ ಸಮಸ್ಯೆ ಪರಿಹರಿಸಿ ನೀರು ಪೂರೈಕೆಗೆ ಅಗತ್ಯವಾದ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.ಹಾವೇರಿ ನಗರದ ಕುಡಿಯುವ ನೀರು ಸಬರಾಜಿಗೆ ನೀರಿನ ಸಮಸ್ಯೆ ಇಲ್ಲ. ಪ್ರತಿದಿನ ನೀರು ಪೂರೈಕೆಗೆ ಅಗತ್ಯವಾದ ೬೦ ಲಕ್ಷ ಲೀಟರ್ ನೀರು ಲಭ್ಯವಿದೆ. ಆದರೆ ವಿತರಣೆ ಜಾಲ ಹಾಗೂ ನಿರ್ವಹಣೆಯ ಸಮಸ್ಯೆ ಪರಿಹರಿಸಿಕೊಂಡು ಲಭ್ಯವಿರುವ ನೀರನ್ನು ಮೂರು ದಿನಕ್ಕೊಮ್ಮೆ ಅಥವಾ ಕನಿಷ್ಠ ಐದು ದಿನಕ್ಕೊಮ್ಮೆ ಪೂರೈಕೆಮಾಡುವ ನಿಟ್ಟಿನಲ್ಲಿ ಕ್ರಮತೆಗೆದುಕೊಳ್ಳಬೇಕು. ರಾಣಿಬೆನ್ನೂರು ಹಾಗೂ ಬಳ್ಳಾರಿ ಮಹಾನಗರಪಾಲಿಕೆ ನೀರು ಪೂರೈಕೆಗೆ ಅಳವಡಿಸಿಕೊಂಡಿರುವ ಮಾದರಿಯನ್ನು ಹಾವೇರಿಯಲ್ಲಿ ಅನುಸರಿಸಿ. ಪ್ರತಿ ಒಎಚ್‌ಟಿ ಘಟಕಕ್ಕೆ ಓರ್ವ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ, ವಾಲ್‌ಮ್ಯಾನ್‌ಗಳನ್ನು ಕಂಟ್ರೋಲ್‌ಗೆ ತೆಗೆದುಕೊಂಡು ಸಮರ್ಪಕವಾಗಿ ನೀರು ಪೂರೈಕೆಗೆ ಕ್ರಮವಹಿಸಿ. ಒಂದು ತಿಂಗಳೊಳಗಾಗಿ ಐದು ದಿನಕ್ಕೊಮ್ಮೆ ನೀರು ಕೊಡದಿದ್ದರೆ ಕಳೆದ ಎರಡು ವರ್ಷಕ್ಕಿಂತ ಹೆಚ್ಚು ದಿನಗಳ ಕಾಲ ಕಾರ್ಯನಿರ್ವಹಿಸಿದ ನಗರಸಭೆಯ ಎಲ್ಲ ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು.
ತನಿಖೆ ಮಾಡಿ ವರದಿ ಸಲ್ಲಿಸಿ:ಜಿಲ್ಲೆಯಲ್ಲಿ ೯ ಕೆರೆ ತುಂಬಿಸುವ ಯೋಜನೆ ಜಾರಿಯಲ್ಲಿವೆ. ತುಂಗಭದ್ರಾ ಹಾಗೂ ವರದಾ ಮೂಲದಿಂದ ೨೫೦ ಕೆರೆಗಳು ತುಂಬಬೇಕಾಗಿದೆ. ಆದರೆ ಈವರೆಗೆ ಎಷ್ಟು ಕೆರೆಗಳು ತುಂಬಿವೆ ಎಂಬುದು ಇಲಾಖಾ ಅಧಿಕಾರಿಗಳಲ್ಲಿ ಮಾಹಿತಿ ಇಲ್ಲ. ಕಾರಣ ೨೫೦ ಕೆರೆಗಳ ಪೈಕಿ ಯಾವ ಕೆರೆ ಎಷ್ಟು ಪ್ರಮಾಣದಲ್ಲಿ ತುಂಬಿವೆ. ಪ್ರತಿದಿನ ಕೆರೆ ತುಂಬಿಸಲು ಎಷ್ಟು ಗಂಟೆಗಳ ಕಾಲ ಮೋಟರ್ ರನ್ ಆಗಿದೆ ಎಂಬ ಮಾಹಿತಿ ಸಂಗ್ರಹಿಸಿ ಸಲ್ಲಿಸಬೇಕು. ೯೦ ದಿನದಲ್ಲಿ ಕೆರೆಗಳನ್ನು ತುಂಬಿಸಬೇಕು ಎಂಬುದು ನಿಯಮವಿದೆ. ಎರಡು ಬಾರಿ ತುಂಗಾ ಡ್ಯಾಂ ಓವರ್ ಫ್ಲೋ ಆಗಿದೆ. ಆದರೂ ಕೆರೆ ತುಂಬಿಸಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತುಂಗಾ ಮೇಲ್ದಂಡೆ ಯೋಜನೆಯಡಿ ಬಾಳಂಬೀಡ ಏತ ನೀರಾವರಿ ಯೋಜನೆಯಡಿ ೧೬೨ ಕೆರೆ ತುಂಬಿಸಬೇಕಾಗಿದೆ. ಈಗ ಟ್ರಯಲ್ ಬೇಸ್ ಆರಂಭಿಸಿದ್ದೀರಿ. ೧೬೨ ಕೆರೆಗಳ ಪೈಕಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಯಾವ ಯಾವ ಗ್ರಾಮಗಳಲ್ಲಿ ಅಂತರ್ಜಲ ಕಡಿಮೆಯಾಗಿದೆಯೋ, ಕುಡಿಯುವ ನೀರಿನ ಸಮಸ್ಯೆ ಇದೆಯೋ ಈ ಗ್ರಾಮಗಳಿಗೆ ಅನುಕೂಲವಾಗುವ ಕೆರೆಗಳನ್ನು ತುಂಬಿಸಲು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.೧೦೯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಹಂಸಭಾವಿ ಏತ ನೀರಾವರಿ ಯೋಜನೆಯ ವಿನ್ಯಾಸ, ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ತ್ವರಿತವಾಗಿ ಕಾಮಗಾರಿ ಆರಂಭಿಸಲು ಕ್ರಮವಹಿಸುವಂತೆ ಸೂಚನೆ ನೀಡಿದರು.
ವಿದ್ಯುತ್ ಸಮಸ್ಯೆ:ರೈತರಿಗೆ ಐದು ತಾಸಿನಿಂದ ಏಳು ತಾಸಿಗೆ ವಿದ್ಯುತ್ ಒದಗಿಸಲು ಸರ್ಕಾರ ಘೋಷಿಸಿದೆ. ಯಾವ ಯಾವ ಸಂದರ್ಭದಲ್ಲಿ ಕೊಳವೆಬಾವಿಗೆ ವಿದ್ಯುತ್ ಪೂರೈಸಲಾಗುತ್ತದೆ ಎಂಬ ಮಾಹಿತಿಯನ್ನು ಪ್ರಚಾರ ಮಾಡಬೇಕು. ರೈತರ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ಮುಂಚಿತವಾಗಿ ಮಾಹಿತಿ ರವಾನೆಯಾಗಬೇಕು ಎಂದು ಹೆಸ್ಕಾಂ ಅಭಿಯಂತರರಿಗೆ ಸೂಚನೆ ನೀಡಿದರು.
ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಯು.ಬಿ. ಬಣಕಾರ, ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಆರ್.ವಿಶಾಲ್, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರೆ ಉಪಸ್ಥಿತರಿದ್ದರು.