ಕನ್ನಡಪ್ರಭ ವಾರ್ತೆ ಕೊರಟಗೆರೆ
ನನಗೆ ಅತ್ಯಂತ ಅಚ್ಚುಮೆಚ್ಚಿನ ಇಲಾಖೆ ಶಿಕ್ಷಣ ಇಲಾಖೆ, ಇಂತಹ ಇಲಾಖೆಯಲ್ಲಿ ಶಿಕ್ಷಕ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ಅಂತಹವರನ್ನು ಅಮಾನತುಗೊಳಿಸಬೇಕಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಮಧುಗಿರಿ ಡಿಡಿಪಿಐ ಮಂಜುನಾಥ್, ಕೊರಟಗೆರೆ ಬಿಇಒ ನಟರಾಜು ಹಾಗೂ ಅಗ್ರಹಾರ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಯರ ಮೇಲೆ ಕೋಪಗೊಂಡು ತರಾಟೆಗೆ ತೆಗೆದುಕೊಂಡರು.ಶುಕ್ರವಾರ ಗೃಹ ಸಚಿವ ಡಾ.ಜಿ.ಪರಮೇಶ್ವರರವರು ತಾಲೂಕಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅಗ್ರಹಾರ ವತಿಯಿಂದ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಲು ಬಂದಿದ್ದರು. ಆದರೆ, ಶಿಕ್ಷಣ ಇಲಾಖಾ ಅಧಿಕಾರಿಗಳು ಕಾರ್ಯಕ್ರಮವನ್ನು ಸರಿಯಾಗಿ ಆಯೋಜಿಸಲು ಅಸಮರ್ಥರಾಗಿದ್ದರು, ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರನ್ನಾಗಲಿ ಹಾಗೂ ಮಕ್ಕಳ ಪೋಷಕರನ್ನಾಗಲಿ ಕರೆದಿರಲಿಲ್ಲ, ಕಾರ್ಯಕ್ರಮವನ್ನು ತರಾತುರಿಯಲ್ಲಿ ನಡೆಸಲಾಯಿತು, ಶಾಲಾ ಕಾರ್ಯಕ್ರಮದಲ್ಲಿ ಮಕ್ಕಳಿಂದ ಪ್ರಾರ್ಥನೆ ಮಾಡಿಸದೇ ಶಿಕ್ಷಕಿಯಿಂದ ಪ್ರಾರ್ಥನೆ ಮಾಡಿಸಿದ್ದರಿಂದ ಗೃಹ ಸಚಿವರ ಅಸಮಾಧಾನ ಸ್ಪೋಟಗೊಂಡಿತು,
ನಂತರ ಉಸ್ತುವಾರಿ ಸಚಿವರು ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಮಧುಗಿರಿ ಮತ್ತು ಕೊರಟಗೆರೆ ತಾಲೂಕಿನ ಶಾಲೆಗಳಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ ಕಳಪೆಯಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿದೆ, ಇದಕ್ಕೆಲ್ಲಾ ಅಧಿಕಾರಿಗಳ ಬೇಜಾವಾಬ್ದಾರಿಯೇ ಕಾರಣ, ನಿಮ್ಮ ಮಕ್ಕಳನ್ನಾದರೆ ಸರಿಯಾಗಿ ವಿದ್ಯಾಬ್ಯಾಸ ಮಾಡಿಸುತ್ತೀರಾ, ಆದರೆ ನಿಮಗೆ ಸಂಬಳ ನೀಡಿ ಪೋಷಿಸುವ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಸಡ್ಡೆ ತೋರುತ್ತೀರಾ, ಶಾಲೆಯ ಸಮಯದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕಾರ್ಯನಿರ್ವಹಿಸಿ. ಇಂದು ಶಿಕ್ಷಣ ಇಲಾಖೆಯ ಡಿಡಿಪಿಐ ಮತ್ತು ಬಿಇಒರವರ ನಿರ್ಲಕ್ಷ್ಯ ನನಗೆ ಅತೀವ ಬೇಸರ ತಂದಿದೆ. ಅಗ್ರಹಾರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ, ಮುಂದೆ ನಾನು ಈ ಶಾಲೆಗೆ ಆಗಾಗ ಭೇಟಿ ನೀಡುತ್ತಿರುತ್ತೇನೆ,ಈ ವೈಫಲ್ಯ ಮರುಕಳಿಸದಂತೆ ಕ್ರಮವಹಿಸಿ ಎಂದು ಶಿಕ್ಷಕರು, ಅಧಿಕಾರಿಗಳನ್ನು ಎಚ್ಚರಿಸಿದರು.ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ತಹಸೀಲ್ದಾರ್ ಮಂಜುನಾಥ್, ಡಿಡಿಪಿಐ ಮಂಜುನಾಥ್, ಬಿಇಒ ನಟರಾಜು ಸೇರಿ ಇನ್ನಿತರರು ಹಾಜರಿದ್ದರು.