ಶಿರಸಿ:ಲೋಕಸಭೆ ಮತ್ತು ರಾಜ್ಯಸಭೆಯ 142 ಸಂಸದರನ್ನು ಅಮಾನತುಗೊಳಿಸಿರುವ ಘಟನೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶಿರಸಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿರು.ಇಲ್ಲಿಯ ಅಂಚೆ ವೃತ್ತದಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, 142 ಸದಸ್ಯರನ್ನು ಸಂಸತ್‌ನಿಂದ ಅಮಾನತು ಮಾಡಿರುವ ಸ್ಪೀಕರ್ ತಾವು ಕೇವಲ ಬಿಜೆಪಿಗೆ ಸ್ಪೀಕರ್ ಅನ್ನುವುದನ್ನು ತಲೆಯಿಂದ ತೆಗೆಯಬೇಕು. ಒಬ್ಬ ಬೇಜವಾಬ್ದಾರಿ ಸಂಸದ ಮಾಡಿರುವ ಕೆಲಸದಿಂದ ದೇಶದ 542 ಸದ್ಯಸ್ಯರ ಪ್ರಾಣಕ್ಕೆ ಕುತ್ತು ಬಂದಿರುವುದನ್ನು ತನಿಖೆ ನಡೆಸಲು ಒತ್ತಾಯಿಸುತ್ತಿರುವ ಸದ್ಯಸ್ಯರನ್ನು ಅಮಾನತು ಮಾಡುತ್ತಿರುವ ಸ್ಪೀಕರ್ ನಿಜವಾಗಿಯೂ ಅಮಾನತು ಮಾಡಬೇಕಿರುವುದು ಸಂಸದ ಪ್ರತಾಪ ಸಿಂಹ ಅವರನ್ನು. ಸಂಸತ್ ದಾಳಿಯಾದ 22 ವರ್ಷ ತುಂಬಿದ ದಿನವೇ ಪುನಃ ಸಂಸತ್‌ನಲ್ಲಿ ಹೋಗೆ ಬಾಂಬ್ ಘಟನೆ ನಡೆದಿರುವುದು ಕೇಂದ್ರ ಸರ್ಕಾರದ ವೈಫಲ್ಯವಲ್ಲವೇ? ಎಂದು ಪ್ರಶ್ನಿಸಿದರು.ಸಂಸತ್‌ನಲ್ಲಿ ನಡೆದ ಕೃತ್ಯ, ಭದ್ರತೆ ವೈಫಲ್ಯ ಹಾಗೂ ದಾಳಿಕೊರರ ಉದ್ದೇಶದ ಬಗ್ಗೆ ದೇಶಕ್ಕೆ ಮಾಹಿತಿ ನೀಡಿ ಉತ್ತರಿಸಲು ಜವಾಬ್ದಾರಿಯುತ ವಿರೋಧ ಪಕ್ಷಗಳು ಪ್ರಶ್ನಿಸಿದರೆ ಅಮಾನತು ಮಾಡಲಾಗಿದೆ. ಸಂಸತ್‌ನಲ್ಲಿ ಧ್ವನಿ ಅಡಗಿಸುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುವ ಮೂಲಕ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ದೇಶದ ಜನರಿಗೆ, ಮಾಧ್ಯಮಗಳಿಗೆ, ಕೊನೆಯದಾಗಿ ಸಂಸತ್ ಸದ್ಯಸ್ಯರಿಗೂ ಉತ್ತರ ನೀಡದ ಪರಿಸ್ಥಿತಿಗೆ ಬಂದಂತ ಬಿಜೆಪಿಯ ಹೇಡಿತನದ ಪರಮಾವಧಿಗೆ ಇಡೀ ದೇಶವೇ ಧಿಕ್ಕಾರ ಹಾಕುತ್ತಿದೆ ಎಂದು ಕಿಡಿಕಾರಿದರು.ಸಂಸತ್ ದಾಳಿಕೋರನಿಗೆ ಒಬ್ಬ ಕಾಂಗ್ರೆಸ್ ಸಂಸದ ಪಾಸ್ ವಿತರಿಸಿದ್ದರೆ ಇಡೀ ಬಿಜೆಪಿಗರು ದೇಶ ಭಕ್ತರು ಎಂಬ ಹಣೆಪಟ್ಟಿಯೊಂದಿಗೆ ರಸ್ತೆಯಲ್ಲಿ ಉರುಳು ಸೇವೆಗೆ ತಯಾರಾಗಿರುತ್ತಿದ್ದರು. ಆದರೆ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಯಾವುದೇ ಒಬ್ಬ ಸಂಸದ ಈ ರೀತಿಯಾಗಿ ಬೇಜವಾಬ್ದಾರಿಯಿಂದ ಪಾಸ್ ವಿತರಿಸಿ ಭಯೋತ್ಪಾದಕರನ್ನು ಸಂಸತ್‌ಗೆ ನುಗ್ಗಿಸಿದ ಇತಿಹಾಸವಿಲ್ಲ. ಇಂತಹ ಸಂಸದನನ್ನು ಅಮಾನತು ಮಾಡಿ ದೇಶದ್ರೋಹ ಪ್ರಕರಣ ದಾಖಲಿಸಿ ವಶಕ್ಕೆ ಪಡೆದು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಬಿಜೆಪಿ ಎಷ್ಟೇ ಸರ್ವಾಧಿಕಾರಿ ಧೋರಣೆ ತೋರಿ ವಿಪಕ್ಷಗಳ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು ಬ್ರಿಟಿಷರ ಗುಂಡಿಗೆ ಎದೆ ಕೊಟ್ಟು ನಿಂತ ಕಾಂಗ್ರೆಸ್ ಆಧುನಿಕ ಬ್ರಿಟಿಷರಾದ ಬಿಜೆಪಿಗೆ ಬಗ್ಗುವುದಿಲ್ಲ. ದೇಶ ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದರು.ಪ್ರತಿಭಟನೆಯಲ್ಲಿ ಜಗದೀಶ ಗೌಡರ, ಎಚ್.ಆರ್. ನಾಯ್ಕ, ಜಿ.ಟಿ. ನಾಯ್ಕ, ವಿ.ಎನ್. ನಾಯ್ಕ, ವಸಂತ ನಾಯ್ಕ, ಜ್ಞಾನೇಶ ಗುಡಿಗಾರ, ಬಸವರಾಜ ದೊಡ್ಮನಿ, ಜ್ಯೋತಿ ಗೌಡ ಪಾಟೀಲ್ ಇತರರಿದ್ದರು.