ಪೊಲೀಸ್‌ ಅಧಿಕಾರಿಗಳ ಅಮಾನತು: ಸರ್ಕಾರದ ಪಲಾಯನವಾದ

KannadaprabhaNewsNetwork |  
Published : Jun 09, 2025, 03:11 AM IST
ಪ್ರಹ್ಲಾದ ಜೋಶಿ | Kannada Prabha

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಸಂಭ್ರಮಾಚರಣೆ ಮಾಡಲು ಒಂದೇ ದಿನದಲ್ಲಿ ಭದ್ರತೆ ವ್ಯವಸ್ಥೆ ಮಾಡಲು ಅಸಾಧ್ಯ ಎಂದು ಪೊಲೀಸ್ ಆಯುಕ್ತರಾಗಿದ್ದ ದಯಾನಂದ ಮುಖ್ಯಮಂತ್ರಿಗೆ ಹೇಳಿದ್ದರು. ಹಿಂದಿನ ದಿನ ರಾತ್ರಿ ಪೂರ್ತಿ ದೊಡ್ಡ ಪ್ರಮಾಣದಲ್ಲಿ ಜನರು ಕುಣಿದು ಕುಪ್ಪಳಿಸಿದ್ದರು. ಅದನ್ನೇ ನಿರ್ವಹಿಸಲು ಪೊಲೀಸರಿಗೆ ಸಾಕು ಸಾಕಾಗಿ ಹೋಗಿತ್ತು. ಈ ಕಾರಣದಿಂದ ಪೊಲೀಸ್‌ ಆಯುಕ್ತರು ಭದ್ರತೆ ಕಷ್ಟಸಾಧ್ಯ ಎಂದಿದ್ದರು. ಆದರೆ, ಮುಖ್ಯಮಂತ್ರಿ-ಉಪಮುಖ್ಯಮಂತ್ರಿಗಳು ಪೈಪೋಟಿಗೆ ಬಿದ್ದು ಅನುಮತಿ ಕೊಡಿಸಿದ್ದಾರೆ.

ಧಾರವಾಡ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣದಲ್ಲಿ ರಾಜ್ಯ ಸರ್ಕಾರ ತಮ್ಮ ಮೇಲಿನ ಆರೋಪದಿಂದ ತಪ್ಪಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳ ಅಮಾನತು ಮಾಡುವ ಮೂಲಕ ಪಲಾಯನವಾದ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಭಾನುವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯಲ್ಲಿ ರಾಜ್ಯ ಸರ್ಕಾರ ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಪೊಲೀಸರು ಈ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರು. ಈ ಬಗ್ಗೆ ನನಗೆ ಖಚಿತ ಮಾಹಿತಿ ಇದೆ ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಸಂಭ್ರಮಾಚರಣೆ ಮಾಡಲು ಒಂದೇ ದಿನದಲ್ಲಿ ಭದ್ರತೆ ವ್ಯವಸ್ಥೆ ಮಾಡಲು ಅಸಾಧ್ಯ ಎಂದು ಪೊಲೀಸ್ ಆಯುಕ್ತರಾಗಿದ್ದ ದಯಾನಂದ ಮುಖ್ಯಮಂತ್ರಿಗೆ ಹೇಳಿದ್ದರು. ಹಿಂದಿನ ದಿನ ರಾತ್ರಿ ಪೂರ್ತಿ ದೊಡ್ಡ ಪ್ರಮಾಣದಲ್ಲಿ ಜನರು ಕುಣಿದು ಕುಪ್ಪಳಿಸಿದ್ದರು. ಅದನ್ನೇ ನಿರ್ವಹಿಸಲು ಪೊಲೀಸರಿಗೆ ಸಾಕು ಸಾಕಾಗಿ ಹೋಗಿತ್ತು. ಈ ಕಾರಣದಿಂದ ಪೊಲೀಸ್‌ ಆಯುಕ್ತರು ಭದ್ರತೆ ಕಷ್ಟಸಾಧ್ಯ ಎಂದಿದ್ದರು. ಆದರೆ, ಮುಖ್ಯಮಂತ್ರಿ-ಉಪಮುಖ್ಯಮಂತ್ರಿಗಳು ಪೈಪೋಟಿಗೆ ಬಿದ್ದು ಅನುಮತಿ ಕೊಡಿಸಿದ್ದಾರೆ ಎಂದು ಜೋಶಿ ಆರೋಪಿಸಿದರು.

ಸಾವು ಮರೆಯದ ಜನರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಪರಿಷತ್‌ ಸದಸ್ಯ ಗೋವಿಂದ‌ರಾಜ್‌ ಅವರನ್ನು ಕೈಬಿಟ್ಟಿದ್ದು ಏಕೆ? ಅವರು ಏನಾದರೂ ತಪ್ಪು ಮಾಡಿರಬಹುದಲ್ವ? ಹಾಗಿದ್ದರೆ ಅವರ ಮೇಲೆ ಏಕೆ ಪ್ರಕರಣ ದಾಖಲಿಸಿಲ್ಲ? ಎಂದು ಪ್ರಶ್ನಿಸಿದ ಜೋಶಿ, ಅವರಿವರನ್ನು ಅಮಾನತುಗೊಳಿಸಿ ಪ್ರಕರಣವನ್ನು ಜನರಿಂದ ಮರೆಸುವ ಕೆಲಸ ನಡೆಯುತ್ತಿದೆ. ಆದರೆ, ಅಮಾಯಕ ಜನರ ಸಾವನ್ನು ಜನ ಮರೆಯುವುದಿಲ್ಲ. ಮಂತ್ರಿಗಳ ಮಕ್ಕಳು ವಿಧಾನಸೌಧ ಎದುರು ಆಟಗಾರರೊಂದಿಗೆ ಸೆಲ್ಫಿ ತೆಗೆದುಕೊಂಡರು. ಅವರಿಗೆ ವಿಧಾನಸೌಧಕ್ಕೆ ಅನುಮತಿ ಕೊಟ್ಟಿದ್ದು ಯಾರು? ನೂರಾರು ಜನ ವೇದಿಕೆಯಲ್ಲಿದ್ದರು. ಮುಖ್ಯಮಂತ್ರಿ ಇರುವ ವೇದಿಕೆಗಳಲ್ಲಿ ಈ ರೀತಿ ಮಾಡುವಂತಿಲ್ಲ. ಇದಕ್ಕೆಲ್ಲಾ ಯಾರು ಹೊಣೆ ಎಂದು ಜೋಶಿ ಪ್ರಶ್ನಿಸಿದರು.

ಸರ್ಕಾರ ಮುಂದುವರಿಯಬಾರದು: ಬೇಸರದ ಸಂಗತಿ ಏನೆಂದರೆ, ಮಧ್ಯಾಹ್ನ 3.10ಕ್ಕೆ ಬೋರಿಂಗ್ ಆಸ್ಪತ್ರೆಯಲ್ಲಿ ಮೊದಲ ಸಾವು ಆಯಿತು. ಅದಾದ ಬಳಿಕವೂ ಕಾರ್ಯಕ್ರಮ‌ ಮಾಡಿದ್ದಾರೆ. ಮುಖ್ಯಮಂತ್ರಿ- ಉಪಮುಖ್ಯಮಂತ್ರಿಗಳಿಗೆ ನಾಚಿಕೆ ಬರೋದಿಲ್ವ? ಇದಕ್ಕೆಲ್ಲ ನ್ಯಾಯಾಲಯವೇ ಕಠಿಣ ಕ್ರಮ ಕೈಗೊಳ್ಳಲಿದೆ. ಸರ್ಕಾರದಲ್ಲಿ ಈಗ ಇಂತಹ ಪರಿಸ್ಥಿತಿಯಲ್ಲಿ ಮುಂದುವರಿಯಬಾರದು ಎಂದು ಜೋಶಿ ಕಟುವಾಗಿ ಟೀಕಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ