ಗೃಹಿಣಿ ಅನುಮಾನಾಸ್ಪದ ಸಾವು: ಪತಿ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲು

KannadaprabhaNewsNetwork |  
Published : Mar 09, 2026, 01:45 AM IST
08ಜಿಯುಡಿ1 | Kannada Prabha

ಸಾರಾಂಶ

ಮಾರ್ಚ್ 7ರಂದು ಹಣ ತರಲು ಒತ್ತಾಯಿಸಿ ಪತಿ ಹಾಗೂ ಅತ್ತೆ- ಮಾವ ವರಲಕ್ಷ್ಮೀಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಮಾರ್ಚ್ 8ರಂದು ಬೆಳಗ್ಗೆ 5:30ರ ಸುಮಾರಿಗೆ ವರಲಕ್ಷ್ಮೀಯನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಲಕ್ಷ್ಮಿನಾರಾಯಣಪ್ಪ ಅವರು ನರಸಿಂಹಪ್ಪ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ಗುಡಿಬಂಡೆ: 25 ವರ್ಷದ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಆರ್. ಚೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ವರಲಕ್ಷ್ಮೀ (25) ಎಂದು ಗುರುತಿಸಲಾಗಿದೆ. ಈ ಸಂಬಂಧ ಗುಡಿಬಂಡೆ ವ್ಯಾಪ್ತಿಯ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ:

ಮೃತ ವರಲಕ್ಷ್ಮೀಯ ತಂದೆ ನರಸಿಂಹಪ್ಪ (ಪಾಪನಾಯಕನಹಳ್ಳಿ, ಬಾಗೇಪಲ್ಲಿ ತಾಲೂಕು) ನೀಡಿರುವ ದೂರಿನ ಪ್ರಕಾರ, ಕಳೆದ 3 ವರ್ಷಗಳ ಹಿಂದೆ ಆರ್. ಚೊಕ್ಕನಹಳ್ಳಿ ಗ್ರಾಮದ ಗಂಗಪ್ಪ ಅವರ ಪುತ್ರ ಗಂಗರಾಜು ಜೊತೆ ವರಲಕ್ಷ್ಮೀ ವಿವಾಹ ನಡೆದಿತ್ತು. ಇವರಿಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ವರಪಕ್ಷಕ್ಕೆ ನೀಡಲಾಗಿತ್ತು.

ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಸೈಟ್ ಖರೀದಿಸಲು ತವರು ಮನೆಯಿಂದ ಹಣ ತರುವಂತೆ ಪತಿ ಗಂಗರಾಜು, ಮಾವ ಗಂಗಪ್ಪ ಹಾಗೂ ಅತ್ತೆ ನರಸಮ್ಮ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಹಣ ತರದಿದ್ದರೆ ದೈಹಿಕ ಹಲ್ಲೆ ನಡೆಸಿ ವರಲಕ್ಷ್ಮೀಯನ್ನು ತವರು ಮನೆಗೆ ಕಳುಹಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾವಿನ ಸುತ್ತ ಅನುಮಾನ:

ಮಾರ್ಚ್ 7ರಂದು ಹಣ ತರಲು ಒತ್ತಾಯಿಸಿ ಪತಿ ಹಾಗೂ ಅತ್ತೆ- ಮಾವ ವರಲಕ್ಷ್ಮೀಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಮಾರ್ಚ್ 8ರಂದು ಬೆಳಗ್ಗೆ 5:30ರ ಸುಮಾರಿಗೆ ವರಲಕ್ಷ್ಮೀಯನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಲಕ್ಷ್ಮಿನಾರಾಯಣಪ್ಪ ಅವರು ನರಸಿಂಹಪ್ಪ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ತಕ್ಷಣ ಆಸ್ಪತ್ರೆಗೆ ಧಾವಿಸಿದ ತಂದೆ ನರಸಿಂಹಪ್ಪ ಅವರು ನೋಡಿದಾಗ ವರಲಕ್ಷ್ಮೀ ಮೃತಪಟ್ಟಿರುವುದು ತಿಳಿದುಬಂದಿದೆ. ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಿ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ನರಸಿಂಹಪ್ಪ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ತಂದೆಯ ದೂರಿನ ಆಧಾರದ ಮೇಲೆ ಪೆರೇಸಂದ್ರ ಪೊಲೀಸರು ಪ್ರಮುಖ ಆರೋಪಿಗಳಾದ ಗಂಗರಾಜು (ಪತಿ), ಗಂಗಪ್ಪ (ಮಾವ) ಮತ್ತು ನರಸಮ್ಮ (ಅತ್ತೆ) ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರಿಗೆ ಪ್ರೋತ್ಸಾಹ ಬೇಕು, ಕನಿಕರವಲ್ಲ: ಶೀಲಾ
ಯುಪಿಎಸ್‌ಸಿ ಪರೀಕ್ಷೆಯಲ್ಲಿ 554ನೇ ರ್‍ಯಾಂಕ್ ಪಡೆದ ಧನಂಜಯಗೆ ಅಭಿನಂದನೆ