ಪರಿಸರ ಜೀವವೈವಿಧ್ಯತೆಯನ್ನು ಉಳಿಸಿ ಬೆಳೆಸುವುದರಿಂದ ಸುಸ್ಥಿರ ಅಭಿವೃದ್ಧಿ: ಎಚ್.ಕೆ. ವಿನುತಾ

KannadaprabhaNewsNetwork |  
Published : Oct 23, 2026, 01:30 AM IST
22ಸಿಎಚ್ಎನ್‌54ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಯ ಸಿ ವೃಂದದ ನೌಕರರಿಗೆ ಅ. 16 ಮತ್ತು 17ರಂದು ಹಮ್ಮಿಕೊಂಡಿದ್ದ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿ ಕಾರ್ಯಗಾರವನ್ನು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಹೆಚ್.ಕೆ. ವಿನುತ ಅವರು ಉದ್ಘಾಟಿಸಿದರು.  | Kannada Prabha

ಸಾರಾಂಶ

ಅರಣ್ಯ ಪ್ರದೇಶಗಳ ವಿಘಟನೆ ಮತ್ತು ಮಾನವ ವನ್ಯಜೀವಿ ಸಂಘರ್ಷ, ಕಾಡ್ಗಿಚ್ಚು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳು, ಅಕ್ರಮ ಬೇಟೆ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಸವಾಲುಗಳನ್ನು ಯೋಜನಾಬದ್ಧವಾಗಿ ನಿರ್ವಹಿಸುವ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅರಣ್ಯ ಉಳಿಸಿ, ವನ್ಯಜೀವಿ ರಕ್ಷಿಸಿ ಮತ್ತು ಪರಿಸರ ಜೀವ ವೈವಿಧ್ಯತೆಯನ್ನು ಬೆಳೆಸುವ ಮೂಲಕ ಸುಸ್ಥಿರ ಅಭಿವೃದ್ಧಿ ಸಾಧಿಸಲಾಗುತ್ತದೆ ಎಂದು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಎಚ್.ಕೆ. ವಿನುತ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಯ ಸಿ ವೃಂದದ ನೌಕರರಿಗೆ ಅ. 16 ಮತ್ತು 17ರಂದು ಹಮ್ಮಿಕೊಂಡಿದ್ದ ಎರಡು ದಿನಗಳ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಭೂಮಿಯ ಮೇಲೆ ಲಭ್ಯವಿರುವ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ, ಹವಾಮಾನ ಬದಲಾವಣೆಯ ಕ್ರಮಗಳು, ಜಲ ಜೀವರಾಶಿಗಳು, ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಜೀವ ಪರಿಸರ ಸಮತೋಲನೆಯ ಕ್ರಮಗಳ ಕುರಿತು ವಿವರಿಸಲಾಗಿದೆ ಎಂದು ಅವರು ತಿಳಿಸಿದರು.

ಅರಣ್ಯ ಪಾಲಕರಾದ ಆರ್. ಶ್ವೇತ ಅವರು ಮಾತನಾಡಿ, ಪಶ್ಚಿಮ ಘಟ್ಟಗಳು ಜೀವವೈವಿಧ್ಯತೆಗೆ ಸಂಬಂಧಿಸಿದ ಅರಣ್ಯ ಪ್ರದೇಶದಿಂದ ಕೂಡಿದ್ದು, ಪಶ್ಚಿಮ ಮತ್ತು ಪೂರ್ವ ಘಟ್ಟಗಳು ಸಂಪರ್ಕಿಸುವ ಎರಡೂ ಪರ್ವತ ವ್ಯವಸ್ಥೆಗಳ ನಡುವಿನ ವನ್ಯಜೀವಿ ಅರಣ್ಯ ಪ್ರದೇಶವು ಸಂಪರ್ಕ ಕೊಂಡಿಯಾಗಿದೆ. ಒಣ ಎಲೆ ಉದುರುವ ಕಾಡುಗಳು, ತೇವಾಂಶವುಳ್ಳ ಅರಣ್ಯಗಳು, ಶೋಲಾ ಕಾಡುಗಳು ಹಾಗೂ ಹುಲ್ಲುಗಾವಲುಗಳಲ್ಲಿ 250ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಕಂಡುಬರುತ್ತವೆ ಎಂದರು.

ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಬಿ.ಎನ್. ಮಾನಸ ಅವರು ಮಾತನಾಡಿ, ಪ್ರವಾಸಿ ಸ್ಥಳಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನ, ಬಿಳಿಗಿರಿರಂಗನಾಥಸ್ವಾಮಿ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಮಲೆಮಹದೇಶ್ವರ ಬೆಟ್ಟ ಹಾಗೂ ಭರಚುಕ್ಕಿ ಜಲಪಾತಗಳು ಸೇರಿವೆ. ಶಿವನಸಮುದ್ರದ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕಾವೇರಿ ನದಿಯ ಎರಡು ಭಾಗಗಳಾಗಿ ವಿಭಜನೆಯಾಗುವಾಗ ಜಲಪಾತಗಳು ಸೃಷ್ಠಿಯಾಗುತ್ತವೆ ಎಂದು ತಿಳಿಸಿದರು.

ಸಹಾಯಕ ಸಾಂಖಿಕ ಇಲಾಖೆಯ ಬಿ. ಕಿರಣಕುಮಾರ ಮಾತನಾಡಿ, ಅರಣ್ಯದಲ್ಲಿ ಸೋಲಿಗರು, ಬೆಟ್ಟ ಕುರುಬ ಹಾಗೂ ಜೇನು ಕುರುಬ, ಆದಿವಾಸಿ ಸಮುದಾಯಗಳು ವನ್ಯಜೀವಿಗಳೊಂದಿಗೆ ನಿಕಟ ಸಂಬಂಧ ಹೊಂದಿ ಸಾಂಪ್ರದಾಯಿಕ ಜೀವನಶೈಲಿ ರೂಢಿಸಿಕೊಂಡಿವೆ. ಜೇನು ಸಂಗ್ರಹಣೆ, ಅರಣ್ಯ ಕಿರು ಉತ್ಪನ್ನಗಳ ಸಂಗ್ರಹಣೆ ಮತ್ತು ಕೃಷಿ ಇವರ ಸಾಂಪ್ರದಾಯಿಕ ಜೀವನೋಪಾಯ ಜೀವವೈವಿಧ್ಯದ ಕುರಿತು ಪಾರಂಪರಿಕ ಜ್ಞಾನ ಹೊಂದಿದ್ದಾರೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಚ್.ಆರ್. ಪ್ರಕಾಶ ಅವರು ಮಾತನಾಡಿ, ಅರಣ್ಯ ಪ್ರದೇಶಗಳ ವಿಘಟನೆ ಮತ್ತು ಮಾನವ ವನ್ಯಜೀವಿ ಸಂಘರ್ಷ, ಕಾಡ್ಗಿಚ್ಚು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳು, ಅಕ್ರಮ ಬೇಟೆ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಸವಾಲುಗಳನ್ನು ಯೋಜನಾಬದ್ಧವಾಗಿ ನಿರ್ವಹಿಸುವ ಅಗತ್ಯವಿದೆ ಎಂದು ತಿಳಿಸಿದರು.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಡಾ. ಎಚ್.ಎಂ ಸುದರ್ಶನ ಹಾಗೂ ಡಾ. ಎಚ್.ಎಂ. ಸಿದ್ದರಾಮ ಅವರು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ಉಪನ್ಯಾಸ ನೀಡಿದರು.

ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯರಾದ ಎಂ.ಡಿ ಆರಬೀ, ಬೋಧಕರಾದ ಕುಮಾರಸ್ವಾಮಿ ಸೇರಿದಂತೆ ಕಾರ್ಯಾಗಾರದಲ್ಲಿ ವಿವಿಧ ಇಲಾಖೆಯ ನೌಕರರು ಇದ್ದರು.

----------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು ದೃಢ ಮನಸ್ಸಿನಿಂದ ಹೆಜ್ಜೆ ಇಟ್ಟರೆ ಅಸಾಧ್ಯವಾದದ್ದು ಯಾವುದೂ ಇಲ್ಲ
ಗಣ್ಯರ ಅನುಕೂಲಕ್ಕಾಗಿ ನೂತನ ಪ್ರವಾಸಿ ಮಂದಿರ ನಿರ್ಮಾಣ: ಕೆ.ಎಂ.ಉದಯ್