ಕನ್ನಡಪ್ರಭ ವಾರ್ತೆ ಸುತ್ತೂರುವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ತರಲು ವಿದ್ಯಾರ್ಥಿ ಸಂಘಗಳು ಬಹಳ ಉಪಯೋಗವಾಗುತ್ತವೆ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್. ಗಂಗಾಧರ್ ಹೇಳಿದರು.ಸುತ್ತೂರು ಜೆಎಸ್‌ಎಸ್ ವಸತಿ ಶಾಲೆಯ ವಿದ್ಯಾರ್ಥಿ ಸಂಘದ ಈ ಸಾಲಿನ ಚಟುವಟಿಕೆಗಳಿಗೆ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು,ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣಗಳನ್ನು ಮೂಡಿಸಲು, ದೇಶದ ನಾಡುನುಡಿ ಸಂಸ್ಕೃತಿಯನ್ನು ಉಳಿಸಲು, ವಿವಿಧತೆಯಲ್ಲಿ ಏಕತೆಯನ್ನು ಬೆಳೆಸಲು, ಸಾಮಾಜಿಕ ಜವಾಬ್ದಾರಿಗಳನ್ನು ವಹಿಸಲು ವಿದ್ಯಾರ್ಥಿಗಳಲ್ಲಿ ಓದಿನ ಜೊತೆಗೆ ಸೃಜನಶೀಲತೆಯನ್ನು ಬಳಸಿಕೊಳ್ಳುವುದು ಅತ್ಯಂತ ಅಗತ್ಯವಾಗಿರುತ್ತದೆ. ಜೆಎಸ್‌ಎಸ್ ಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರವನ್ನು ಸಹ ನೀಡುತ್ತಿರುವುದು ತುಂಬಾ ಸಂತೋಷದ ವಿಷಯ. ಜೆಎಸ್‌ಎಸ್ ಸಂಸ್ಥೆಗಳಲ್ಲಿ ಓದಿರುವ ಹಲವಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ನಂಜನಗೂಡು ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ಎಂ. ಮಹೇಶ್ ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ಶಿಕ್ಷಣದ ಜೊತೆ ಮೌಲ್ಯಗಳನ್ನು ಕಲಿಸುವುದಕ್ಕೆ ಹೆಚ್ಚು ಹೊತ್ತು ನೀಡುತ್ತಿರುವುದು ಶ್ಲಾಘನೀಯ, ನಾನು ಸಹ ಜೆಎಸ್‌ಎಸ್ ಸಂಸ್ಥೆಯ ವಿದ್ಯಾರ್ಥಿಯಾಗಿದ್ದೆ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಶಾಲೆಯಲ್ಲಿ ಕಲಿಕೆಯಲ್ಲಿ ತೊಡಗಿದರೆ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ತಿಳಿಸಿದರು.ಮೈಸೂರಿನ ಜೆಎಸ್‌ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಜಿ. ಮಹದೇವಸ್ವಾಮಿ ಮಾತನಾಡಿ, ಸುತ್ತೂರಿನಂತಹ ಪುಣ್ಯಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ನಿಮ್ಮ ಪುಣ್ಯವೇ ಸರಿ, ನಮ್ಮ ಕಾಲದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಅನುಕೂಲಕರವಾಗಿರಲಿಲ್ಲ. ಸುತ್ತೂರು ಶ್ರೀಗಳು ವಿದ್ಯಾಭ್ಯಾಸಕ್ಕೆ ಹಲವು ಅನುಕೂಲಗಳನ್ನು ಕಲ್ಪಿಸಿದ್ದಾರೆ ಎಂದರು.ಪ್ರೊ. ಕೆ.ಜಿ. ಮಹದೇವಸ್ವಾಮಿ, ಧರ್ಮಪತ್ನಿ ಉಮಾದೇವಿಯವರು ವಚನ ಗಾಯನ ನಡೆಸಿಕೊಟ್ಟರು. ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ಆಡಳಿತಾಧಿಕಾರಿ ಎಸ್.ಪಿ. ಉದಯಶಂಕರ್ ಅಧ್ಯಕ್ಷತೆ ವಹಿಸಿದ್ದರು.ಸುತ್ತೂರು ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಉಮೇಅಸ್ಮಾ, ಜೆಎಸ್‌ಎಸ್ ಸಂಸ್ಥೆಗಳ ಮುಖ್ಯಸ್ಥರಾದ ಜಿ.ಎಲ್. ತ್ರಿಪುರಾಂತಕ, ವೀರಭದ್ರಯ್ಯ, ಡಾ. ಎಚ್.ಎಂ. ಮಹೇಶ್, ಎಂ. ರಾಜಶೇಖರಮೂರ್ತಿ, ಜಿ. ಶಿವಮಲ್ಲು, ಮ.ಗು. ಬಸವಣ್ಣ, ಜಿ.ಎಂ. ಷಡಕ್ಷರಿ, ಜಿ. ಶಿವಸ್ವಾಮಿ, ಮಹದೇವಪ್ರಸಾದ್, ಪಿ. ಸುಶೀಲ ಇದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಎಚ್.ಎಂ. ಸವಿತಾ ಸ್ವಾಗತಿಸಿದರು. ಎ. ಚಂದನ ವಂದಿಸಿದರು, ಬಿ. ವೇದಾವತಿ ನಿರೂಪಿಸಿದರು.