ಶರಣರೆಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಬಸವಣ್ಣನವರು

KannadaprabhaNewsNetwork |  
Published : Sep 23, 2026, 04:15 AM IST
ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 54ನೇ ವರ್ಷದ ವಿನಾಯಕ ಮೂರ್ತಿ ವಿಸರ್ಜನೆ ಕಾರ್ಯ ಮಂಗಳವಾರ ನಡೆದಿದ್ದು, ಈ ಸಂಬಂಧ ಆಯೋಜಿಸಲಾಗಿದ್ದ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಗಮನ ಸೆಳೆದ ವೀರಗಾಸೆ ನೃತ್ಯ.  | Kannada Prabha

ಸಾರಾಂಶ

ಶಿವತತ್ತ್ವ ಚಿಂತಾಮಣಿಯಲ್ಲಿ ಕವಿಯು ಕಿನ್ನರಿ ಬೊಮ್ಮಯ್ಯನವರ ಬಗ್ಗೆ ವರ್ಣಿಸಿದ್ದಾನೆ.

ಕನ್ನಡಪ್ರಭ ವಾರ್ತೆ ಮೈಸೂರುಬೆಳಕಿಗೆ ಬೆಳಕು ಬೆರೆತಂತೆ ಮಹಾಮನೆಯಲ್ಲಿದ್ದ ಶರಣರೆಲ್ಲರನ್ನು ಬಸವಣ್ಣನವರು ಸಮಾನವಾಗಿ ಕಾಣುತ್ತಿದ್ದರು ಎಂದು ವಿದ್ವಾಂಸ ಡಾ.ಕೆ. ಅನಂತರಾಮು ತಿಳಿಸಿದರು.ಮೈಸೂರಿನ ಸುತ್ತೂರು ಮಠದಲ್ಲಿ ಶ್ರಾವಣ ಮಾಸದ 28ನೇ ದಿನದ ಪ್ರವಚನ ನೀಡಿದ ಅವರು, ಶಿವತತ್ತ್ವ ಚಿಂತಾಮಣಿಯಲ್ಲಿ ಕವಿಯು ಕಿನ್ನರಿ ಬೊಮ್ಮಯ್ಯನವರ ಬಗ್ಗೆ ವರ್ಣಿಸಿದ್ದಾನೆ. ಬೊಮ್ಮಯ್ಯನವರು ಪೂಡೂರು ಎಂಬಲ್ಲಿ ಅಕ್ಕಸಾಲಿಗ ವೃತ್ತಿ ಮಾಡಿಕೊಂಡಿರುತ್ತಾರೆ. ಕಿನ್ನರಿ ನುಡಿಸುವುದರಲ್ಲಿಯೂ ಪರಿಣಿತಿಯನ್ನು ಹೊಂದಿರುತ್ತಾರೆ. ಅಪ್ರತಿಮ ಶಿವಭಕ್ತನಾಗಿರುತ್ತಾರೆ ಎಂದರು.ಅಕ್ಕಸಾಲಿಗರಾಗಿದ್ದ ಅವರು ಎಷ್ಟೇ ಪ್ರಾಮಾಣಿಕವಾಗಿ ಆಭರಣಗಳನ್ನು ಮಾಡುತ್ತಿದ್ದರು ಜನ ಅವರನ್ನು ಸಂಶಯಿಸುತ್ತಿದ್ದರು. ಅಪವಾದ ಹೊರೆಸುತ್ತಿದ್ದರು. ಇದರಿಂದ ಅವರ ಮನಸ್ಸಿಗೆ ನೋವಾಗುತ್ತಿತ್ತು. ಇದರಿಂದ ಅವರು ಆ ವೃತ್ತಿಯನ್ನು ತ್ಯಜಿಸಿ ಕಲ್ಯಾಣ ಪಟ್ಟಣವನ್ನು ಸೇರುವರು. ಅಲ್ಲಿನ ತ್ರಿಪುರಾಂತಕ ದೇವಾಲಯದಲ್ಲಿ ಕಿನ್ನರಿ ನುಡಿಸುವ ಕಾಯಕ ಮಾಡ ತೊಡಗುವರು. ಬಸವಣ್ಣನವರ ವಿಶ್ವಾಸಕ್ಕೂ ಪಾತ್ರನಾಗುವರು. ಬಸವಣ್ಣನವರು ಅವನಿಗೆ ಅವರ ಪೂಜೆಯ ಸಮಯದಲ್ಲಿ ಕಿನ್ನರಿಯನ್ನು ನುಡಿಸಲು ಹಾಗೂ ಮಹಾಮನೆಯ ದಾಸೋಹದ ಉಸ್ತುವಾರಿ ನೋಡಿಕೊಳ್ಳಲು ತಿಳಿಸುವರು.ಒಂದು ದಿನ ಅಲ್ಲಿ ಈರುಳ್ಳಿಯನ್ನು ಸುಲಿಯುತ್ತಿರುತ್ತಾರೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಬಸವಣ್ಣನವರು ಯಾರು ತಂದದ್ದು ಈ ಭೋಜ್ಯವನ್ನು ಎಂದು ಪ್ರಶ್ನಿಸುವರು. ಬಸವಣ್ಣನವರು ಈರುಳ್ಳಿಯ ಬಗ್ಗೆ ತಿರಸ್ಕಾರದ ಮನೋಭಾವನೆಯನ್ನು ಹೊಂದಿರುತ್ತಾರೆ. ಅಲ್ಲಿದ್ದವರು ಇದನ್ನು ಬೊಮ್ಮಯ್ಯನು ತಂದಿದ್ದು ಎಂದು ತಿಳಿಸುವರು. ಏನೂ ಮಾತನಾಡದೇ ಬಸವಣ್ಣನವರು ಅಲ್ಲಿಂದ ತೆರಳುವರು. ಈ ವಿಷಯ ಬೊಮ್ಮಯ್ಯನಿಗೆ ತಿಳಿಯುವುದು. ಬಸವಣ್ಣನವರು ಈ ವಿಷಯವಾಗಿ ತನ್ನ ಮೇಲೆ ಕೋಪಿಸಿಕೊಂಡಿದ್ದಾರೆ ಎಂದು ಮಹಾಮನೆಯನ್ನು ತೊರೆದು ಊರಾಚೆಯ ಒಂದು ಕಲ್ಲು ಮಂಟಪದಲ್ಲಿ ಚಿಂತಿಸುತ್ತಾ ಕುಳಿತುಕೊಳ್ಳವರು.ಇತ್ತ ಬಸವಣ್ಣನವರು ಪೂಜೆಗೆ ತೆರಳಿರುವರು. ಆ ಸಂದರ್ಭದಲ್ಲಿ ಕಿನ್ನರಿಯನ್ನು ನುಡಿಸುವ ಬೊಮ್ಮಯ್ಯನಿಲ್ಲ ಎಂಬುದು ಅವರ ಗಮನಕ್ಕೆ ಬರುವುದು. ಅಲ್ಲಿದ್ದವರು ಈರುಳ್ಳಿಯ ವಿಚಾರಕ್ಕೆ ತಾವು ಕೋಪ ಮಾಡಿಕೊಂಡರೆಂದು ಭಾವಿಸಿ ಅವರು ಹೊರಟು ಹೋಗಿರುವರು ಎನ್ನುತ್ತಾರೆ. ಬಸವಣ್ಣನವರು ಪೂಜೆಯನ್ನು ಅರ್ಧಕ್ಕೆ ಬಿಟ್ಟು ಬೊಮ್ಮಯನನ್ನು ಹುಡುಕಿ ಎನ್ನುತ್ತಾರೆ. ಅವರು ಊರಾಚೆಯ ಕಲ್ಲುಮಂಟಪದಲ್ಲಿ ಕುಳಿತಿರುವುದು ತಿಳಿಯುವುದು. ಬಸವಣ್ಣನವರು ಊರಿನ ತುಂಬೆಲ್ಲ ಈರುಳ್ಳಿ ಮೆರವಣಿಗೆ ಮಾಡಿಸುತ್ತಾರೆ. ಈರುಳ್ಳಿಯ ಹಾರಗಳನ್ನು ಹಾಕಿಕೊಂಡು ಬೊಮ್ಮಯ್ಯನನ್ನು ಕರೆದುಕೊಂಡು ಬರಲು ಹೋಗುವರು. ಬಸವಣ್ಣನವರು ಬೊಮ್ಮಯ್ಯನಲ್ಲಿ ನನ್ನಿಂದ ತಪ್ಪಾಗಿದೆ ಕ್ಷಮಿಸು ಬೊಮ್ಮಯ್ಯ ಬೇಸರಿಸಿಕೊಳ್ಳಬೇಡ ಎನ್ನುವರು. ಹೀಗೆ ಅವರನ್ನು ಮರಳಿ ಮಹಾಮನೆಗೆ ಸ್ವಾಗತಿಸುತ್ತಾರೆ. ಬಸವಣ್ಣನವರು ಎಲ್ಲ ಶರಣರನ್ನು ಅಮೃತಕ್ಕೆ ಅಮೃತ ಬೆರೆತಂತೆ ಪ್ರೀತಿಯಿಂದ ಕಾಣುತ್ತಿದ್ದರು ಎಂದು ತಿಳಿಸಿದರು.ಡಾ.ಬಿ.ಎಸ್. ಪ್ರಿಯಾ ಮತ್ತು ಡಾ.ಎಸ್. ನಂಜುಂಡಸ್ವಾಮಿ ಕುಟುಂಬದವರು ಸೇವಾರ್ಥ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಟಂ.. ಮೈಸೂರು-ಚಾ.ನಗರ ಕೇಂದ್ರ ಬ್ಯಾಂಕ್‌ಗೆ ₹5.70 ಕೋಟಿ
ಎಂಎಸ್‌ಎಂಇ ಉದ್ಯಮಿಗಳು ಇ-ವಾಣಿಜ್ಯ ಬಳಸಿ