ಕನ್ನಡಪ್ರಭ ವಾರ್ತೆ ಉಡುಪಿ
ಅರವತ್ತು ಸಂವತ್ಸರಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥರಿಗೆ ಸಾರ್ವಜನಕರಿಂದ ರಥಬೀದಿಯಲ್ಲಿ ಸುವರ್ಣಾಭಿಷೇಕ, ಪುಷ್ಪಾಭಿಷೇಕ ನಡೆಸಿ, ಗೌರವಕಾಣಿಕೆ ಸಮರ್ಪಿಸಿ ಅಭಿವಂದಿಸಲಾಯಿತು. ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮತ್ತು ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ವಿದ್ವಾನ್ ಗೋಪಾಲ್ ಜೋಯಿಸ್ ಇರ್ವತ್ತೂರು ಮತ್ತಿತರರು ಉಪಸ್ಥಿತರಿದ್ದರು. ಅಭಿವಂದನಾ ಸಮಿತಿಯ ಅಧ್ಯಕ್ಷ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸ್ವಾಗತಿಸಿದರು. ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿದರು. 54 ಮಂದಿಗೆ ಹಕ್ಕುಪತ್ರ ವಿತರಣೆ: ಎರಡು ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ತಲಾ 5 ಲಕ್ಷ ರು. ಸಹಾಯಧನ, ಅಂಗವಿಕಲರಿಗೆ ಗಾಲಿಕುರ್ಚಿ, ಸ್ವಉದ್ಯೋಗಾರ್ಥಿಗಳಿಗೆ ಹೊಲಿಗೆಯಂತ್ರವನ್ನು ವಿತರಿಸಲಾಯಿತು. ಪೇಜಾವರ ಮಠಕ್ಕೆ ಸೇರಿದ ಜಮೀನಿನಲ್ಲಿ ವಾಸವಿರುವ 54 ಕುಟುಂಬಗಳಿಗೆ ಶ್ರೀಗಳು ನಿವೇಶನ ಹಕ್ಕುಪತ್ರವನ್ನು ವಿತರಿಸಿದರು. ಕವನ ಅಭಿನಂದನಾ ಪತ್ರ: ಪೇಜಾವರ ಶ್ರೀಗಳಿಗೆ ಅಭಿನಂದನಾ ಪತ್ರದ ಬದಲಾಗಿ, ವಾಸುದೇವ್ ಭಟ್ ಪೆರಂಪಳ್ಳಿ ರಚಿಸಿ, ರಾಗ ಸಂಯೋಜನೆ ಮಾಡಿದ ಕವನವನ್ನು ವೇದಿಕೆಯ ಕೆಳಭಾಗದಲ್ಲಿ ಧನಶ್ರೀ ಶಬರಾಯ ವಯಲಿನ್ ನುಡಿಸಿ, ನಾಗರಾಜ್ ಹೆಗ್ಡೆ ತಬಲಾವನ್ನು ಬಾರಿಸಿ, ಗಾರ್ಗಿಯವರು ಗುರು ಸ್ತುತಿಯನ್ನು ಹಾಡುವ ಮೂಲಕ ಅರ್ಪಿಸಿದರು. ದೋಣಿ ಮಂಗಳ ದ್ರವ್ಯ: ಕಲಾವಿದ ರಮೇಶ್ ಕಿದಿಯೂರು ನೇತೃತ್ವದಲ್ಲಿ ನಿರ್ಮಾಣವಾದ ದೋಣಿಯಲ್ಲಿ ಮಂಗಳದ್ರವ್ಯಾದಿಗಳನ್ನು ರಥಬೀದಿಯ ಮೂಲಕ ತಂದು ಪೇಜಾವರ ಶ್ರೀಗಳಿಗೆ ಅರ್ಪಿಸಲಾಯಿತು. ಈ ದೋಣಿಯನ್ನು ಪೇಜಾವರ ಮಠದ ನೀಲಾವರ ಗೋಶಾಲೆಯ ಕೆರೆಯಲ್ಲಿ ಬಳಕೆಗೆಂದು ಹಸ್ತಾಂತರಿಸಲಾಯಿತು.ಎದೆಗಾರಿಕೆ - ಅರ್ಹತೆ ಎರಡೂ ಇದೆ ಸಾರ್ವಜನಿಕ ಅಭಿನಂದನೆ ಸ್ವೀಕರಿಸಲು ಮಠಾಧೀಶರಿಗೆ ಎದೆಗಾರಿಕೆಬೇಕು. ಅಂತಹ ಎದೆಗಾರಿಕೆ ಶ್ರೀ ವಿಶ್ವಪ್ರಸನ್ನತೀರ್ಥರಿಗೆ ಇದೆ. ಹಿಂದಿನಿಂದಲೂ ಅವರು ಸಾರ್ವಜನಿಕರೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡವರು, ಆದ್ದರಿಂದ ಅಭಿನಂದನೆ ಸ್ವೀಕರಿಸಲು ಅವರು ಅರ್ಹರು. ಮಠಾಧೀಶರ ಮೇಲೆ ಸಮಾಜ ಮತ್ತು ಧರ್ಮವನ್ನು ಉಳಿಸುವ ದೊಡ್ಡ ಜವಾಬ್ದಾರಿ ಇದೆ. ಅದನ್ನು ಗುರುವಿನಂತೆ ಶಿಷ್ಯರು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎನ್ನುವ ವಿಶ್ವಾಸವಿದೆ- ಶ್ರೀ ವಿದ್ಯಾಸಾಗರ ತೀರ್ಥರು, ಶ್ರೀ ಕೃಷ್ಣಾಪುರ ಮಠಜ್ಞಾನ ಧೈರ್ಯದ ಸಾಕಾರ ಮೂರ್ತಿ ಜ್ಞಾನ, ವೈರಾಗ್ಯ, ಧೈರ್ಯ ಗುಣಗಳು ಇರುವ ಸಕಾರಮೂರ್ತಿ ಶ್ರೀ ವಿಶ್ವಪ್ರಸನ್ನ ತೀರ್ಥರು. ವಯಸ್ಸಿಗೂ ಮೀರಿದ ಚಟುವಟಿಕೆಗಳು ಶ್ರೀಗಳನ್ನು ಎತ್ತರದ ಸ್ಥಾನದಲ್ಲಿ ಇರಿಸಿವೆ. ಹಿರಿಯ ಶ್ರೀಗಳ ಹಾದಿಯಲ್ಲಿ ನಡೆಯುತ್ತಿದ್ದಾರೆ. ರಾಮ ಮಂದಿರ ನಿರ್ಮಾಣದ ಹಿಂದೆ ಶ್ರೀಗಳ ಶ್ರಮ ದೊಡ್ಡದು. ಅವರು ತಮ್ಮ ಸಾಧನೆಗಳಿಂದ ಸಾರ್ವಜನಿಕ ಅಭಿವಂದನೆಗೆ ನಿಜವಾಗಿಯೂ ಅರ್ಹರಾಗಿದ್ದಾರೆ - ಶ್ರೀ ವಿದ್ಯಾವಲ್ಲಭ ತೀರ್ಥರು, ಕಾಣಿಯೂರು ಮಠ