ಗದಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಪಾದಯಾತ್ರೆ, ಹೋರಾಟ ಮಾಡಲಾಗಿದೆ ಆದರೆ, ಜಯ ಸಿಗದ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮಾಜದ ವಕೀಲರ ಮಂದಾಳತ್ವದಲ್ಲಿ ಡಿ. 10 ರಂದು ನಡೆಯುವ ಬೆಳಗಾವಿ ಅಧಿವೇಶನಕ್ಕೆ ರೈತರ ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಈ ಮುತ್ತಿಗೆ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಪಂಚಮಸಾಲಿಗಳು ಸರ್ಕಾರಕ್ಕೆ ಯಾವುದೇ ಅಧಿಕಾರ, ಅಂತಸ್ತು, ಭೂಮಿ ಕೇಳಿಲ್ಲ. ಬದಲಾಗಿ ಸಮಾಜದ ಏಳಿಗೆಗಾಗಿ 2ಎ ಮೀಸಲಾತಿ ಕೊಡಿ ಎಂದು ಕೇಳಿದ್ದೇವೆ. ಮೀಸಲಾತಿ ಎನ್ನುವ ಒಂದು ರೊಟ್ಟಿಯಲ್ಲಿ ತುಣುಕು ರೊಟ್ಟಿ ನಮಗೂ ನೀಡಿ ಎಂದು ಕೇಳುತ್ತಿದ್ದೇವೆ. ಸಮಾಜದ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಆಗ್ರಹಿಸುತ್ತಿದ್ದೇವೆ.
ಆದರೆ ನಮ್ಮ ಮನವಿಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಅಂದು ಕಿತ್ತೂರು ರಾಣಿ ಚೆನ್ನಮ್ಮ, ಜಗಜ್ಯೋತಿ ಬಸವೇಶ್ವರರಿಗೆ ಮೋಸ ಮಾಡಿದಂತೆ ಇಂದು ಪಂಚಮಸಾಲಿ ಸಮುದಾಯಕ್ಕೆ ಕೆಲವು ಕಾಣದ ಕೈಗಳು ಉದ್ದೇಶ ಪೂರ್ವಕವಾಗಿ ಷಡ್ಯಂತ್ರ ಮಾಡುತ್ತಿವೆ. ನಮ್ಮ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದ್ದು, ನಾವೆಲ್ಲರೂ ಒಂದಾಗಿ ಉಗ್ರ ಹೋರಾಟ ಮಾಡಿದಾಗ ಮಾತ್ರ ನಮಗೆ ಜಯ ಸಿಗುತ್ತದೆ. ಇಲ್ಲದಿದ್ದರೇ ನಮ್ಮ-ನಮ್ಮಲ್ಲೇ ಜಗಳವಾಡುತ್ತಾ ಸಮಾಜದ ಪೀಳಿಗೆಯನ್ನು ಸಂಕಷ್ಟದ ಪರಿಸ್ಥಿತಿಗೆ ದೂಡಿದಂತಾಗುತ್ತದೆ ಎಂದು ಸ್ವ ಸಮಾಜದ ಮುಖಂಡರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ ಮುಂತಾದವರು ಮಾತನಾಡಿದರು.
ರಾಜ್ಯಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಪಂಚಮಸಾಲಿ ಸಮಾಜದ ವಕೀಲರಿದ್ದಾರೆ. ಬೆಳಗಾವಿಯಲ್ಲಿ ನಡೆದ ವಕೀಲರ ಸಭೆಯಲ್ಲಿ 5 ಸಾವಿರಕ್ಕೂ ಹೆಚ್ಚು ವಕೀಲರು ಭಾಗವಸಿದ್ದರು. ಕಾನೂನಿನ ಚೌಕಟ್ಟಿನಲ್ಲಿ ಹೋರಾಟದ ರೂಪರೇಷಗಳ ಬಗ್ಗೆ ಈಗಾಗಲೇ ಚರ್ಚಿಸಲಾಗಿದ್ದು, 2ಎ ಮೀಸಲಾತಿ ಹೋರಾಟಕ್ಕೆ ಸಮಾಜದ ವಕೀಲರ ಸಹಕಾರ ಮುಂದುವರಿಯಲಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹಾಂತೇಶಗೌಡ ಹಿರೇಮನಿಪಾಟೀಲ ಹೇಳಿದ್ದಾರೆ.