ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ವೃತ್ತಿಪರ ನೇಕಾರರ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ಬರೆದ ಮನವಿಯನ್ನು ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿಗೆ ಸಲ್ಲಿಸಲಾಯಿತು.
ಸರ್ಕಾರಗಳು ನೇಕಾರರನ್ನು ನಿರ್ಲಕ್ಷಿಸುವುದು ಸಲ್ಲದು. ದಶಕಗಳ ಕಾಲ ಗ್ರಾಮ ಮಟ್ಟದಿಂದ ಹೋರಾಟ ರೂಪಿಸಿ, ವಿಧಾನಸೌಧದೆದುರು ಧರಣಿ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಸರ್ಕಾರಗಳು ಇದೂವರೆಗೆ ನೇಕಾರರಿಗೆ ನ್ಯಾಯ ಒದಗಿಸಿಲ್ಲ. ಆತ್ಮಹತ್ಯೆಗೀಡಾದ ೫೩ ನೇಕಾರ ಕುಟುಂಬಗಳಿಗೆ ಕನಿಷ್ಠ ₹೧೦ ಲಕ್ಷ ಪರಿಹಾರ ನೀಡಬೇಕು. ರಾಜ್ಯದ ನೇಕಾರರ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿನ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕಟ್ಟಡ ಕಾರ್ಮಿಕ ಮಾದರಿಯ ಸೌಲಭ್ಯಗಳನ್ನು ವೃತ್ತಿಪರ ನೇಕಾರರಿಗೂ ಜಾರಿಗೊಳಿಸಿ ಗುರುತಿನ ಚೀಟಿಯೊಡನೆ ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಈಗಾಗಲೇ ನೂರಾರು ಕೋಟಿ ಭ್ರಷ್ಟಾಚಾರವಾಗಿದೆ. ಅವ್ಯವಹಾರದ ತನಿಖೆ ನಡೆಸಿ ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು. ನಿಗಮದಲ್ಲಿನ ನೂರಾರು ಕೈಮಗ್ಗ ನೇಕಾರರಿಗೆ ನಿವೇಶನ ಮತ್ತು ಮನೆಗಳ ಸಿಟಿಎಸ್ ಉತಾರೆಗಳಿಲ್ಲ, ಅಂಥ ನೇಕಾರರಿಗೆ ನಿವೇಶನ ಮತ್ತು ಮನೆಗಳಿಗೆ ಸಿಟಿಎಸ್ ಉತಾರೆ ಹಂಚಬೇಕು. ೫೫ ವರ್ಷ ಮೇಲ್ಪಟ್ಟ ನೇಕಾರರಿಗೆ ಮಾಸಿಕ ಕನಿಷ್ಠ ₹೫ಸಾವಿರ ಮಾಸಾಶನ ನೀಡಬೇಕು. ಕೈಮಗ್ಗ, ಜವಳಿ ಇಲಾಖೆಯ ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ದಿ ನಿಗಮ, ಸಹಕಾರಿ ಸಂಘ-ಸಂಸ್ಥೆಗಳಲ್ಲಿ ನೇಕಾರರ ಹೆಸರಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಿರಂತರವಾಗಿ ಸಾಗುತ್ತಿದೆ. ಸರ್ಕಾರ ಕಟ್ಟಿನಿಟ್ಟಿನ ಕ್ರಮ ಕೈಗೊಂಡು ತಕ್ಷಣ ಭ್ರಷ್ಟಾಚಾರ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ನೇಕಾರ ಸಮ್ಮಾನ್ ಯೋಜನೆಯಿಂದ ಹೊರಗುಳಿದಿರುವ ವೃತ್ತಿಪರ ನೇಕಾರರಿಗೂ ಯೋಜನೆಯ ಫಲ ದೊರಕಿಸಬೇಕು. ರಾಜ್ಯದ ಪವರ್ ಲೂಂ ನೇಕಾರರಿಗೆ ಸಂಬಂಧಿತ ವಿದ್ಯುತ್ ಬಿಲ್ ಸಮಸ್ಯೆಗೆ ಇದೂವರೆಗೆ ಸ್ಪಂದಿಸದ ಸರ್ಕಾರ ಬಾಕಿ ವಿದ್ಯುತ್ ಬಿಲ್‌ಗೆ ಯಾವುದೇ ದಂಡ, ಬಡ್ಡಿ, ಹೆಚ್ಚುವರಿ ಶುಲ್ಕವಿಲ್ಲದೇ ಪ್ರತಿ ಯುನಿಟ್‌ಗೆ ₹೧.೨೫ ಪೈಸೆಯಂತೆ ಕಂತುಗಳ ಮೂಲಕ ಬಾಕಿ ಭರಿಸಿಕೊಳ್ಳಬೇಕು. ಕೈಮಗ್ಗ ಮತ್ತು ಜವಳಿ ಇಲಾಖೆಯ ಹಲವಾರು ಯೋಜನೆಗಳು ಅನುದಾನ ಕೊರತೆ ಕಾರಣ ನೇಕಾರರು ಸೌಲಭ್ಯ ವಂಚಿತರಾಗುವಂತಾಗಿದ್ದು, ₹೧೫೦೦ ಕೋಟಿ ಅನುದಾನ ಇಲಾಖೆಗೆ ಒದಗಿಸಿ ಎಲ್ಲ ನೇಕಾರರಿಗೂ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ರಾಜೇಂದ್ರ ಮಿರ್ಜಿ, ಸಂಗಪ್ಪ ಉದಗಟ್ಟಿ, ಆರ್.ಐ.ಹೋಳಗಿ, ಅಶೋಕ ಕರ್ಲಟ್ಟಿ, ಸುಭಾಸ್ ಇಟನಾಳ, ಎಸ್.ಎಸ್.ದುರ್ಗಣ್ಣವರ, ಪಿ.ಬಿ.ಸಿಂದಗಿ,ಮಹಾನಿಂಗ ಬರಗಿ, ಎ.ಪಿ.ಬಾಣಕಾರ, ಪಿ.ಬಿ.ಸಿದ್ದಾಪುರ,ಸದಾಶಿವ ಬರಗಿ ಸೇರಿದಂತೆ ಅನೇಕರಿದ್ದರು.