ಕನ್ನಡಪ್ರಭ ವಾರ್ತೆ ಮಂಗಳೂರುನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಘೋಷಣೆಯಾಗಿದ್ದು, ಮೇ 9 ರಿಂದ 16 ರ ವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ. ನಾಮಪತ್ರ ವಿಭಾಗೀಯ ಕಚೇರಿ ಮೈಸೂರಿನಲ್ಲಿ ಸಲ್ಲಿಸಲು ಅವಕಾಶ ಇದೆ. ಈ ಚುನಾವಣೆಗೆ ಎರಡೂ ಕ್ಷೇತ್ರಗಳ ಮತದಾರರ ನೋಂದಣಿಗೆ ಮೇ 6 ರ ವರೆಗೆ ಅವಕಾಶ ನೀಡಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಈಗ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಇನ್ನೂ ಮತದಾರರ ನೋಂದಣಿಗೆ ಅವಕಾಶ ನೀಡಲಾಗಿದೆ.ನೋಂದಣಿಗೆ ಅರ್ಹತೆ: ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೆ 2023ರ ನವೆಂಬರ್ 1ರ ಮೊದಲು ಆರು ವರ್ಷ ಅವಧಿಯಲ್ಲಿ ಕನಿಷ್ಠ ಮೂರು ವರ್ಷ ಬೋಧನಾ ವೃತ್ತಿಯಲ್ಲಿ ತೊಡಗಿಸಿರಬೇಕು. ಪದವೀಧರ ಕ್ಷೇತ್ರಕ್ಕೆ 2023 ನವೆಂಬರ್ 1ರ ಮೊದಲು ಮೂರು ವರ್ಷದಲ್ಲಿ ಅಂದರೆ 1-11-2020ಕ್ಕಿಂತ ಮೊದಲು ಮಾನ್ಯತೆ ಪಡೆದ ವಿವಿಯಿಂದ ಪದವೀಧರರಾಗಿರಬೇಕು. ನಿಗದಿತ ನಮೂನೆಯಲ್ಲಿ ಅರ್ಜಿಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಆಯಾ ತಾಲೂಕಿನ ತಹಶೀಲ್ದಾರ್ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆ ಆಯುಕ್ತರಿಗೆ ಸಲ್ಲಿಸಬೇಕು ಎಂದರು. ಜೂ.3ರಂದು ಮತದಾನ:
ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಗೆ ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೇ 20 ರಂದು ಜೂನ್ 3ರಂದು ಮತದಾನ ನಡೆಯಲಿದ್ದು, ದ.ಕ. ಜಿಲ್ಲೆಯಲ್ಲಿ ಸುಮಾರು 12 ಮತದಾನ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದೆ. ಜೂನ್ 6 ರಂದು ಮತ ಎಣಿಕೆ ನಡೆಯಲಿದೆ. ಜೂ.12ರಂದು ನೀತಿಸಂಹಿತೆ ಕೊನೆಗೊಳ್ಳಲಿದೆ ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್ ಇದ್ದರು.