ಕೊಡ್ಲಿಪೇಟೆ: ಸ್ವಾಸ್ಥ್ಯ ಸಂಕಲ್ಪ ಜನ ಜಾಗೃತಿ ಕಾರ್ಯಕ್ರಮ

KannadaprabhaNewsNetwork | Published : Feb 20, 2024 1:45 AM

ಸಾರಾಂಶ

ಪ್ರತಿಯೊಬ್ಬರು ದುರಾಭ್ಯಾಸಗಳಿಂದ ದೂರ ಇದ್ದು ಈ ಮೂಲಕ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ದುಶ್ಚಟ ದುರಾಭ್ಯಾಸಗಳಿಂದ ಆರೋಗ್ಯ ಮೇಲೆ ದುಷ್ಪಾರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ದುರಾಭ್ಯಾಸಗಳಿಂದ ದೂರ ಇದ್ದು ಈ ಮೂಲಕ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು ಎಂದು ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವೈಶಾಖ ಅಭಿಪ್ರಾಯ ಪಟ್ಟರು.

ಅವರು ಕೊಡ್ಲಿಪೇಟೆ ಕಿರಿಕೊಡ್ಲಿ ಶ್ರೀ ಸದಾಶಿವ ಸ್ವಾಮೀ ಪದವಿ ಪೂರ್ವ ಕಾಲೇಜಿನಲ್ಲಿ ಕೊಡ್ಲಿಪೇಟೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ಜನ ಜಾಗೃತಿ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಸ್ವಾಸ್ಥ್ಯ ಸಂಕಲ್ಪ’ ಜನ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯದ ಮೇಲೆ ಕಾಳಜಿ ಇರಬೇಕು. ಇದರ ಜೊತೆಯಲ್ಲಿ ದುಶ್ಚಟಗಳಿಂದ ದೂರ ಇರಬೇಕು ಮದ್ಯಪಾನ, ಧೂಮಪಾನ, ತಂಬಾಕು, ಮಾದಕ ಪದಾರ್ಥ ಇನ್ನು ಮುಂತಾದ ದುಶ್ಚಟಗಳಿಂದ ಆರೋಗ್ಯ ಮೇಲೆ ಪರಿಣಾಮ ಬೀಳುತ್ತದೆ. ಇಂತಹ ದುರಾಭ್ಯಾಸದಿಂದ ಸಾವು ಸಹ ಸಂಭವಿಸುತ್ತದೆ. ಈ ನಿಟ್ಟಿನಲ್ಲಿ ಇಂತಹ ದುಶ್ಚಟಗಳಿಂದ ದೂರ ಇರುವಂತೆ ಸಲಹೆ ನೀಡಿದರು. ದುಶ್ಚಟಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜೊತೆಯಲ್ಲಿ ತನ್ನ ಸಂಸಾರದಲ್ಲಿ ಮತ್ತು ಸಮಾಜದಲ್ಲೂ ಆತನಿಗೆ ಗೌರವ ಸಿಗುವುದಿಲ್ಲ. ಅಷ್ಟೇ ಅಲ್ಲದೆ ಸಮಾಜದ ಸ್ವಾಸ್ಥ್ಯ ಕೆಡಲು ದುಶ್ಚಟವು ಕಾರಣವಾಗುತ್ತದೆ. ಈ ದಿಸೆಯಲ್ಲಿ ಎಲ್ಲಾರೂ ದುಶ್ಚಟದಿಂದ ದೂರ ಇದ್ದು ಆರೋಗ್ಯದಾಯಕ ಜೀವನ ನಡೆಸುವಂತೆ ಸಲಹೆ ನೀಡಿದರು.

ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಭಗವಾನ್ ಗೌಡ ಉದ್ಘಾಟಿಸಿ ಮಾತನಾಡಿ, ದುಶ್ಚಟ ದುರಾಭ್ಯಾಸದಿಂದ ದೂರ ಇರಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನೆಗಳಲ್ಲಿ ಒಂದಾದ ಜನ ಜಾಗೃತಿ ವೇದಿಕೆಯನ್ನು ಸ್ಥಾಪಿಸಲಾಗಿದೆ. ಈ ಮೂಲಕ ಜನ ಜಾಗೃತಿ ವೇದಿಕೆಯು ಸ್ವಾಸ್ಥ್ಯ ಸಂಕಲ್ಪ ಎಂಬ ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.

ಉತ್ತಮ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಈ ವಿಷಯದ ಕುರಿತು ಸಮುದಾಯ ಆರೋಗ್ಯ ಶಿಕ್ಷಾಣಾಧಿಕಾರಿ ಮಂಜುಳಾ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ನಾಗರಾಜ್ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಉಪನ್ಯಾಸಕಿ ಲತಾ, ಸೇವಾ ಪ್ರತಿನಿಧಿಗಳಾದ ಫಾತಿಮಾ, ರಾಣಿ, ಕವಿತ, ಶಾರದಮ್ಮ ಮುಂತಾದವರಿದ್ದರು.

Share this article