ಪ್ರಾಮಾಣಿಕ ಪ್ರಯತ್ನದಿಂದ ವ್ಯವಸ್ಥೆ ಸುಧಾರಣೆ ಸಾಧ್ಯ: ಸಚಿವ ಬೋಸರಾಜು

KannadaprabhaNewsNetwork | Published : Jan 17, 2024 1:50 AM

ಸಾರಾಂಶ

ರಾಯಚೂರಿನಲ್ಲಿ ನವೀಕರಣಗೊಂಡ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರವನ್ನು ಸಚಿವ ಎನ್‌.ಎಸ್‌.ಬೋಸರಾಜು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಜನರ ಸಹಕಾರ, ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನದಿಂದ ವ್ಯವಸ್ಥೆ ಸುಧಾರಣೆಯಾಗಲು ಸಾಧ್ಯವಾಗಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಹೇಳಿದರು.

ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ನವೀಕರಣಗೊಂಡ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಗಳು, ಬಸ್ ನಿಲ್ದಾಣ, ಉದ್ಯಾನವನ, ರಂಗಮಂದಿರ ಸೇರಿದಂತೆ ಸಾರ್ವಜನಿಕರ ಉಪಯೋಗಕ್ಕಾಗಿ ಇರುವ ಆಸ್ತಿಗಳು ಅಭಿವೃದ್ಧಿಯಾಗಬೇಕಾದರೆ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರು ಅವುಗಳನ್ನು ಸುರಕ್ಷಿತವಾಗಿ ಮತ್ತು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಕಲಾವಿದರು ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ನಗರದಲ್ಲಿರುವ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರವನ್ನು 3 ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ. ಸುಸಜ್ಜಿತ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.

ರಂಗಮಂದಿರವು ನಗರದ ಅನುಕೂಲಕರ ಪ್ರದೇಶದಲ್ಲಿದ್ದು, ಸಾರ್ವಜನಿಕರು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಗರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದರು.

371 ಜೆ ಮೀಸಲಾತಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಅನುದಾನದಲ್ಲಿ ಶೇ.25ರಷ್ಟು ಅನುದಾನವನ್ನು ಶಿಕ್ಷಣಕ್ಕೆ ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ರಂಗಮಂದಿರವು ಹೆಚ್ಚಿನ ಜನರಿಗೆ ಉಪಯೋಗವಾಗಬೇಕಿದೆ ಎಂದು ತಿಳಿಸಿದರು.

ಇದೇ ವೇಳೆ ನಗರ ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಮಾತನಾಡಿ, ಸರ್ಕಾರಿ ಆಸ್ತಿಗಳನ್ನು ಕಾಪಾಡುವ ಜವಾಬ್ದಾರಿ ಅಧಿಕಾರಿಗಳ ಜೊತೆಗೆ ಸಾರ್ವಜನಿಕರದ್ದು ಆಗಿದೆ. ಮುಂದಿನ ದಿನಗಳಲ್ಲಿ ನಗರದ ಐತಿಹಾಸಿಕ ಮಾವಿನ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಅನುದಾನದ ಲಭ್ಯತೆ ಮೇಲೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಭೆ ಸದಸ್ಯರಾದ ಜಯಣ್ಣ, ಶಶಿರಾಜ, ಮುಖಂಡರಾದ ರವೀಂದ್ರ ಜಲ್ದಾರ್‌, ಕೆ.ಶಾಂತಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು, ಸಾಹಿತಿ ವೀರಹನುಮಾನ, ರಂಗಕರ್ಮಿ ವಿ.ಎನ್ ಅಕ್ಕಿ ಸೇರಿ ಕಸಾಪ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.ಕೆಕೆಆರ್‌ಡಿಬಿಯಡಿ ಶಿಕ್ಷಣಕ್ಕೆ ಶೇ.25ರಷ್ಟು ಅನುದಾನ ಮೀಸಲು

ಕಲ್ಯಾಣ ಕರ್ನಾಟಕ ಭಾಗ ಇಂದಿಗೂ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಶೇ.25ರಷ್ಟು ಅನುದಾನವನ್ನು ಶೈಕ್ಷಣಿಕ ಚಟುವಟಿಕೆಗೆ ಮೀಸಲಿಡಲಾಗಿದೆ. ನಂಜುಂಡಪ್ಪ ವರದಿಯನ್ವಯ ಶಾಲೆಗಳ ಪ್ರಗತಿಗೆ ಒತ್ತು ನೀಡಲಾಗುತ್ತಿದೆ. ಕೆಕೆಆರ್‌ಬಿಡಿಯಲ್ಲಿ ಸುಮಾರು 2,100 ಕೋಟಿ ರೂ. ಈಗಾಗಲೇ ಉಳಿದಿದೆ. ಮತ್ತೆ ಮೂರು ಸಾವಿರ ಕೋಟಿ ನೀಡಿದ್ದು, ಮೂರು ತಿಂಗಳಲ್ಲಿ ಅದನ್ನು ಖರ್ಚು ಮಾಡಬೇಕಿದೆ. ಈ ಭಾಗದಲ್ಲಿ ಸಾಧ್ಯವಾದಷ್ಟು ಪ್ರಗತಿಗೆ ಜನಪ್ರತಿನಿಧಿಗಳೆಲ್ಲ ಶ್ರಮಿಸಬೇಕಿದೆ ಎಂದು ಸಚಿವ ಎನ್‌.ಎಸ್‌.ಬೋಸರಾಜು ಹೇಳಿದರು.ಗಮನ ಸೆಳೆದ ಸಾಮೂಹಿಕ ಗಾಯನ: ಸಮಾರಂಭ ಆರಂಭಕ್ಕು ಮೊದಲು ಶಾಲಾ ಮಕ್ಕಳಿಂದ ಸಾಮೂಹಿಕ ಗಾಯನ ಎಲ್ಲರ ಗಮನ ಸೆಳೆಯಿತು. ಉದ್ಘಾಟಣೆ ನಂತರ ಜಿಲ್ಲೆಯಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ನವೀಕರಣಗೊಂಡ ರಂಗಮಂದಿರದಲ್ಲಿ ಹವಾನಿಯಂತ್ರಣ ವ್ಯವಸ್ಥೆ, ಆಧುನಿಕ ತಂತ್ರಜ್ಞಾನದಿಂದ ಕೂಡಿದ ಬಣ್ಣದ ದೀಪಗಳ ವ್ಯವಸ್ಥೆ ಹಾಗೂ ಧ್ವನಿವರ್ಧಕ ಇತರೆ ವಿಶೇಷತೆಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.

Share this article