ತಾಲೂಕು ಕೇಂದ್ರಗಳಲ್ಲೇ ದಾಖಲೆ ನೀಡಲು ವ್ಯವಸ್ಥೆ

KannadaprabhaNewsNetwork | Published : Mar 2, 2025 1:15 AM

ಸಾರಾಂಶ

ಕನ್ನಡಪ್ರಭ ವಾರ್ತೆ ತಿಕೋಟಾ ತಾಲೂಕು ಕೇಂದ್ರಗಳಲ್ಲಿ ಸಂಬಂಧಿಸಿದ ವಿವಿಧ ಸರ್ಕಾರಿ ಕಚೇರಿಗಳನ್ನು ಪ್ರಾರಂಭಿಸಿ ಜನರಿಗೆ ಸ್ಥಳೀಯವಾಗಿ ದಾಖಲೆಗಳು ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಹಣ ಮತ್ತು ಸಮಯ ಎರಡೂ ಉಳಿತಾಯವಾಗಲಿದೆ ಎಂದು ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.‌ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ತಿಕೋಟಾ

ತಾಲೂಕು ಕೇಂದ್ರಗಳಲ್ಲಿ ಸಂಬಂಧಿಸಿದ ವಿವಿಧ ಸರ್ಕಾರಿ ಕಚೇರಿಗಳನ್ನು ಪ್ರಾರಂಭಿಸಿ ಜನರಿಗೆ ಸ್ಥಳೀಯವಾಗಿ ದಾಖಲೆಗಳು ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಹಣ ಮತ್ತು ಸಮಯ ಎರಡೂ ಉಳಿತಾಯವಾಗಲಿದೆ ಎಂದು ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.‌ಬಿ.ಪಾಟೀಲ ಹೇಳಿದರು.

ಪಟ್ಟಣದ ಕಂದಾಯ ಇಲಾಖೆಯ ಭೂಮಾಪನ ಎ.ಡಿ.ಎಲ್.ಆರ್ ಕಚೇರಿ ಮತ್ತು‌ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಶನಿವಾರ ತಿಕೋಟಾ ತಾಲೂಕು ಗ್ಯಾರಂಟಿ ಸಮಿತಿಯ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಬಬಲೇಶ್ವರ ಮತಕ್ಷೇತ್ರದಲ್ಲಿ ಎರಡೂ‌ ತಾಲೂಕು ಕೇಂದ್ರಗಳಲ್ಲಿ ತಾಲೂಕು ಶಕ್ತಿ ಸೌಧ (ಮಿನಿ ವಿಧಾನಸೌಧ) ನಿರ್ಮಿಸಲಾಗಿದೆ. ಈ ಮೂಲಕ ವಿವಿಧ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ಆರಂಭ ಮಾಡಲಾಗಿದೆ. ಇದರಿಂದ ತಿಕೋಟಾ ಮತ್ತು ಬಬಲೇಶ್ವರ ತಾಲೂಕುಗಳ ಜನರು ಪಹಣಿ, ಆಕಾರಬಂದ್‌ ಸೇರಿದಂತೆ ವಿವಿಧ ಆಸ್ತಿಗಳ ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಜನರು ಅಲೆದಾಡುವುದು ತಪ್ಪಲಿದೆ. ಅಲ್ಲದೇ, ಸಮಯ ಮತ್ತು ಹಣದ ಉಳಿತಾಯವೂ ಆಗಲಿದ್ದು, ಅವ್ಯವಹಾರಗಳಿಗೆ ಸಂಪೂರ್ಣ ಕಡಿವಾಣ ಹಾಕಿದಂತಾಗಲಿದೆ. ಅಧಿಕಾರಿಗಳು ಕೆಲಸ ಕಾರ್ಯಗಳಿಗೆ ಕಚೇರಿಗೆ ಬರುವ ರೈತರೊಂದಿಗೆ ಸೌಜನ್ಯದಿಂದ ವರ್ತಿಸುವ ಮೂಲಕ ಅಗತ್ಯ ದಾಖಲೆಗಳನ್ನು ನಿಗದಿತ ಸಮಯಕ್ಕೆ ನೀಡಬೇಕು‌ ಎಂದು ಸೂಚನೆ ನೀಡಿದರು.

ನಮ್ಮ‌ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು‌ ಟೀಕಿಸುತ್ತಿದ್ದವರೇ ಈಗ ಅವುಗಳನ್ನು ನಕಲು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಕಾರ್ಯಕ್ರಮದಲ್ಲಿ ಇದೇ ವೇಳೆ ಸಚಿವ ಎಂ.ಬಿ.ಪಾಟೀಲ ನಾನಾ ರೈತ ಫಲಾನುಭವಿಗಳಿಗೆ ಭೂದಾಖಲೆಗಳ ಪ್ರತಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬಾಲ‌ವಿಕಾಸ ಅಕಾಡೆಮಿ‌ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು‌ ಗೌಡನವರ, ಮುಖಂಡರಾದ ಸೋಮನಾಥ ಬಾಗಲಕೋಟ, ವಿಜುಗೌಡ ಪಾಟೀಲ, ಆರ್.ಜಿ.ಯರನಾಳ, ಸಂತೋಷ ಕೋಲಾರ, ಯಮನಪ್ಪ ಮಲಕನವರ, ಸಿದ್ದಾರ್ಥ ಪರನಾಕರ, ಬಸಯ್ಯ ವಿಭೂತಿ, ಲೇಪು ಕೋಣ್ಣೂರ, ರಾಜುಗೌಡ ಪಾಟೀಲ, ಜಕ್ಕಪ್ಪ ಎಡವೆ, ಮಲಕು ಹಂಜಿಗೆ, ರುದ್ರಗೌಡ, ಶಿವಾನಂದ ಪಾಟೀಲ, ಡಾ.ಗಜಾನನ ಮಹಿಶ್ಯಾಳ, ಯಾಕೂಬ್ ಜತ್ತಿ, ಭಾಗೀರಥಿ ತೇಲಿ, ಪ್ರಭಾವತಿ ನಾಟೀಕಾರ, ಮಹಾದೇವಿ ಗೋಕಾಕ, ಗೀತಾಂಜಲಿ ಪಾಟೀಲ, ಗ್ಯಾರಂಟಿ‌ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ ಬೋರಾಮಣಿ, ತಾಲೂಕು‌ ಅಧ್ಯಕ್ಷ ಗುರುಪಾದಗೌಡ ದಾಶ್ಯಾಳ, ಎಲ್ಲ ಸದಸ್ಯರು, ಜೆ.ಡಿ.ಎಲ್.ಆರ್ ನಜ್ಮಾ ಪೀರಜಾದೆ, ಡಿ.ಡಿ.ಎಲ್.ಆರ್ ಮಹಾಂತೇಶ ಮುಳಗುಂದ, ಎ.ಡಿ.ಎಲ್.ಆರ್ ಮುರುಗೇಶ ರೂಡಗಿ, ತಹಸೀಲ್ದಾರ್‌ ಸುರೇಶ ಚವಲಾರ ಮುಂತಾದವರು ಉಪಸ್ಥಿತರಿದ್ದರು.

Share this article