ಕೇಂದ್ರದಿಂದ ಉದ್ಯೋಗ ಖಾತರಿ ಯೋಜನೆ ಮುಗಿಸುವ ಹುನ್ನಾರ: ಟಿ.ಎಲ್.ಕೃಷ್ಣೇಗೌಡ ಆರೋಪ

KannadaprabhaNewsNetwork |  
Published : Sep 01, 2025, 01:03 AM IST
31ಕೆಎಂಎನ್ ಡಿ19 | Kannada Prabha

ಸಾರಾಂಶ

ಬಿಜೆಪಿಯಿಂದ ಧರ್ಮದ ಹೆಸರಿನಲ್ಲಿ ಉಳ್ಳವರ ಪರ ಕೆಲಸ ಮಾಡಲಾಗುತ್ತಿದೆಯೇ ಹೊರತು ರಾಜ್ಯದ ಸಾಮಾನ್ಯ ಜನರ ಅಗತ್ಯತೆಗಳ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಹಲಗೂರು

ಗ್ರಾಮೀಣ ಬಡ ಜನತೆಯ ಹಿತದೃಷ್ಟಿಯಿಂದ ಜಾರಿಗೆ ಬಂದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಕೇಂದ್ರ ಸರ್ಕಾರ ಮುಗಿಸುವ ಹುನ್ನಾರ ನಡೆಸಿದೆ ಎಂದು ಕಮ್ಯೂನಿಸ್ಟ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಆರೋಪಿಸಿದರು.

ಕರ್ನಾಟಕ ಕೃಷಿ ಕೂಲಿಕಾರರ ಸಂಘದ ವತಿಯಿಂದ ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಹೋಬಳಿ 2ನೇ ವಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಮ- ನರೇಗಾ ಯೋಜನೆಗಳಿಗೆ 1.12 ಲಕ್ಷ ಕೋಟಿ ಅನುದಾನ ಮಂಜೂರಾಗಿತ್ತು. ಪ್ರಸ್ತುತ ಕೂಲಿಕಾರರ ಹಿತದೃಷ್ಟಿಯಿಂದ 2.35 ಲಕ್ಷ ಕೋಟಿ ಅನುದಾನ ಅಗತ್ಯವಿತ್ತು. ಆದರೆ, ಪ್ರಸ್ತುತ ಸಾಲಿನಲ್ಲಿ ಕೇವಲ 86 ಸಾವಿರ ಕೋಟಿಗೆ ಇಳಿಸುವ ಮೂಲಕ ಬಡ ಕೂಲಿಕಾರರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಬಿಜೆಪಿಯಿಂದ ಧರ್ಮದ ಹೆಸರಿನಲ್ಲಿ ಉಳ್ಳವರ ಪರ ಕೆಲಸ ಮಾಡಲಾಗುತ್ತಿದೆಯೇ ಹೊರತು ರಾಜ್ಯದ ಸಾಮಾನ್ಯ ಜನರ ಅಗತ್ಯತೆಗಳ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ. ಖ್ಯಾತ ಬರಹಗಾರ್ತಿ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸಬಾರದು ಎಂದು ನಾಡ ಹಬ್ಬಕ್ಕೆ ಧರ್ಮ ಬೆರೆಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.

ಮುಖಂಡರಾದ ಕುಂತೂರು ಗೋಪಾಲ್ ಮಾತನಾಡಿ, ಗ್ರಾಮೀಣ ಜನರು ಪಟ್ಟಣದ ಕಡೆಗೆ ವಲಸೆ ಹೋಗಬಾರದೆಂಬ ಪ್ರಮುಖ ಉದ್ದೇಶದಿಂದ ಕೇಂದ್ರದ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿ ಪ್ರತಿಫಲವಾಗಿ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂತು. ಮಹತ್ವಾಕಾಂಕ್ಷಿ ಯೋಜನೆ ಸಮರ್ಪಕವಾಗಿ ಜಾರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಹನುಮೇಶ್, ಹಲಗೂರು ಹೋಬಳಿ ಘಟಕದ ಅಧ್ಯಕ್ಷೆ ಕುಂತೂರು ಲಕ್ಷ್ಮೀ, ಕಾರ್ಯದರ್ಶಿ ಗೊಲ್ಲರಹಳ್ಳಿ ಲಕ್ಷ್ಮೀ, ಕರಡಹಳ್ಳಿ ಶಿವಲಿಂಗಮ್ಮ, ರಾಜಮ್ಮ, ವಸಂತ, ರತ್ನಮ್ಮ, ತುಳಸಮ್ಮ, ಮಹದೇವಮ್ಮ, ಮಹೇಶ, ಗೌರಮ್ಮ ಸೇರಿ ಹಲವರು ಭಾಗವಹಿಸಿದ್ದರು.

PREV

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?