- 19ಕ್ಕೂ ಹೆಚ್ಚು ಜನರ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಇನ್ನೂ ದೂರು ದಾಖಲಿಸಿಲ್ಲ
- ಗಲಾಟೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ತಾಂಡ ನಿವಾಸಿಗಳು - ಮಾರ್ಕೋನಿ, ಸುರೇಶ ನಾಯ್ಕ,ಶಾರದಾಬಾಯಿ, ನಾಗಿಬಾಯಿ ಇನ್ನಿತರಿಗೆ ತೀವ್ರ ಹಲ್ಲೆ- - - ಕನ್ನಡಪ್ರಭ ವಾರ್ತೆ, ಶಿಕಾರಿಪುರ
ತಾಲೂಕಿನ ಅಂಬಾರಗೊಪ್ಪದ ಮನೆಯೊಂದರಲ್ಲಿ ಹೊಸ ವರ್ಷದ ಹಿನ್ನೆಲೆ ಆತಿಥ್ಯ ಸ್ವೀಕರಿಸಲು ತೆರಳಿದ ಸಂದರ್ಭ ಸ್ಥಳೀಯ ತಾಂಡ ನಿವಾಸಿಗಳು ಮತಾಂತರದ ಸುಳ್ಳು ಆರೋಪ ಹೊರಿಸಿ, ನನಗೆ ಹಾಗೂ ಜತೆಗಿದ್ದ ಕೆಲವರಿಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಈ ಹಿನ್ನೆಲೆ ತಪ್ಪಿತಸ್ಥರ ವಿರುದ್ಧ ಪೊಲೀಸರು ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಬ್ರದರನ್ ಚರ್ಚ್ ಫಾಸ್ಟರ್ ಸುರೇಶ್ ಆಗ್ರಹಿಸಿದರು.ಶುಕ್ರವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷದ ಹಿನ್ನೆಲೆ ಊಟಕ್ಕಾಗಿ ಗ್ರಾಮದ ಶಾರದಾಬಾಯಿ ಅವರು ಬ್ರದರನ್ ಚರ್ಚ್ ಪದಾಧಿಕಾರಿಗಳನ್ನು ಆಹ್ವಾನಿಸಿದ್ದರು. ಪ್ರಾರ್ಥನೆ ನಂತರ ಊಟಕ್ಕೆ ಸಿದ್ಧತೆ ನಡೆಸಲಾಗಿತ್ತು. ಆಗ ಮನೆಯೊಳಗೆ ನುಗ್ಗಿದ ಅಂಬಾರಗೊಪ್ಪ ತಾಂಡ ನಿವಾಸಿಗಳು ಗಲಾಟೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮನೆಯಿಂದ ಹೊರಗೆ ಎಳೆದುಕೊಂಡು ಮನಸೋಇಚ್ಛೆ ಥಳಿಸಿದರು ಎಂದು ದೂರಿದರು.
ಗಲಾಟೆಯಲ್ಲಿ ಮಾರ್ಕೋನಿ, ಸುರೇಶ ನಾಯ್ಕ,ಶಾರದಾಬಾಯಿ, ನಾಗಿಬಾಯಿ ಸೇರಿದಂತೆ ಹಲವರಿಗೆ ತೀವ್ರ ಹೊಡೆತ ಬಿದ್ದಿದೆ. ನೂರಾರು ಜನರು ಗಲಾಟೆ ನಡೆಸಿದ್ದು, ನಾವು ಪೊಲೀಸರಿಗೆ 19ಕ್ಕೂ ಹೆಚ್ಚು ಜನರ ವಿರುದ್ಧ ದೂರು ನೀಡಿದ್ದೇವೆ. ಆದರೂ ಈವರೆಗೆ ದೂರು ದಾಖಲಿಸಿಕೊಂಡಿಲ್ಲ. 38 ವರ್ಷದಿಂದ ಪಟ್ಟಣದಲ್ಲಿ ಬ್ರದರನ್ ಚರ್ಚ್ ನಡೆಸಿಕೊಂಡು ಬರುತ್ತಿದ್ದು, ತಾಲೂಕಿನಲ್ಲಿ ಈವರೆಗೆ ಇಂತಹ ದಬ್ಬಾಳಿಕೆ ನಡೆದಿಲ್ಲ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರ ವಿರುದ್ಧ ಹಲ್ಲೆ ನಡೆಯುತ್ತದೆ ಎಂದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಬೇಕಾದ ಧರ್ಮ ಆಚರಿಸಿಕೊಳ್ಳುವುದಕ್ಕೆ ಸ್ವತಂತ್ರರಾಗಿದ್ದಾರೆ. ಶತಮಾನದ ಹಿಂದೆ ಸ್ವಾಮಿ ವಿವೇಕಾನಂದರು ಚಿಕಾಗೋ ನಗರಕ್ಕೆ ಹೋಗಿ ಹಿಂದೂ ಧರ್ಮ ಪ್ರಚಾರ ನಡೆಸಿದರು. ಅವರಿಂದ ಹಲವರು ಪ್ರೇರಣೆ ಪಡೆದರು. ಹಾಗೆಯೇ ಧರ್ಮ ಪ್ರಚಾರ ಮಾಡುವ ಅವಕಾಶ ಇದ್ದರೂ ಬ್ರದರನ್ ಚರ್ಚ್ ಎಂದಿಗೂ ತಾಲೂಕಿನಲ್ಲಿ ಕರಪತ್ರ ಹಂಚಿಲ್ಲ, ಬಲವಂತದ ಮತಾಂತರ ಮಾಡಿಲ್ಲ. ಭಾರತದಲ್ಲಿ ಹುಟ್ಟಿನಿಂದ ಬರುವ ಧರ್ಮ ಬದಲಾವಣೆ ಅಸಾಧ್ಯ. ಕೇವಲ ಮನಸ್ಸಿನ ಪರಿವರ್ತನೆ ಸಾಧ್ಯ. ಕಾನೂನು ಉಲ್ಲಂಘಿಸುವ ಕೆಲಸ ಎಂದಿಗೂ ಮಾಡಿಲ್ಲ. ಶಾಂತಿಪ್ರಿಯರಾದ ನಮ್ಮ ಮೇಲೆ ಅಂಬಾರಗೊಪ್ಪದಲ್ಲಿ ಹಲ್ಲೆ ನಡೆದಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು.
ತಾಲೂಕು ಕ್ರೈಸ್ತ ಒಕ್ಕೂಟ ಅಧ್ಯಕ್ಷ ಆಂತೋಣಿ ದಾಸ್, ನಾಗಿಬಾಯಿ, ಸುರೇಶ್ ನಾಯ್ಕ, ಶಾರದಾಬಾಯಿ ಮತ್ತಿತರರು ಉಪಸ್ಥಿತರಿದ್ದರು.- - -
-29ಕೆಎಸ್.ಕೆಪಿ2:ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಗ್ರಾಮದಲ್ಲಿ ಬ್ರದರನ್ ಚರ್ಚ್ ಪದಾಧಿಕಾರಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶುಕ್ರವಾರ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.