ಕನ್ನಡಪ್ರಭ ವಾರ್ತೆ ಸಾಗರ ತಾಲೂಕಿನ ಕಸಬಾ ಹೋಬಳಿ ಮೆಳವರಿಗೆ ಗ್ರಾಮದ ಸೂರ್ಯನಾರಾಯಣ ಅವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮಂಗಳವಾರ ತಾಲೂಕು ಬ್ರಾಹ್ಮಣ ಸಮಾಜದ ವತಿಯಿಂದ ಡಿವೈಎಸ್‌ಪಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕಾನೂನು ವ್ಯವಸ್ಥೆಯನ್ನು ಗೌರವಿಸದೇ ವ್ಯಕ್ತಿಯ ಮೇಲೆ ದೈಹಿಕ ಹಲ್ಲೆ ನಡೆಸುವ ಮನಸ್ಥಿತಿಯುಳ್ಳವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಆ ಮೂಲಕ ತಾಲೂಕಿನಲ್ಲಿ ಎಲ್ಲ ಸಮಾಜದವರೂ ನೆಮ್ಮದಿಯಿಂದ ಜೀವನ ನಡೆಸುವಂತೆ ಪೊಲೀಸ್ ಇಲಾಖೆ ಗಮನಹರಿಸಬೇಕು ಎಂದು ತಾಲೂಕು ಬ್ರಾಹ್ಮಣ ಸಮಾಜ ಆಗ್ರಹಿಸಿದೆ.ಮೆಳವರಿಗೆ ಗ್ರಾಮದ ಸೂರ್ಯನಾರಾಯಣ ಎಂಬವರು ಭಾನುವಾರ ಸಂಜೆ ಹಾಲಿನ ಡೈರಿಗೆ ಹೋಗಿ ಬರುತ್ತಿದ್ದರು. ಆಗ ಅದೇ ಗ್ರಾಮದ ದೀಪಕ್, ರಮೇಶ್, ಅಮಿತ್, ನಾಗರಾಜ್ ಮತ್ತು ಅಣ್ಣಪ್ಪ ಮೊದಲಾದವರು ದಾರಿಯಲ್ಲಿ ಅವರನ್ನು ಅಡ್ಡಗಟ್ಟಿದ ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೇ, ದೊಣ್ಣೆಯ ಮೂಲಕ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.
ಇಂಥವರ ಮೇಲೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ಇದೇ ರೀತಿಯ ಘಟನೆ ಪುನರಾವರ್ತನೆ ಆಗುವ ಅಪಾಯವಿದೆ. ಹಾಗಾಗಿ, ಆರೋಪಿಗಳನ್ನು ತಕ್ಷಣ ಬಂಧಿಸಿ, ಶಿಕ್ಷೆ ವಿಧಿಸಬೇಕಿದೆ. ಅಲ್ಲದೆ ಶಾಂತಿ ಪ್ರಿಯರಾದ ನಮ್ಮ ಸಮಾಜಕ್ಕೆ ಇಂತಹ ಭೀತಿಯ ವಾತಾವರಣದಿಂದ ಮುಕ್ತಗೊಳಿಸಿ, ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.ಸಮಾಜದ ಪ್ರಮುಖರಾದ ರಮೇಶ್ ಹಾರೆಗೊಪ್ಪ, ಎಲ್.ಡಿ. ತಿಮ್ಮಪ್ಪ, ಅ.ಪು. ನಾರಾಯಣಪ್ಪ, ಎಂ.ಜಿ. ರಾಮಚಂದ್ರ, ಕೆ.ಸಿ.ದೇವಪ್ಪ, ಹು.ಬಾ. ಅಶೋಕ್, ಚಿಪ್ಳಿ ಸುಬ್ರಮಣ್ಯ, ವಿ.ಜಿ. ಶ್ರೀಧರ, ಶ್ರೀಪಾದ ಮಡಸೂರು, ಇಂದುಮತಿ, ರೂಪ ಸೂರ್ಯನಾರಾಯಣ, ಹವ್ಯಕ ಪ್ರತಿಷ್ಠಾನ ಕೆಳದಿಯ ಅಧ್ಯಕ್ಷ ಕಾನುಗೋಡು ವೆಂಕಟರಾವ್, ಅನಂತರಾಮು ಹಾರೆಗೊಪ್ಪ, ಕೆ.ಸಿ. ಮಂಜುನಾಥ್ ಮತ್ತಿತರರು ಹಾಜರಿದ್ದರು.
- - -ಬಾಕ್ಸ್-1 ಕನ್ನಪ್ಪಗೆ ಜಮೀನು ಮಾರಿದ್ದ ಸೂರ್ಯನಾರಾಯಣಮೆಳವರಿಗೆ ಗ್ರಾಮದ ಸೂರ್ಯನಾರಾಯಣ ತಮ್ಮ ಖಾತೆ ಜಮೀನನ್ನು ಕಳೆದ ಫೆಬ್ರವರಿಯಲ್ಲಿ ಕನ್ನಪ್ಪ ಎಂಬುವವರಿಗೆ ಪರಭಾರೆ ಮಾಡಿದ್ದರು. ಇದನ್ನು ಸಹಿಸದ ಅದೇ ಗ್ರಾಮದ ಹಲವರು ತಕರಾರು ತೆಗೆದು, ತಹಸೀಲ್ದಾರರು, ಉಪವಿಭಾಗಾಧಿಕಾರಿ ಹಾಗೂ ನ್ಯಾಯಾಲಯಕ್ಕೆ ತಗಾದೆ ಸಲ್ಲಿಸಿದ್ದರು. ಎಲ್ಲ ಕಡೆಯಲ್ಲೂ ಜಾಗವು ಸೂರ್ಯನಾರಾಯಣ ಅವರಿಗೆ ಸೇರಿದ್ದು ಎಂದು ದಾಖಲೆಗಳಲ್ಲಿ ಸಾಬೀತಾಗಿದೆ. ಆ ಜಾಗವು ತಮಗೆ ಸಿಗಲಿಲ್ಲ ಎಂಬ ಹತಾಶೆಯಲ್ಲಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - - - ಬಾಕ್ಸ್-2 ಪ್ರಕರಣದಲ್ಲಿ ರಾಜಕೀಯವಿಲ್ಲ ಬೇಳೂರು
ಸೂರ್ಯನಾರಾಯಣ ಅವರ ಮೇಲೆ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿ ಮಾಡಿದ ಬ್ರಾಹ್ಮಣ ಸಮಾಜದವರೊಂದಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು. ಆರೋಪಿಗಳು ಯಾವುದೇ ಜಾತಿಯವರಾದರೂ ಅವರನ್ನು ಬೆಂಬಲಿಸುವುದಿಲ್ಲ. ಹಲ್ಲೆ ಮಾಡಿದ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಲ್ಲೆಯಂತಹ ವಿಚಾರದಲ್ಲಿ ಯಾವುದೇ ರಾಜಕೀಯ ಬೆರೆಸುವುದಿಲ್ಲ ಎಂದು ಸಂಘಟನೆ ಸದಸ್ಯರಿಗೆ ಆಶ್ವಾಸನೆ ನೀಡಿದರು.- - - -7ಕೆ.ಎಸ್.ಎ.ಜಿ.1:
ಮೆಳವರಿಗೆ ಸೂರ್ಯನಾರಾಯಣ ಮೇಲೆ ಹಲ್ಲೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿವೈಎಸ್ಪಿಗೆ ಸಾಗರ ತಾಲೂಕು ಬ್ರಾಹ್ಮಣ ಮಹಾಸಭಾದಿಂದ ಮನವಿ ಸಲ್ಲಿಸಲಾಯಿತು.