- ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಾಲ ನೀಡಿಕೆ ಸರಳೀಕರಿಸಲು ಒತ್ತಾಯ
ಆರ್‌ಬಿಐ ನಿಯಮ ಮೀರಿ ಸಾಲ ವಸೂಲು ಮಾಡುತ್ತಿರುವ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಸರ್ಕಾರಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಆ ಮೂಲಕ ಜನರ ಜೀವ ಉಳಿಸುವಂತೆ ಕರ್ನಾಟಕ ರಾಜ್ಯ ಶೋಷಿತ ಸಮುದಾಯ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎಚ್.ಸಿ.ಮಲ್ಲಪ್ಪ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್‌ಗಳು ಸಾಲ ವಸೂಲಿ ಭರದಲ್ಲಿ ಭಾರತೀಯ ಕಾಲ ಪರಿಮಿತಿ ಅಧಿನಿಯಮ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ, ಸಾಲ ಪಡೆದ ಕುಟುಂಬಗಳಿಗೆ ಇನ್ನಿಲ್ಲದ ತೊಂದರೆ ನೀಡುತ್ತಿವೆ ಎಂದು ಟೀಕಿಸಿದರು.ಮೈಕ್ರೋ ಫೈನಾನ್ಸ್ ವ್ಯಾಪ್ತಿಗೆ ಬರುವ ಸಂಘಗಳು, ಗ್ರಾಮೀಣ ಮಹಿಳೆಯರನ್ನು ಒಂದುಗೂಡಿಸಿ, ಗುಂಪು ಮಾಡುವ ಮೂಲಕ ಸಾಲ ನೀಡಲಾಗುತ್ತದೆ. ಒಂದು ತಿಂಗಳ ಕಂತನ್ನು ಗುಂಪಿನ ಯಾರೇ ಒಬ್ಬ ಸದಸ್ಯರು ಕಟ್ಟದಿದ್ದರೂ, ಉಳಿದವರು ಅದನ್ನು ಕಟ್ಟಬೇಕು. ಸಾಲ, ಕಂತು ವಸೂಲು ಮಾಡುವ ಮೈಕ್ರೋ ಫೈನಾನ್ಸ್ ಅಧಿಕಾರಿ, ಸಿಬ್ಬಂದಿ ಒತ್ತಡ ಹೇರಿ, ಹೆದರಿಸಿ, ಬೆದರಿಸಿ ಹಣ ವಸೂಲು ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದರು.
ವಕೀಲ ಕೆ.ಎಂ.ಅಂಜಿನಪ್ಪ ಮಾತನಾಡಿ, ಖಾಸಗಿ ಹಣಕಾಸು ಸಂಸ್ಥೆ, ಕೈಗಡ ಸಾಲ, ಮೈಕ್ರೋ ಫೈನಾನ್ಸ್ ಸಾಲ ಪಡೆದ ಜನರು ತೊಂದರೆ ಅನುಭವಿಸುವುದು, ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ನೀಡಿಕೆ ಸರಳೀಕರಿಸಬೇಕು. ಸಣ್ಣ ಸಾಲ ನೀಡುವುದಕ್ಕೂ 13 ದಾಖಲೆಗಳನ್ನು ರಾಷ್ಟ್ರೀಕೃತ ಬ್ಯಾಂಕ್ ಕೇಳಿ, ಸಾಲ ಕೊಡಲು ವಿನಾಕಾರಣ ಅಲೆದಾಡಿಸುತ್ತವೆ. ಮೈಕ್ರೋ ಫೈನಾನ್ಸ್‌ಗಳು ಆಧಾರ್ ಕಾರ್ಡ್ ಪಡೆದು ಸಾಲ ನೀಡಿ, ಗೂಂಡಾಗಳ ಮೂಲಕ ಸಾಲ ವಸೂಲು ಮಾಡುತ್ತವೆ. ಅಂತಹ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
- - - -29ಕೆಡಿವಿಜಿ4: