ಬೀರೂರು ಹೋಬಳಿ ಹುಲ್ಲೇಹಳ್ಳಿಯಲ್ಲಿ ನಡೆದ ಗ್ರಾಮ ಪಂಚಾಯ್ತಿ ಮಟ್ಟದ ಜನಸಂಪರ್ಕ ಸಭೆ:
ಕನ್ನಡಪ್ರಭ ವಾರ್ತೆ, ಬೀರೂರುಕಡೂರು ತಾಲೂಕಿನಲ್ಲಿ ಯಾವ ನಾಡಕಚೇರಿಯ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಅಧಿಕಾರಿಗಳು ಸರಿಯಾಗಿ ಜವಾಬ್ದಾರಿಯುತರಾಗಿ ಕಾರ್ಯನಿರ್ವಹಿಸುದಿಲ್ಲವೋ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ತಹಸೀಲ್ದಾರ್ ಪೂರ್ಣಿಮ ಅವರಿಗೆ ಶಾಸಕ ಕೆ.ಎಸ್.ಆನಂದ್ ಸೂಚಿಸಿದರು.ಶನಿವಾರ ಬೀರೂರು ಹೋಬಳಿ ಹುಲ್ಲೇಹಳ್ಳಿ ಗ್ರಾಪಂ ಮಟ್ಟದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಗಲೇ 6 ಗ್ರಾಮ ಪಂಚಾಯ್ತಿ ಜನಸಂಪರ್ಕ ಸಭೆ ನಡೆಸಲಾಗಿದ್ದು, ಎಲ್ಲಿ ನೋಡಿದರೂ ಸಹ ಕಂದಾಯ ಇಲಾಖೆ ಸಮಸ್ಯೆಗಳೇ ಹೆಚ್ಚಾಗಿ ಕಾಣುತ್ತಿದೆ. ಇದಕ್ಕೆ ಮೂಲ ಕಾರಣ ಕಂದಾಯ ಇಲಾಖೆ ವಿಎ ಮತ್ತು ಆರ್ಐ ಗಳೇ ಕಾರಣ. ಇವರು ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಕೇಳಿಅವರಿಗೆ ಅಗತ್ಯವಾದ ಪೋಡಿ, ಇಸ್ವತ್ತು, ಖಾತೆ, ನಕಾಶೆ ರಸ್ತೆ ಇಂತಹ ಮತ್ತಿತರ ಇಂತಹ ಸಮಸ್ಯೆ ಉದ್ಬವಾಗುತ್ತಿರಲಿಲ್ಲ.ಕೆಳ ಹಂತದ ಅಧಿಕಾರಿಗಳು ಕೆಲಸ ಮಾಡದೇ ಹೋದರೆ ತಹಸೀಲ್ದಾರ್ ತಾನೇ ಹೇಗೆ ಕಾರ್ಯ ನಿರ್ವಹಿಸಲು ಸಾಧ್ಯ. ಆದ್ದರಿಂದ ಯಾವ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕ ಸರಿಯಾಗಿ ಕರ್ತವ್ಯ ನಿರ್ವಹಿಸುದಿಲ್ಲವೋ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡಿ ಎಂದರು.ಈ ಅಧಿಕಾರಿಗಳು ಮಾಡದ ತಪ್ಪಿನಿಂದ ಹಲವು ವರ್ಷಗಳಿಂದ ಜನ ಕಂದಾಯ ಇಲಾಖೆಗೆ ಅಲೆದು ಸುಸ್ತಾಗಿರೋದು ಕಂಡು ಬಂದಿದೆ. ಹುಲ್ಲೇಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲೇ ಸುಮಾರು 465 ಮನೆಗೆ ಇನ್ನು ಇ-ಸ್ವತ್ತು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಜನ ನಮ್ಮ ಮೇಲೆ ನಿರೀಕ್ಷೆ ಇಟ್ಟು ಆಯ್ಕೆ ಮಾಡಿದ್ದಾರೆ. ಅಂತಹ ನೊಂದವರಿಗೆ ನ್ಯಾಯ ಕೊಡಿಸಲು ಆಗದ ಪರಿಸ್ಥಿತಿ ಇದೆ ಎಂದರು.ಜನರ ಕಷ್ಟ ಆಲಿಸಲು ಈ ಜನ ಸಂಪರ್ಕ ಸಭೆ ಏರ್ಪಡಿಸಿ, ತಾಲೂಕು ಆಡಳಿತವನ್ನೆ ಪಂಚಾಯ್ತಿ ವ್ಯಾಪ್ತಿಗೆ ತಂದಿದ್ದು ನಿಮ್ಮ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಒದಗಿಸಲಾಗುವುದು ಎಂದರು.ಕ್ಷೇತ್ರದ 14 ಗ್ರಾಪಂ ನೂತನ ಕಟ್ಟಲು ರಾಜ್ಯ ಸರ್ಕಾರವೇ ಪ್ರತಿ ಗ್ರಾ.ಪಂ.ಗೆ 25ಲಕ್ಷ ಬಿಡುಗಡೆ ಮಾಡಿದ್ದು, ಆದಷ್ಟು ಬೇಗ ಕಾಮಗಾರಿಗಳು ಪ್ರಾರಂಭವಾಗಲಿವೆ. ಗ್ರಾಮೀಣರ ಅನುಕೂಲಕ್ಕೆ ಬೀರೂರು ಪಟ್ಟಣದಲ್ಲೆ ಮೊರಾರ್ಜಿ ವಸತಿ ಶಾಲೆ ಪ್ರಾರಂಭವಾಗಲಿದೆ. ಇದರಿಂದ ಅನೇಕ ಬಡ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದರು.ಗ್ರಾಮ ಪಂಚಾಯ್ತಿ ಸದಸ್ಯ ನರಸಿಂಹ ಮೂರ್ತಿ ಮಾತನಾಡಿ, ಹುಲ್ಲೇ ಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಗುರುತಿಸಿರುವ ನಕಾಶೆ ರಸ್ತೆಗಳು ಒತ್ತುವರಿಯಾಗಿರುವ ಹಿನ್ನಲೆಯಲ್ಲಿ ಎಲ್ಲೂ ರೈತರು ಜಮೀನುಗಳಿಗೆ ತೆರಳಲು ರಸ್ತೆ ಇಲ್ಲದಂತಾಗಿದೆ. ಮೊದಲು ಈ ಸಮಸ್ಯೆ ಬಗೆಹರಿಸಿ ಎಂದಾಗ ಉತ್ತರಿಸಿದ ತಹಸೀಲ್ದಾರ್ ಪೂರ್ಣಿಮ ಅಂತಹ ದಾಖಲೆಗಳನ್ನು ಇಲಾಖೆಗೆ ನೀಡಿದರೆ ಪರಿಶೀಲಿಸಿ ರಸ್ತೆ ಬಿಡಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು.ಯರೇಹಳ್ಳಿ ಸರ್ಕಾರಿ ಕಿರಿಯ ಶಾಲೆಯಲ್ಲಿ 43 ಮಕ್ಕಳಿದ್ದು, ಶಾಲೆಗೆ ಇಬ್ಬರು ಶಿಕ್ಷಕರು ಮಾತ್ರ ಇದ್ದಾರೆ. ಇನ್ನೋರ್ವ ಶಿಕ್ಷಕರನ್ನು ನೇಮಕ ಮಾಡಿಕೊಡುವಂತೆ ಗ್ರಾಮಸ್ಥರು ಶಾಸಕರನ್ನು ಒತ್ತಾಯಿಸಿದರು.ಹುಲ್ಲೇಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 2002ರಕ್ಕಿಂತ ಹಿಂದಿನ ಅಸಸ್ಮೆಂಟ್ ಪುಸ್ತಕ ನಶಿಸಿಹೋಗಿದೆ ಎಂದು ಅಧಿಕಾರಿಗಳು ಉತ್ತರ ನೀಡುತ್ತಾರೆ. ನಮಗೆ ಹಿಂದಿನ ದಾಖಲೆಗಳೇನಾದರೂ ಬೇಕಾದರೇ ಎನು ಮಾಡಬೇಕು. ಸರ್ಕಾರಿ ಕಡತಗಳನ್ನು ಸಂಕ್ಷಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದರು.ಈ ಪ್ರಕರಣವನ್ನು ತನಿಖೆ ಮಾಡಿಸಿ, ಸರ್ಕಾರಿ ಖಡತದ ಬಗ್ಗೆ ಶೀಘ್ರ ವರದಿ ನೀಡಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಗ್ರಾ.ಪಂ.ಉಪಾಧ್ಯಕ್ಷ ಎಂ.ಲಕ್ಷ್ಮಣ್ ಮಾತನಾಡಿ, ಸರ್ಕಾರದ ಈ ಕಾರ್ಯಕ್ರಮ ಉತ್ತಮವಾಗಿದೆ. ಇದರಿಂದ ರೈತರ ಅನೇಕ ಸಮಸ್ಯೆಗಳು ಬಗೆಹರಿಯಲಿವೆ. ನಮ್ಮ ಅವಧಿಯಲ್ಲಿ ಉತ್ತಮ ಕಾರ್ಯಕ್ರಮ ಮಾಡಲಾಗಿದೆ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಪೂರ್ಣಿಮ, ತಾಲೂಕು ಇಒ ಸಿಎಸ್.ಪ್ರವೀಣ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ರುದ್ರಪ್ಪ, ಸದಸ್ಯರಾದ ವೈ.ಪಿ.ಲೋಕೇಶ್, ನಾಗಮ್ಮ, ಶಾಂತಮ್ಮ, ಸೌಭಾಗ್ಯಮ್ಮ, ಧನಲಕ್ಷ್ಮಿ, ಮಂಜುಳ, ಸ್ನೇಹ, ಎಚ್.ಜಿ.ನರಸಿಂಹ, ಮೂರ್ತಿ, ಗ್ರಾಮಸ್ಥ ಮುದಿಯಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು, ಗೌಡರು ತಾಲ್ಲೂಕಿನ 27 ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
-- ಬಾಕ್ಸ್: --ಅಕ್ರಮ ಮಧ್ಯ ಮಾರಾಟ
ಹುಲ್ಲೇಹಳ್ಳಿ ಗ್ರಾಮದ ಮಹಿಳೆ ಸುಪ್ರಿತಾ ಮಂಜಪ್ಪ ಮಾತನಾಡಿ, ಗ್ರಾಮದ ಪ್ರತಿ ಅಂಗಡಿಯಲ್ಲೂ ಅಕ್ರಮವಾಗಿ ಯಥೇಚ್ಛವಾಗಿ ಮಧ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕೂಲಿ ಮಾಡಿ ಜೀವನ ಸಾಗಿಸುವ ಅನೇಕ ಕುಟುಂಬಗಳು ಬೀದಿಗೆ ಬರುತ್ತಿವೆ. ಯುವಕರು ಸಹ ಈ ದುಶ್ಚಟಕ್ಕೆ ಬಲಿಯಾಗಿ ವಿದ್ಯಾಭ್ಯಾಸ ತ್ಯಜಿಸುತ್ತಿದ್ದಾರೆ. ಇದಕ್ಕೆ ಪೊಲೀಸರ ಕುಮ್ಮಕ್ಕಿದೆ ಎಂದು ಬಹಿರಂಗ ಸಭೆಯಲ್ಲಿ ದೂರಿದರು. ಶಾಸಕ ಆನಂದ್, ಅಬಕಾರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಇದಕ್ಕೆ ಉತ್ತರಿಸಬೇಕು. ಎಂದಾಗ ಅಬಕಾರಿ ಇನ್ಸ್ ಪೆಕ್ಟರ್ ಊರಿನ ಜನವೇ ಅಕ್ರಮ ಮದ್ಯ ಮಾರಾಟಕ್ಕೆ ಬೆಂಬಲ ನೀಡಿದರೆ ನಾವೇನು ಮಾಡಲು ಸಾಧ್ಯ ಎಂದರು.ಮಹಿಳೆಯರೇ ಬಂದು ತಮ್ಮ ಗ್ರಾಮದಲ್ಲಿ ನಡೆಯುವ ಅಕ್ರಮದ ಹೇಳುವಾಗ ಇದಕ್ಕೆ ಅಧಿಕಾರಿಗಳು ಸೂಕ್ತ ರೀತಿ ಕ್ರಮ ಕೈಗೊಳ್ಳದಿದ್ದರೇ ಮುಂದಿನ ದಿನಗಳಲ್ಲಿ ವಿಧಾನ ಸಭೆ ಕಲಾಪದಲ್ಲಿ ಚರ್ಚಿಸಬೇಕಾಗುತ್ತದೆ ಎಂದು ಶಾಸಕರು ಹೇಳಿದರು.15 ಬೀರೂರು 1ಬೀರೂರು ಹೋಬಳಿ ಹುಲ್ಲೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ಗ್ರಾಪಂ ಮಟ್ಟದ ಜನಸಂಪರ್ಕ ಸಭೆ ಅಧ್ಯಕ್ಷತೆಯನ್ನು ಶಾಸಕ ಕೆ.ಎಸ್.ಆನಂದ್ ವಹಿಸಿದ್ದರು. ತಹಸೀಲ್ದಾರ್ ಪೂರ್ಣಿಮ, ತಾಲೂಕು ಇಒ ಸಿಎಸ್.ಪ್ರವೀಣ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ಲಕ್ಷ್ಮಣ್ ಸೇರಿದಂತೆ ಮತ್ತಿತರರುಗಳು ಇದ್ದರು.