ಪರ್ಮಿಟ್ ಇಲ್ಲದ ಕರಿಕಲ್ಲು ಲಾರಿಗಳಿಗೆ ಕ್ರಮ ವಹಿಸಿ

KannadaprabhaNewsNetwork | Published : Jul 31, 2024 1:05 AM

ಸಾರಾಂಶ

ಯಳಂದೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಒಂದು ಕರಿಕಲ್ಲಿನ ಪರ್ಮಿಟ್ ಪಡೆದುಕೊಂಡು ಹಲವಾರು ಲೋಡುಗಳ ಭಾರಿ ತೂಕದ ಕಲ್ಲುಗಳನ್ನು ಅಕ್ರಮವಾಗಿ ಲಾರಿಗಳಲ್ಲಿ ಸಾಗಿಸಲಾಗುತ್ತಿದೆ ಎಂಬುದು ಸಾರ್ವಜನಿಕರ ದೂರಾಗಿದ್ದು ಇವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ವಹಿಸಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಗಣಿ, ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ತಾಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ತಾಲೂಕಿನಲ್ಲಿ ಅಕ್ರಮವಾಗಿ ಕರಿಕಲ್ಲನ್ನು ರಾತ್ರೋರಾತ್ರಿ ಭಾರಿ ತೂಕದ ಲಾರಿಗಳಲ್ಲಿ ಸಾಗಾಟ ಮಾಡಲಾಗುತ್ತಿದೆ. ಅಲ್ಲದೆ ಇಲ್ಲಿನ ಕ್ವಾರಿಗಳಿಂದ ಮಣ್ಣನ್ನು ಎತ್ತಲಾಗುತ್ತಿದ್ದು ನೂರಾರು ಲೋಡ್ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ಇಂತಹ ಲಾರಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ವಹಿಸಬೇಕು. ಈ ಹಿಂದೆ ನಾನು ಖುದ್ದು ಬೈಪಾಸ್ ರಸ್ತೆಯಲ್ಲಿ ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿ ಬಗ್ಗೆ ದೂರವಾಣಿ ಮೂಲಕ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಆದರೂ ಕೂಡ ಅವರು ಕ್ರಮ ವಹಿಸಿಲ್ಲ. ಮುಂದೆ ಹೀಗಾಗಬಾರದು ಪರ್ಮಿಟ್ ಪಡೆದುಕೊಂಡಷ್ಟು ಲಾರಿಗಳನ್ನು ಮಾತ್ರ ಕಲ್ಲು ಸಾಗಾಟಕ್ಕೆ ಅನುಮತಿ ನೀಡಬೇಕು. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.ತಾಲೂಕಿನ ಬಿಳಿಗಿರಿ ರಂಗನಬೆಟ್ಟದ ಪೋಡುಗಳಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿರುವ ಬುಡಕಟ್ಟು ಸೋಲಿಗ ಜನರಿಗೆ ವಿನಾ ಕಾರಣ ತೊಂದರೆ ನೀಡಲಾಗುತ್ತಿದೆ ಎಂಬ ದೂರಿದೆ. ಈ ಬಗ್ಗೆ ಅವರು ಪ್ರತಿಭಟನೆಯನ್ನು ಮಾಡಿದ್ದಾರೆ. ಕಾಡಿನ ಮೂಲನಿವಾಸಿಗಳಾದ ಇವರಿಗೆ ವಿನಾ ಕಾರಣ ತೊಂದರೆ ನೀಡಬಾರದು. ಈ ಸಮಸ್ಯೆಯನ್ನು ಬಗೆಹರಿಸಬೇಕು. ಬೆಟ್ಟಕ್ಕೆ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಇನ್ನೂ ನೀಡಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ತೊಂದರೆ ನೀಡುತ್ತಿದ್ದು ಈ ಸಮಸ್ಯೆಯನ್ನು ಬಗೆಹರಿಸಿ ಇಲ್ಲಿ ಟ್ಯಾಂಕ್ ನಿರ್ಮಾಣ ಮಾಡಲು ಅನುಕೂಲ ಮಾಡಿಕೊಡಬೇಕು. ಬೆಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಇಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯಿಸಿ ನೀರು ಪೂರೈಸಬೇಕು. ವಿದ್ಯುತ್ ಸಮಸ್ಯೆಯೂ ಇದ್ದು ಸೆಸ್ಕ್ ಸಿಬ್ಬಂಧಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜಂಗಲ್ ಕಟಿಂಗ್ ಮಾಡಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.ಯಳಂದೂರು ತಾಲೂಕು ಭೂ ದಾಖಲೆಗಳನ್ನು ಗಣಕೀಕರಣ ಮಾಡಿ ಜಿಲ್ಲೆಯಲ್ಲಿ ಪ್ರಥಮ ಎನಿಸಿಕೊಂಡಿದೆ. ಇದಕ್ಕೆ ಸಹಕರಿಸಿದ ಅಧಿಕಾರಿ, ಇಲಾಖೆಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ಬ್ಯಾಂಕಿನ ಸಿಬ್ಬಂದಿಯಲ್ಲಿ ಅನೇಕರು ಹೊರ ರಾಜ್ಯದವರಾಗಿದ್ದು ಕನ್ನಡದಲ್ಲಿ ಮಾತನಾಡಲು ಬಾರದೆ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಿ ಇವರಿಗೆ ಕನ್ನಡ ಭಾಷೆಯನ್ನು ಕಲಿಸುವ ಕೆಲಸವನ್ನು ಮಾಡಬೇಕು ಎಂದು ಲೀಡ್ ಬ್ಯಾಂಕ್‌ನ ಅಧಿಕಾರಿಗೆ ಸೂಚನೆ ನೀಡಿದರು.ಈಗ ಉತ್ತಮ ಮಳೆಯಾಗುತ್ತಿದ್ದು ರೈತರಿಗೆ ಬೇಕಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರ, ಔಷಧಿಗಳ ದಾಸ್ತಾನು ಇಟ್ಟುಕೊಳ್ಳಬೇಕು, ಪಟ್ಟಣದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯ ಇರುವಷ್ಟು ಭೂಮಿಯನ್ನು ಗುರುತಿಸಲು ಈಗಾಗಲೆ ಜಾಗವನ್ನು ಗುರುತಿಸಲಾಗಿದೆ. ಆದರೆ ದೊಡ್ಡ ಕ್ರೀಡಾಂಗಣಕ್ಕೆ ಆಗುವಷ್ಟು ಸ್ಥಳ ಇಲ್ಲಿಲ್ಲ. ಹಾಗಾಗಿ ಇರುವ ಜಾಗದಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯವಾಗುಷ್ಟು ಭೂಮಿ ಎಷ್ಟು ಎಂಬುದರ ಬಗ್ಗೆ ಕ್ರೀಡಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಬೇಕು. ಪಂಚಾಯತ್ ರಾಜ್ ಇಲಾಖೆಯಲ್ಲಿ ಬಂದಿರುವ ಅನುದಾನ ವಾಪಸ್ಸಾಗಿರುವ ಬಗ್ಗೆ ಹಾಗೂ ಕೆಲಸ ಮಾಡದೆ ಬಿಲ್ ಮಾಡಿಕೊಂಡಿರುವ ಬಗ್ಗೆ ಆದಷ್ಟು ಬೇಗ ವರದಿ ನೀಡಿ ಕ್ರಮ ವಹಿಸಬೇಕು. ಪಟ್ಟಣದಲ್ಲಿರುವ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ವಹಿಸಬೇಕು. ಮುಂದಿನ ಸಭೆಯಲ್ಲಿ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ವರದಿಯನ್ನು ಸಭೆ ನಡೆಯುವ ವಾರದ ಮುಂಚೆಯೇ ಇದನ್ನು ನೀಡಬೇಕು. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ತೊಂದರೆಯನ್ನು ನಿವಾರಿಸಿ ಇದನ್ನು ಜನರಿಗೆ ತಲುಪುವಂತೆ ಮಾಡಬೇಕು ಎಂದು ಸಲಹೆ ನೀಡಿದರು.ಗ್ಯಾರಂಟಿ ಯೋಜನೆಯ ಅನುಷ್ಠಾನದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ತಾಪಂ ಆಡಳಿತಾಧಿಕಾರಿ ಕಿರಣ್ ಫಡ್ನೇಕರ್, ತಹಶೀಲ್ದಾರ್ ಜಯಪ್ರಕಾಶ್, ಇಒ ಉಮೇಶ್, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಡಿವೈಎಸ್‌ಪಿ ಧರ್ಮೇಂದ್ರ, ಸಿಪಿಐ ಶ್ರೀಕಾಂತ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Share this article