- ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ ನೇಮಕಾತಿ ನಿಷೇಧ-ಪುನರ್ವಸತಿ ಅಧಿನಿಯಮ ಜಾಗೃತಿ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013 ರನ್ವಯ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೌರ ಕಾರ್ಮಿಕರು ಸ್ವಚ್ಛತೆ ಕಾರ್ಯ ಮಾಡುವ ಸಂದರ್ಭದಲ್ಲಿ ಅವರಿಗೆ ವಿಶ್ರಾಂತಿ ಅಗತ್ಯವಿದ್ದು, ಅವರ ವಿಶ್ರಾಂತಿಗಾಗಿ ವಿಶ್ರಾಂತಿ ಗೃಹಗಳನ್ನು ಕಡ್ಡಾಯವಾಗಿ ನಿರ್ಮಿಸಬೇಕು. ಇವುಗಳಿಗೆ ಅಗತ್ಯವಾದ ನಿವೇಶನವನ್ನು ಗುರುತಿಸಿ ಕ್ರಮ ವಹಿಸುವಂತೆ ತಿಳಿಸಿದರು.ಪೌರ ಕಾರ್ಮಿಕರು ಸ್ವಚ್ಛತೆ ಸಂದರ್ಭದಲ್ಲಿ ಅವರಿಗೆ ನೀಡಿರುವ ಶೂ, ಕೈಗವಸವನ್ನು ಕಡ್ಡಾಯವಾಗಿ ಧರಿಸುವಂತೆ ತಿಳಿಸ ಬೇಕು. ಪ್ರತಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಎಲ್ಲಾ ಸಫಾಯಿ ಕರ್ಮಚಾರಿಗಳು ಹಾಗೂ ಪೌರ ಕಾರ್ಮಿಕರಿಗೆ ಆಯುಷ್ಮಾನ ಕಾರ್ಡ್, ಪ್ರಧಾನ ಮಂತ್ರಿ ಸುರಕ್ಷಾ ಭೀಮ್ ಯೋಜನೆ ಮತ್ತು ಜೀವನ್ ಜ್ಯೋತಿ ಯೋಜನೆಯಲ್ಲಿ ಎಲ್ಲರನ್ನು ನೋಂದಾಯಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಪೌರ ಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳುವಂತೆ ಸೂಚಿಸಿದರು. ಪದವಿ ವ್ಯಾಸಂಗ ಮಾಡುತ್ತಿರುವ ಪೌರ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ ಟಾಪ್ ನೀಡುವಂತೆ ಸದಸ್ಯರು ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ದಾಖಲಾತಿ ಪಡೆದು ಲ್ಯಾಪ್ ಟಾಪ್ ವಿತರಿಸಲು ಕ್ರಮ ವಹಿಸುವಂತೆ ಹೇಳಿದರು.
ಜಿಲ್ಲೆಯಲ್ಲಿ ಶಾಲೆ, ವಿದ್ಯಾರ್ಥಿನಿಲಯಗಳಲ್ಲಿ ಶೌಚಾಲಯ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳನ್ನು ಬಳಸುವಂತಿಲ್ಲ. ಅಂತಹ ಪ್ರಕರಣಗಳು ಕಂಡು ಬಂದರೆ ಸಂಬಂಧಿಸಿದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚಿರಿಸಿದ ಅವರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿರುವ ಸಕ್ಕಿಂಗ್ ಯಂತ್ರಗಳಿಂದ ಸರದಿ ಅನುಸಾರ ಶಾಲೆಗಳ ಶೌಚಾಲಯ ಸ್ವಚ್ಛಗೊಳಿಸಲು ಬಳಸುವಂತೆ ತಿಳಿಸಿದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ, ನಗರಾಭಿವೃದ್ಧಿ ಕೋಶದ ಯೋಜನಾಧಿ ಕಾರಿ ನಾಗರತ್ನ, ಚಿಕ್ಕಮಗಳೂರು ನಗರಸಭೆ ಪೌರಾಯುಕ್ತ ಬಸವರಾಜು, ಸದಸ್ಯರಾದ ರಾಧಾಕೃಷ್ಣ, ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗೀಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.23 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ ಜಾಗೃತಿ ಸಭೆ ನಡೆಯಿತು. ಜಿಪಂ ಸಿಇಓ ಡಾ. ಗೋಪಾಲಕೃಷ್ಣ ಇದ್ದರು.