ಹೊಸಪೇಟೆ: ಕಲುಷಿತ ನೀರು ಸೇವನೆಯಿಂದ ವಾಂತಿ-ಭೇದಿ ಪ್ರಕರಣಗಳು ಹೆಚ್ಚು ಉಲ್ಬಣವಾಗುತ್ತಿದ್ದರೆ, ಅಂತಹ ಪ್ರದೇಶಗಳನ್ನು ಗುರುತಿಸಿ ಜಿಲ್ಲಾಡಳಿತಗಳಿಗೆ ಅಂಕಿ-ಅಂಶಗಳನ್ನು ಒದಗಿಸಬೇಕು. ಸಂಬಂಧಿಸಿದ ಇಲಾಖೆಗಳು ಸೇರಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಹಳ್ಳಿ, ನಗರ, ಪಟ್ಟಣಗಳಲ್ಲಿ ವಾಂತಿ-ಭೇದಿ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಹರಪನಹಳ್ಳಿ ತಾಲೂಕಿನ ಟಿ. ತುಂಬಿಗೆರೆ ಗ್ರಾಮದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಂತಹ ಪ್ರಕರಣಗಳು ಉಲ್ಬಣಿಸದಂತೆ ಜಿಪಂ ಸಿಇಒ, ಡಿಎಚ್‌ಒಗಳು ಹಾಗೂ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪೌರಾಯುಕ್ತರು ಕೂಡ ಕ್ರಮವಹಿಸಬೇಕು ಎಂದು ಸಚಿವರು ಸೂಚಿಸಿದರು.
ಡಿಎಚ್‌ಒ ಡಾ. ಎಲ್.ಆರ್. ಶಂಕರನಾಯ್ಕ ಮಾತನಾಡಿ, ಟಿ. ತುಂಬಿಗೆರೆ ಗ್ರಾಮದಲ್ಲಿ ಈಗಾಗಲೇ ಆರೋಗ್ಯ ಇಲಾಖೆಯ ತಂಡ ಮೊಕ್ಕಾಂ ಹೂಡಿದೆ. ನಾಲ್ಕು ಮನೆಗಳಲ್ಲಿ ಈ ಸಮಸ್ಯೆ ಇದೆ. ಉಳಿದಂತೆ ಗ್ರಾಮದಲ್ಲಿ ಈ ರೀತಿ ಸಮಸ್ಯೆ ಕಂಡುಬಂದಿಲ್ಲ. ಇಲಿಮೂತ್ರ ಜ್ವರ ಇರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆಯೂ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ. ಕುಡಿಯುವ ನೀರು ಹಾಗೂ ಸ್ವಚ್ಛತೆ ಸಮಸ್ಯೆಯಿಂದ ಈ ರೀತಿ ಸಮಸ್ಯೆ ಉಂಟಾಗಿದೆ ಎಂದರು.ಜಿಪಂ ಸಿಇಒಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಗ್ರಾಪಂ ಅಧಿಕಾರಿಗಳಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಬಗ್ಗೆ ಕ್ರಮವಹಿಸಲು ಸೂಚಿಸಬೇಕು ಎಂದು ಸಚಿವರು ಸಭೆಯಲ್ಲಿ ಸೂಚಿಸಿದರು.
ವೈದ್ಯರ ಕೊರತೆ ನಿಭಾಯಿಸಿ
ತಾಯಿ ಮತ್ತು ಶಿಶು ಮರಣವನ್ನು ಕಡಿಮೆ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿಜೇರಿಯನ್ ಹೆರಿಗೆ ಕಡಿಮೆ ಮಾಡಬೇಕು. ಈ ಭಾಗದಲ್ಲಿ ಪೌಷ್ಟಿಕ ಆಹಾರಕ್ಕೆ ಒತ್ತು ನೀಡಬೇಕು. ಕೊಪ್ಪಳದಲ್ಲಿ ತಾಯಿ ಮತ್ತು ಶಿಶು ಮರಣ ಹೆಚ್ಚಿದೆ. ಇದನ್ನು ಕಡಿಮೆ ಮಾಡಬೇಕು ಎಂದು ಸೂಚಿಸಿದರು.
ಆರೋಗ್ಯದ ವಿಷಯದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಬೀಳಬಾರದು. ಈಗಾಗಲೇ ಕೆಕೆಆರ್‌ಡಿಬಿ ಅನುದಾನದಡಿ ಈ ಭಾಗದಲ್ಲಿ ಸೌಲಭ್ಯ ಒದಗಿಸಲು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಹಾಗಾಗಿ ಮೊದಲು ಉಪಕೇಂದ್ರಗಳು, ನಮ್ಮ ಕ್ಲಿನಿಕ್, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯ ಒದಗಿಸಬೇಕು. ಜನರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸಚಿವರು ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು.
ಶಾಸಕರಾದ ಬಸವರಾಜ ರಾಯರೆಡ್ಡಿ, ಎಚ್.ಆರ್. ಗವಿಯಪ್ಪ, ರಾಘವೇಂದ್ರ ಹಿಟ್ನಾಳ್, ಡಾ. ಎನ್.ಟಿ. ಶ್ರೀನಿವಾಸ್, ಕೃಷ್ಣ ನಾಯ್ಕ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಉಭಯ ಜಿಲ್ಲೆಗಳ ಡಿಎಚ್‌ಒಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಸಚಿವ ಗುಂಡೂರಾವ್
ಕೂಡ್ಲಿಗಿ: ಕರ್ನಾಟಕದಲ್ಲಿ ನಡೆಯುವ ಮೂರು ಉಪಚುನಾವಣೆಯಲ್ಲಿ ಮೂರಕ್ಕೆ ಮೂರೂ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸುವುದು ಖಚಿತ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.ಮಂಗಳವಾರ ಕೂಡ್ಲಿಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.ಕಾಂಗ್ರೆಸ್ ಕರ್ನಾಟಕದಲ್ಲಿ ಸುಭದ್ರ ಆಡಳಿತ ನಡೆಸುತ್ತಿದ್ದು ಯಾವುದೇ ಅಡ್ಡಿಯಾಗದೆ ನಡೆಯುತ್ತಿರುವ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ ಎಂದರು.