ಚುನಾವಣಾ ವೆಚ್ಚಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ: ಮುರಳಿ ಕುಮಾರ್‌

KannadaprabhaNewsNetwork | Published : Apr 17, 2024 1:20 AM

ಸಾರಾಂಶ

ಹಾಸನ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳು ಅಕ್ರಮವಾಗಿ ನಡೆಸುವ ಎಲ್ಲಾ ವೆಚ್ಚಗಳನ್ನು ನಿಯಂತ್ರಿಸಲು ಸರ್ವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ತಪಾಸಣಾ ಕಾರ್ಯಗಳನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗದ ವಿಶೇಷ ವೆಚ್ಚ ವೀಕ್ಷಕರಾದ ಮುರಳಿ ಕುಮಾರ್ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಹಾಸನ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳು ಅಕ್ರಮವಾಗಿ ನಡೆಸುವ ಎಲ್ಲಾ ವೆಚ್ಚಗಳನ್ನು ನಿಯಂತ್ರಿಸಲು ಸರ್ವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ತಪಾಸಣಾ ಕಾರ್ಯಗಳನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗದ ವಿಶೇಷ ವೆಚ್ಚ ವೀಕ್ಷಕರಾದ ಮುರಳಿ ಕುಮಾರ್ ಸೂಚಿಸಿದ್ದಾರೆ.ನಗರದ ಪ್ರವಾಸಿ ಮಂದಿರದಲ್ಲ್ಲಿ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ನೋಡಲ್ ಅಧಿಕಾರಿಗಳು ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾ ಅಧಿಕಾರಿಗಳು ಮತ್ತು ವಿವಿಧ ಚುನಾವಣಾ ತಂಡಗಳ ಮುಖ್ಯಸ್ಥರ ಸಭೆ ನಡೆಸಿ ಮಾತನಾಡಿದರು.

ಸಂಶಯಾಸ್ಪದ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ನಿಗಾ ಇಡಬೇಕು. ದೊಡ್ಡ ಮೊತ್ತದ ಹಣ ಸಾಗಾಟದ ಸಂದರ್ಭದಲ್ಲಿ ಹಣದ ಮೂಲದ ಮಾಹಿತಿ ಪಡೆಯಬೇಕು. ಚೆಕ್‌ಪೋಸ್ಟ್ ತಪಾಸಣೆಯನ್ನು ಬಿಗಿಗೊಳಿಸಿ, ಅಕ್ರಮ ಸಾಗಾಟಗಳನ್ನು ನಿಯಂತ್ರಿಸಬೇಕು. ಅಕ್ರಮ ಹಣ, ಸರಕು ಸಾಗಾಟ ಕಂಡುಬಂದ ಕೂಡಲೇ ವಶಪಡಿಸಿ, ಚುನಾವಣಾ ಆಯೋಗಕ್ಕೆ ವರದಿ ಮಾಡಬೇಕು. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಖರ್ಚು ವೆಚ್ಚಗಳು ನಿಯಮಾನು ಸಾರವೇ ನಡೆಯಬೇಕು. ಅಕ್ರಮವಾಗಿ ಪಾವತಿ ಮತ್ತು ವೆಚ್ಚ ಮಾಡಲು ಅವಕಾಶ ನೀಡಬಾರದು ಎಂದು ಅವರು ತಿಳಿಸಿದರು.

ತಪಾಸಣಾ ತಂಡಗಳು ನಿರಂತರ ಸಂಚಾರದಲ್ಲಿರಬೇಕು. ಚೆಕ್‌ಪೋಸ್ಟ್‌ಗಳನ್ನು ಒಂದೇ ಕಡೆಗೆ ಸೀಮಿತಗೊಳಿಸದೆ, ಬೇರೆ ಬೇರೆ ಸ್ಥಳಗಳಲ್ಲಿ ಸ್ಥಾಪಿಸಬೇಕು. ಸಭೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ವೆಚ್ಚ ವೀಕ್ಷಕ ವಿಕಾಸ್ ಸಿಂಗ್ ಭಗ್ರಿ, ವೈಭವ್ ಅಗರವಾಲ್ ಉಪಸ್ಥಿತರಿದ್ದರು.

ಸಭೆಯಲ್ಲಿ ವೀಕ್ಷಕರು ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯಾಚರಣೆಗಳ ಮಾಹಿತಿ ಪಡೆದರು. ಜಿಲ್ಲಾ ಚುನಾವಣಾಧಿಕಾರಿ ಸತ್ಯಭಾಮಾ ಕೇಂದ್ರ ವೀಕ್ಷಕರಿಗೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಚುನಾವಣಾ ಸಿದ್ಧತೆಗಳ ಮಾಹಿತಿ ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ಪೂರ್ಣಿಮಾ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಮೊಹಮ್ಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಳಾ, ಆದಾಯ ತೆರಿಗೆ ಇಲಾಖೆ ಅಧಿಕಾರಿ ದರ್ಶನ್ ಕುಮಾರ್ ಮತ್ತಿತರರಿದ್ದರು.

Share this article